ಬಾಗಲಕೋಟೆ: ಸದ್ಯ ಎಲ್ಲಿ ನೋಡಿದರೂ ಗ್ರಾಮ ಪಂಚಾಯತಿ ಚುನಾವಣೆಯದ್ದೇ ಮಾತು. ಹಳ್ಳಿ ಸಮರದ ಕಾವು ಈ ಬಾರಿ ಜೋರಾಗಿಯೇ ಇದೆ. ಚುನಾವಣೆ ಎಂದ ಮೇಲೆ ಪ್ರತಿ ಬಾರಿಯೂ ಒಂದಿಲ್ಲೊಂದು ವೈಶಿಷ್ಟ್ಯ ಇರುತ್ತದೆ. ಕೆಲವೆಡೆ ಅಣ್ಣ-ತಮ್ಮ, ಅಪ್ಪ-ಮಗ, ಅತ್ತೆ-ಸೊಸೆ ಹೀಗೆ ಒಂದೇ ಕುಟುಂಬದಿಂದ ಚುನಾವಣೆಗೆ ಧುಮುಕಿ ಗಮನಸೆಳೆದವರಿದ್ದಾರೆ. ಅದರಂತೆಯೇ ಈ ಬಾರಿ ಬಾಗಲಕೋಟೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಚುನಾವಣೆಗೆ ನಿಂತು ಅಚ್ಚರಿ ಮೂಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮ ಪಂಚಾಯತಿಯ 3ನೇ ವಾರ್ಡಿನಿಂದ ಸಾಗರಿಕಾ ಮಹಾದೇವ ಗಾಯಕವಾಡ ಸ್ಪರ್ಧಿಸಿದ್ದರೆ, 4ನೇ ವಾರ್ಡ್ನಿಂದ ಅವರ ಪತಿ ಮಹಾದೇವ ಗಜಾನನ ಗಾಯಕವಾಡ ಸ್ಫರ್ಧಿಸಿದ್ದಾರೆ. ಇವರಿಬ್ಬರೂ ಪರಸ್ಪರ ಎದುರಾಳಿಗಳಾಗಿ ನಿಲ್ಲದಿದ್ದರೂ ಊರಿನವರ ಗಮನ ದಂಪತಿಗಳ ಮೇಲೆಯೇ ಇದೆ.
ಈ ದಂಪತಿಗಳ ಇನ್ನೊಂದು ವಿಶೇಷತೆ ಎಂದರೆ ಇವರಿಬ್ಬರೂ ಸ್ನಾತಕೋತ್ತರ ಪದವೀಧರರು. ಮಹಾದೇವ ಗಜಾನನ ಗಾಯಕವಾಡ ಎಂಕಾಂ ಹಾಗೂ ಎಂಎ ಪದವೀಧರ. ಸಾಗರಿಕಾ ಮಹಾದೇವ ಗಾಯಕವಾಡ ಎಂಎ ಪದವೀಧರೆ. ಈ ದಂಪತಿಗಳು ಗ್ರಾಮ ಸ್ವರಾಜ್ಯದ ಕನಸು ಹೊತ್ತು, ಸುಂದರ ಹಾಗೂ ಸ್ವಚ್ಛ ಗ್ರಾಮಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ತಮ್ಮ ಗ್ರಾಮಕ್ಕೆ ಏನಾದರೂ ಒಂದು ಹೊಸ ಕೊಡುಗೆ ಕೊಡಬೇಕು, ವಿದ್ಯೆ ಪಡೆದರೂ ನಿರುದ್ಯೋಗಿಗಳಾಗಿ ಉಳಿದಿರುವ ಯುವಕರಿಗೆ ಗುಡಿ ಕೈಗಾರಿಕೆ ನಿರ್ಮಿಸಲು ಪ್ರೋತ್ಸಾಹಿಸಬೇಕು ಎಂಬ ಧ್ಯೇಯದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚು ಓದಿದವರು ಸ್ಪರ್ಧಿಸುವುದೇ ವಿರಳ ಎಂಬ ಪರಿಸ್ಥಿತಿ ಇದೆ. ಆದರೆ ಗಾಯಕವಾಡ ದಂಪತಿಗಳು ಈ ಅಭಿಪ್ರಾಯವನ್ನು ಸುಳ್ಳಾಗಿಸಲು ಹೊರಟಿದ್ದಾರೆ. ಆಸಂಗಿ ಗ್ರಾಮಪಂಚಾಯತಿಯು ಆಸಂಗಿ, ಅಸ್ಕಿ, ಮದನಮಟ್ಟಿ ಗ್ರಾಮಗಳನ್ನು ಒಳಗೊಂಡ ಪಂಚಾಯತಿಯಾಗಿದ್ದು, ಒಟ್ಟು 22 ಕ್ಷೇತ್ರದಲ್ಲಿ 4 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಕ್ಷೇತ್ರಗಳ ಪೈಕಿ ಈ ದಂಪತಿಗಳು ಕಣಕ್ಕಿಳಿದಿರುವುದೇ ಗಮನ ಸೆಳೆದಿರುವ ಸಂಗತಿ ಆಗಿದೆ.
ನನ್ನ ಗ್ರಾಮ ಹಸಿರು ಗ್ರಾಮ ಆಗಬೇಕು. ಉತ್ತಮವಾದ ರಸ್ತೆಗಳು, ಚರಂಡಿಗಳ ನಿರ್ಮಾಣಕ್ಕೆ ಪೂರ್ಣ ಪ್ರಯತ್ನ ಮಾಡುತ್ತೇವೆ.ನಾವು ಆಶ್ವಾಸನೆ ನೀಡುವುದಿಲ್ಲ, ವಾಗ್ದಾನ ಮಾಡುತ್ತೇವೆ. ವಾಗ್ದಾನದಂತೆ ಕೆಲಸ ಮಾಡುತ್ತೇವೆ ಎಂದು ಸ್ನಾತಕೋತ್ತರ ದಂಪತಿಗಳು ಜನರ ಬಳಿ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಆಮಿಷಕ್ಕೆ ಬಲಿಯಾಗಬೇಡಿ. ಹಣ, ಹೆಂಡಕ್ಕೆ ಮತವನ್ನು ಮಾರಿಕೊಳ್ಳಬೇಡಿ ಎಂದು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಈ ದಂಪತಿಗಳಿಗೆ ಮತದಾರ ಒಲಿಯುತ್ತಾನಾ? ದಂಪತಿಗಳಿಬ್ಬರೂ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸಾಧ್ಯವಾ? ಎನ್ನುವುದನ್ನು ಫಲಿತಾಂಶ ಬರುವ ತನಕ ಕಾದು ನೋಡಬೇಕು.
ಚಿಹ್ನೆಗಳಿಗೆ ಅಂಟಿದ ಮೂಢನಂಬಿಕೆ ಭೂತ; ಕೆಲ ಸಿಂಬಲ್ ಕಂಡು ಭಯ ಬೀಳ್ತಿದ್ದಾರೆ ಗ್ರಾ.ಪಂ. ಅಭ್ಯರ್ಥಿಗಳು