ನೂತನ ಸುಧಾರಿತ ಸಂಚಾರಿ ನಿಯಮಕ್ಕೆ ಚಾಲನೆ; ಮೈಸೂರಿನಲ್ಲಿ ಸಾರ್ವಜನಿಕರಿಂದ ಸ್ವಯಂ ವಾಹನ ತಪಾಸಣೆ
ಮೈಸೂರಿನ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ 10 ತಪಾಸಣೆ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಕಳೆದ ಎರಡು ದಿನಗಳಿಂದ ಈ ತಪಾಸಣಾ ಕೇಂದ್ರದಲ್ಲಿ ಸಾರ್ವಜನಿಕರು ಬಂದು ತಮ್ಮ ವಾಹನಗಳನ್ನ ತಪಾಸಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಪೊಲೀಸರು ವಾಹನ ತಪಾಸಣೆ ನಡೆಸಿ ಬರುವ ವಾಹನ ಸವಾರರಿಗೆ ಮಜ್ಜಿಗೆ ನೀಡಿ ಜನಸ್ನೇಹಿಯಾಗಿ ವರ್ತನೆ ಮಾಡುತ್ತಿದ್ದಾರೆ.
ಮೈಸೂರು: ಕಳೆದ ವಾರವಷ್ಟೇ ಮೈಸೂರಿನಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಸವಾರನೊಬ್ಬ ಪ್ರಾಣ ಕಳೆದುಕೊಂಡ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ರೊಚ್ಚಿಗೆದ್ದ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಇನ್ಮೇಲೆ ಹೊಸ ನಿಯಮಗಳನ್ನು ಮಾಡುತ್ತೇವೆ, ಸಾರ್ವಜನಿಕರೇ ಬಂದು ತಪಾಸಣೆ ಮಾಡಿಸಿಕೊಳ್ಳಲಿ, ನಾವು ತಪಾಸಣೆ ಮಾಡವುದಿಲ್ಲ ಎಂದು ಹೇಳಿದ್ದಾರೆ. ಅದರಂತೆ ಈಗ ನೂತನ ಸುಧಾರಿತ ಸಂಚಾರ ನಿಯಮ ಜಾರಿಗೆ ಬಂದಿದೆ.
ಈ ನಿಯಮದ ಪ್ರಕಾರ ಸಾರ್ವಜನಿಕರೇ ಪೊಲೀಸರು ಇರುವ ಕಡೆ ಬಂದು ದಂಡ ಕಟ್ಟಬೇಕಾಗಿದ್ದು, ದಂಡ ಕಟ್ಟುವುದಕ್ಕೆ ಎಂದು ತಪಾಸಣಾ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಅಷ್ಟಕ್ಕೂ ಪೊಲೀಸರ ಈ ನೂತನ ಸುಧಾರಿತ ಸಂಚಾರ ನಿಯಂತ್ರಣಕ್ಕೆ ಕಾರಣ ಕಳೆದ ವಾರ ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ಪೊಲೀಸರು ತಪಾಸಣೆ ಮಾಡುವ ಸಂದರ್ಭದಲ್ಲಿ ಬೈಕ್ ಸವಾರನಿಗೆ ಲಾರಿ ಡಿಕ್ಕಿ ಸಾವನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಈ ಸಾವಿಗೆ ಪೊಲೀಸರ ಕಾರಣ ಅಂತ ಆಕ್ರೋಶ ಹೊರಹಾಕಿದರು.
ಈ ಘಟನೆ ಇಡೀ ರಾಜ್ಯದ ಗಮನ ಕೂಡ ಸೆಳೆದಿತ್ತು. ಘಟನೆ ನಂತರ ಎಚ್ಚೆತ್ತಕೊಂಡ ಪೊಲೀಸರು ಒಂದು ವಾರಗಳ ಕಾಲ ಮೈಸೂರಿನಲ್ಲಿ ವಾಹನ ತಪಾಸಣೆ ಮಾಡುವುದನ್ನೇ ನಿಲ್ಲಿಸಿದರು. ವಾರದ ನಂತರ ಇದೀಗ ರಸ್ತೆಗೆ ಇಳಿದ ಪೊಲೀಸರು ಹೊಸ ನಿಯಮ ಜೊತೆ ವಾಹನ ತಪಾಸಣೆ ಮಾಡಲು ಮುಂದಾಗಿದ್ದಾರೆ. ಸದ್ಯ ಪೊಲೀಸರು ಸಾರ್ವಜನಿಕರ ವಾಹನವನ್ನು ತಡೆದು ತಪಾಸಣೆ ನಡೆಸುತ್ತಿಲ್ಲ. ಬದಲಿಗೆ ಸಾರ್ವಜನಿಕರೆ ಪೊಲೀಸರ ಬಳಿ ಹೋಗಿ ತಮ್ಮ ವಾಹನ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರ ವಾಹನದ ಮೇಲೆ ಸಂಚಾರಿ ನಿಯಮದ ಉಲ್ಲಂಘನೆ ಕೇಸ್ ಇದ್ದರೆ ದಂಡ ಕಟ್ಟಿ ಹೋಗುತ್ತಾರೆ.
ಸದ್ಯ ಮೈಸೂರಿನ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ 10 ತಪಾಸಣೆ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಕಳೆದ ಎರಡು ದಿನಗಳಿಂದ ಈ ತಪಾಸಣಾ ಕೇಂದ್ರದಲ್ಲಿ ಸಾರ್ವಜನಿಕರು ಬಂದು ತಮ್ಮ ವಾಹನಗಳನ್ನ ತಪಾಸಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಪೊಲೀಸರು ವಾಹನ ತಪಾಸಣೆ ನಡೆಸಿ ಬರುವ ವಾಹನ ಸವಾರರಿಗೆ ಮಜ್ಜಿಗೆ ನೀಡಿ ಜನಸ್ನೇಹಿಯಾಗಿ ವರ್ತನೆ ಮಾಡುತ್ತಿದ್ದಾರೆ. ಈ ಹೊಸ ನಿಯಮಗಳಿಗೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಸದ್ಯ ₹1,25,000 ದಷ್ಟು ದಂಡವನ್ನು ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು ಕಟ್ಟಿ ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ ವಾಹನ ತಪಾಸಣೆ ಬಗ್ಗೆ ದೂರು ಬಂದಿರುವ ಹಿನ್ನಲೆಯಲ್ಲಿ ಅದರಲ್ಲಿ ಸುಧಾರಣೆ ತರಬೇಕು ಮತ್ತು ಜನಸ್ನೇಹಿಯಾಗಿ ಇರಬೇಕು ಎಂಬ ಕಾರಣಕ್ಕೆ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಜನರು ಬಂದು ವಾಹನ ತಪಾಸಣೆ ಮಾಡಿಕೊಳ್ಳಲು ಕೇಂದ್ರಗಳಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಜನರು ಹಣವನ್ನು ಕಟ್ಟಿ ಕೇಸ್ ಅನ್ನು ಬಿಡಿಸಿಕೊಂಡು ಹೋಗುತ್ತಾರೆ. ಸಾರ್ವಜನಿಕರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ಹೆಳಿದ್ದಾರೆ.
ಒಟ್ಟಾರೆ ಪೊಲೀಸರ ನಿರೀಕ್ಷೆಗೂ ಮೀರಿ ಸಾರ್ವಜನಿಕರು ಪೊಲೀಸರಿಗೆ ಸ್ಪಂದಿಸುತ್ತಿದ್ದಾರೆ. ನಿಜಕ್ಕೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ತಪ್ಪಿಗೆ ದಂಡ ಕಟ್ಟಿ ಹೋಗುತ್ತಾ ಇರುವುದು ಮೆಚ್ವುವಂತಹದ್ದು, ಮುಂದೆ ವಾಹನ ಸವಾರರು ಇದೇ ರೀತಿ ಸಂಚಾರಿ ನಿಯಮ ಪಾಲಿಸಿ ತಪಾಸಣೆಯೇ ಇಲ್ಲದಂತೆ ಮಾಡಿದರೂ ಅಚ್ಚರಿ ಇಲ್ಲ.
(ವರದಿ: ದಿಲೀಪ್ ಚೌಡಹಳ್ಳಿ – 9980914110)
ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ ಅಪಘಾತ ಪ್ರಕರಣ: ಕಾರ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಆಯುಕ್ತರಿಂದ ಪ್ರಶಂಸನಾ ಪತ್ರ
(New improved traffic rules launched in mysuru)