ಧಾರವಾಡ: ಎರಡನೇ ಮಹಾಯುದ್ಧದಲ್ಲಿ ವೀರಮರಣ ಕಂಡ ಸೈನಿಕನ ಪತ್ನಿಯೋರ್ವರು ಮಾಸಿಕ ಗೌರವಧನಕ್ಕಾಗಿ ಪಡಬಾರದ ಪಾಡು ಪಡುತ್ತಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಜಿಲ್ಲಾ ಖಜಾನೆ, ಬ್ಯಾಂಕ್ ಸೇರಿದಂತೆ ನಾನಾ ಇಲಾಖೆಗಳಿಗೆ ತಿರುಗಾಡಿದರೂ ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ ಧಾರವಾಡದ ಈ ವೃದ್ಧೆ.
ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾಗಿದ್ದ ಯಲ್ಲಪ್ಪ ಪಯನಿಯರ್ ರೆಜಿಮೆಂಟ್ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಯಲ್ಲಪ್ಪ ಭೀಮರಾಯಪ್ಪನ್, ಧಾರವಾಡ ತಾಲೂಕಿನ ಯಾದವಾಡ ಗ್ರಾಮದವರು. ಅವರು 1940ರ ದಶಕದಲ್ಲಿ ನಡೆದ ಎರಡನೇ ಮಹಾಯುದ್ಧದಲ್ಲಿ ವೀರಮರಣಕ್ಕೀಡಾಗಿದ್ದರು. ಹೀಗಾಗಿ, ಅವರ ಪತ್ನಿ ಸೀತಮ್ಮ ಅವರಿಗೆ ಭಾರತ ಸರ್ಕಾರ 1993ರಿಂದ 2ನೇ ಮಹಾಯುದ್ಧದ ಸೈನಿಕರು/ವಿಧವೆಯರಿಗೆ ವಿಶ್ರಾಂತಿ ವೇತನದಡಿ ಪೆನ್ಶನ್ ಮಂಜೂರು ಮಾಡಿದೆ. ಈವರೆಗೆ ಸೀತಮ್ಮರಿಗೆ ಮಾಸಿಕ ₹ 6000 ಗೌರವಧನ ಸಿಗುತ್ತಿತ್ತು. ಮೂವರು ಗಂಡು ಹಾಗೂ ಮೂರು ಜನ ಹೆಣ್ಣುಮಕ್ಕಳಿದ್ದರೂ, ಅವರಲ್ಲಿ ಈಗಾಗಲೇ ನಾಲ್ಕು ಜನ ಮಕ್ಕಳು ಮೃತಪಟ್ಟಿದ್ದರೆ, ಓರ್ವ ಪಾಶ್ಚರ್ಯವಾಯುವಿನಿಂದ ಬಳಲುತ್ತಿದ್ದಾರೆ. ಅಲ್ಲದೇ, ಸೀತಮ್ಮರಿಗೆ ವಯೋಸಹಜ ಕಾಯಿಲೆ ಇದ್ದು, ಔಷಧಿಗೆ ಮಾಸಿಕ 3-4 ಸಾವಿರದಷ್ಟು ಹಣದ ಅಗತ್ಯವಿದೆ. ಯಾವುದೇ ಆದಾಯ ಇಲ್ಲದ ಸೀತಮ್ಮರಿಗೆ ಸರ್ಕಾರ ನೀಡುವ ಪಿಂಚಣಿಯೇ ಆಧಾರ. ಆದರೆ, ತಾಂತ್ರಿಕ ಕಾರಣಗಳ ನೆಪವೊಡ್ಡಿ ಕಳೆದ ಏಪ್ರಿಲ್‌ನಿಂದ ಅದಕ್ಕೆ ಕೊಕ್ಕೆ ಹಾಕಲಾಗಿದೆ.
ಗೌರವಧನಕ್ಕೆ ಅಡ್ಡಿಯಾದ ತಾಂತ್ರಿಕ ಸಮಸ್ಯೆಯೇನು? ಇಲ್ಲಿವರೆಗೆ ಜಿಲ್ಲಾ ಖಜಾನೆ, ಬಳಿಕ ಬ್ಯಾಂಕ್‌ಗಳ ಮೂಲಕ 2ನೇ ಮಹಾಯುದ್ಧದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಸೈನಿಕರು ಹಾಗೂ ಅವರ ಅವಲಂಬಿತರಿಗೆ ಪೆನ್ಶನ್ ನೀಡಲಾಗುತ್ತಿತ್ತು. ಆದರೆ, ಕಳೆದ ಮೇ ತಿಂಗಳಿಂದ ಸೈನಿಕ ಕಲ್ಯಾಣ ಇಲಾಖೆ ಮೂಲಕ ಫಲಾನುಭವಿಗಳಿಗೆ ಪೆನ್ಶನ್ ನೀಡಬೇಕು ಎಂದು ಸರಕಾರ ಆದೇಶಿಸಿದೆ. ಹೀಗಾಗಿ, ಸೀತಮ್ಮ ಪೆನ್ಶನ್ ಪೇಮೆಂಟ್ ಆರ್ಡರ್ (ಪಿಪಿಒ) ನೀಡಿಲ್ಲ ಎಂದು ಪೆನ್ಶನ್ ತಡೆಹಿಡಿಯಲಾಗಿದೆ. ಈ ವಿಚಾರವಾಗಿ ಜಿಲ್ಲಾ ಖಜಾನೆ, ಬ್ಯಾಂಕ್ ಸೇರಿದಂತೆ ನಾನಾ ಇಲಾಖೆಗಳಿಗೆ ತಿರುಗಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಈ ಕುರಿತು ಜಿಲ್ಲಾ ಖಜಾನೆ ಹಾಗೂ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ತಮಗೆ ಬ್ಯಾಂಕ್‌ನಿಂದ ಪಿಪಿಒ ಬಂದಿಲ್ಲ ಎಂದಿದ್ದಾರೆ. ಬ್ಯಾಂಕ್‌ನವರನ್ನು ಕೇಳಿದರೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ ನಡೆದಾಡಲು ಸಹ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿಯಲ್ಲಿರುವ ಸೀತಮ್ಮ ಅಧಿಕಾರಿ ವರ್ಗಕ್ಕೆ ಶಾಪ ಹಾಕುತ್ತಿದ್ದಾರೆ.
ಸೀತಮ್ಮ
ಒಬ್ಬರ ಕಷ್ಟವಲ್ಲ.. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 2ನೇ ಮಹಾಯುದ್ಧದಲ್ಲಿ ಹುತಾತ್ಮರಾದವರ ಸಂಖ್ಯೆ 175 ಎಂದು ಸೈನಿಕ ಕಲ್ಯಾಣ ಇಲಾಖೆ ಹೇಳಿದೆ.
ಬ್ಯಾಂಕ್ ಬದಲು ಸೈನಿಕ ಕಲ್ಯಾಣ ಇಲಾಖೆ ಮೂಲಕವೇ ಪೆನ್ಶನ್ ನೀಡಬೇಕು ಎಂದು ಆದೇಶಿಸಿದ ನಂತರ 120 ಜನ ಪಿಪಿಒ ಆದೇಶವನ್ನು ತಂದುಕೊಡದ ಕಾರಣ, ಅವರಿಗೆ ಪೆನ್ಶನ್ ನೀಡಿಲ್ಲ. ಫಲಾನುಭವಿಗಳು ಮೃತಪಟ್ಟರೂ ಬಟವಾಡೆ ಆಗುತ್ತಿದ್ದ ಪೆನ್ಶನ್ ನಿಲ್ಲಿಸಲು ಸರಕಾರ ಈ ಕ್ರಮ ಕೈಗೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.
ಆದರೆ, ಇಲ್ಲಿ ಫಲಾನುಭವಿ ವೃದ್ಧೆ ಇದ್ದರೂ ಆಕೆಗೆ ಗೌರವಧನ ಮುಟ್ಟಿಸಲಾಗುತ್ತಿಲ್ಲ. ಈ ಬಗ್ಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ ಎಂಬುದು ಮಾಜಿ ಸೈನಿಕರ ಅಸಮಾಧಾನ.
‘ಸತ್ತವರು ನಿನ್ನ ಗಂಡ ಅಲ್ಲ ಅನ್ನುತ್ತಿದ್ದಾರೆ. ನನಗೆ ಪೆನ್ಶನ್ ಕೊಡಿ ಎಂದು ಕಣ್ಣೀರು ಹಾಕಿದರೆ, ಯಲ್ಲಪ್ಪ ನಿನ್ನ ಗಂಡ ಅಲ್ಲ ಅಂತಾರೆ. ಅವರೇ ನನ್ನ ಗಂಡ ಎಂಬ ಎಲ್ಲ ಸಾಕ್ಷಿಗಳನ್ನೂ ನೀಡಿದ್ದೇನೆ. ನಮಗೆ ಮಕ್ಕಳೂ ಇದ್ದಾರೆ. ಗ್ರಾಮಸ್ಥರೇ ಇದಕ್ಕೆ ಸಾಕ್ಷಿ. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಾಕ್ಷಾತ್ ವೀಕ್ಷಿಸಿಯಾದರೂ ಪೆನ್ಶನ್ ಕೊಡಲಿ’ ಎಂದು ವಿನಂತಿಸುತ್ತಾರೆ ಸೀತಮ್ಮ.
‘ಬ್ಯಾಂಕ್‌ನಿಂದ ಪಿಪಿಒ ಬಂದರೆ ತಕ್ಷಣವೇ ಅವರಿಗೆ ಕಳೆದ ಮೇ ತಿಂಗಳಿನಿಂದ ಇಲ್ಲಿವರೆಗಿನ ಪೆನ್ಶನ್ ಮಂಜೂರು ಮಾಡಲಾಗುವುದು. ಆದರೂ ಅವರ ಪರಿಸ್ಥಿತಿ ನೋಡಿ, ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಈಶ್ವರ ಕಡೊಳ್ಳಿ ಪ್ರತಿಕ್ರಿಯಿಸಿದರು.