AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ದಶಕಗಳಿಂದ ಅಭ್ಯರ್ಥಿಗಳ ಅವಿರೋಧ ಆಯ್ಕೆ: ಚುನಾವಣಾ ಇತಿಹಾಸದಲ್ಲೇ ದಾಖಲೆ ಬರೆದ ‘ಕತ್ತಿ’ ತವರೂರು!

ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿವೆ. ಹೀಗಿರುವಾಗ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮ ಪಂಚಾಯಿತಿ ತುಸು ವಿಭಿನ್ನ ಕಾರಣಕ್ಕೆ ಸುದ್ದಿಯಲ್ಲಿದೆ.

7 ದಶಕಗಳಿಂದ ಅಭ್ಯರ್ಥಿಗಳ ಅವಿರೋಧ ಆಯ್ಕೆ: ಚುನಾವಣಾ ಇತಿಹಾಸದಲ್ಲೇ ದಾಖಲೆ ಬರೆದ ‘ಕತ್ತಿ’ ತವರೂರು!
ಸದಸ್ಯರ ಅವಿರೋಧ ಆಯ್ಕೆ
Lakshmi Hegde
|

Updated on:Dec 17, 2020 | 3:06 PM

Share

ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿವೆ. ಹೀಗಿರುವಾಗ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮ ಪಂಚಾಯಿತಿ ತುಸು ವಿಭಿನ್ನ ಕಾರಣಕ್ಕೆ ಸುದ್ದಿಯಲ್ಲಿದೆ.

ಇಲ್ಲಿ ಅಭ್ಯರ್ಥಿಗೆ ಪ್ರತಿಸ್ಪರ್ಧಿಗಳೇ ಇಲ್ಲ! ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಕಳೆದ 7 ದಶಕಗಳಿಂದಲೂ ಒಮ್ಮೆಯೂ ಚುನಾವಣೆಯಾಗಿಲ್ಲ. ಹಾಗಂತ ಇಲ್ಲಿ ಯಾರೂ ಸ್ಪರ್ಧೆಗೆ ಇಳಿಯುತ್ತಿಲ್ಲ ಎಂದಲ್ಲ. ಗ್ರಾಮಸ್ಥರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ, ಆಯ್ಕೆಯೂ ಆಗುತ್ತಾರೆ. ಆದರೆ, ಇವರಿಗೆ ಯಾರೂ ಪ್ರತಿಸ್ಪರ್ಧಿಗಳಿರುವುದಿಲ್ಲ! ಹೌದು, ಕಳೆದ 7 ದಶಕಗಳಿಂದಲೂ ಎಲೆಕ್ಷನ್​ಗೆ ನಿಲ್ಲುವ ಗ್ರಾಮಸ್ಥ ಅವಿರೋಧವಾಗಿ ಆಯ್ಕೆ ಆಗ್ತಾನೆ.

ಅಂದ ಹಾಗೆ, ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಡಿ.22ರಂದು ನಡೆಯಲಿದೆ. ಉಳಿದೆಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಬೆಲ್ಲದ ಬಾಗೇವಾಡಿಯ ಗ್ರಾಮಸ್ಥರು ಮಾತ್ರ ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. 7 ದಶಕಗಳಿಂದ ಅವಿರೋಧ ಆಯ್ಕೆಯನ್ನೇ ಎತ್ತಿಹಿಡಿದು ಇತಿಹಾಸ ಸೃಷ್ಟಿಸಿದ್ದು ಇದೀಗ ಮತ್ತೆ ಅದೇ ದಾರಿ ಹಿಡಿಯಲು ಮುಂದಾಗಿದ್ದಾರೆ.

ಎಲ್ಲರಿಗೂ ಸದಸ್ಯರಾಗಲು ಇದೆ ಅವಕಾಶ! ಅಂದ ಹಾಗೆ, ಬೆಲ್ಲದ ಬಾಗೇವಾಡಿ ಹಿರಿಯ ಬಿಜೆಪಿ ಶಾಸಕ ಉಮೇಶ್​ ಕತ್ತಿಯವರ ಸ್ವಗ್ರಾಮ. ಉಮೇಶ್​ ಕತ್ತಿ ತಂದೆ ವಿಶ್ವನಾಥ್ ಕತ್ತಿ ಕಾಲದಿಂದಲೂ ಇಲ್ಲಿ ಇದೇ ರೀತಿ ನಡೆದುಕೊಂಡು ಬಂದಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ, ಗ್ರಾಮದ ಮುಖಂಡರನ್ನೆಲ್ಲ ಒಂದುಗೂಡಿಸಿ, ಯಾರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತದೆ. ಒಂದು ಬಾರಿ ಆಯ್ಕೆಯಾದವರಿಗೆ ಮತ್ತೊಮ್ಮೆ ಅವಕಾಶ ನೀಡುವುದಿಲ್ಲ. ಹಾಗೇ, ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ಸದಸ್ಯರಾಗುವ ಅವಕಾಶ ನೀಡಲಾಗುತ್ತದೆ.

1977ರಲ್ಲಿ ಒಂದು ವಾರ್ಡ್​ಗೆ ಒಂದು ಬಾರಿ ಚುನಾವಣೆ ನಡೆದಿದ್ದು ಬಿಟ್ಟರೆ ಪ್ರತಿಬಾರಿಯೂ ಸದಸ್ಯರ ಅವಿರೋಧ ಆಯ್ಕೆ ನಡೆಯುತ್ತಾ ಬಂದಿದೆ. ಸದ್ಯ, ಗ್ರಾಮದ 9 ವಾರ್ಡ್​ಗಳಿಗೆ 33 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು ಅವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ, ಬೆಲ್ಲದ ಬಾಗೇವಾಡಿ ಗ್ರಾಮದ ತಮ್ಮ ನಿವಾಸಕ್ಕೆ ಕರೆಸಿ ಸನ್ಮಾನ ಮಾಡಿ ಗ್ರಾಮದ ಏಳಿಗೆಗಾಗಿ ಶ್ರಮಿಸುವಂತೆ ಸಲಹೆ, ಸೂಚನೆ ನೀಡಿದರು. ಹೀಗೆ ಎಲ್ಲ ಗ್ರಾಮದಲ್ಲೂ ಅವಿರೋಧ ಆಯ್ಕೆ ಪದ್ಧತಿಯೇ ಬಂದರೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ತಪ್ಪುತ್ತದೆ, ಗ್ರಾಮದಲ್ಲೂ ದ್ವೇಷ, ವೈಷಮ್ಯ ಇರುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಚಿಹ್ನೆಗಳಿಗೆ ಅಂಟಿದ ಮೂಢನಂಬಿಕೆ ಭೂತ; ಕೆಲ ಸಿಂಬಲ್ ಕಂಡು ಭಯ ಬೀಳ್ತಿದ್ದಾರೆ ಗ್ರಾ.ಪಂ. ಅಭ್ಯರ್ಥಿಗಳು

Published On - 3:02 pm, Thu, 17 December 20