ಬೆಳಗಾವಿ ಸೆ.28: ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವ (Ganesha Chaturthi) ಮೊಟ್ಟಮೊದಲಿಗೆ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿ. 1906ರಲ್ಲಿ ಬಾಲಗಂಗಾಧರ ತಿಲಕ್ರು (Bal Gangadhar Tilak) ಮೊದಲ ಬಾರಿಗೆ ಸಾರ್ವಜನಿಕ ಗಣೇಶವನ್ನು ಪ್ರತಿಷ್ಠಾಪನೆ ಮಾಡಿದರು. ಬೆಳಗಾವಿಯಿಂದ (Belagavi) ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ನಾಡಿನ ಮೂಲೆ ಮೂಲೆಗು ಪಸರಿಸಿತು. ವಿನಾಯಕನನ್ನು ಪ್ರತಿಷ್ಠಾಪಿಸಿ ಇಂದಿಗೆ 11 ದಿನ ಕಳೆದವು. ಉತ್ತರ ಕರ್ನಾಟಕದ ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಇಂದು ವಿಸರ್ಜಿಸಲಾಗುತ್ತದೆ. ಹಾಗೆ ಕುಂದಾನಗರಿ ಬೆಳಗಾವಿಯಲ್ಲಿ ಇಂದು 11 ದಿನದ ಸಾರ್ವಜನಿಕ ಹಾಗೂ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ.
ಈ ಬಾರಿ ನಗರದಲ್ಲಿ 937 ಸಾರ್ವಜನಿಕ ವಿಘ್ನನಿವಾರಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮನೆ ಗಣಪ ಸೇರಿ ಇಡೀ ನಗರದಲ್ಲಿ ಐದು ಸಾವಿರಕ್ಕೂ ಅಧಿಕ ಗಣಪತಿಗಳನ್ನು ಶುಕ್ರವಾರ ವಿಸರ್ಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಆಯುಕ್ತ ಸಿದ್ದರಾಮಪ್ಪ ನೇತೃತ್ವದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ನೀರಿನ ಬದಲು ಮಣ್ಣಿನಲ್ಲಿ ಹೂಳುವ ಮೂಲಕ ಗಣೇಶ ವಿಸರ್ಜನೆ; ವಿನೂತನ ವಿಧಾನ
ರಾಜ್ಯದ ವಿವಿಧ ಜಿಲ್ಲೆಗಳಿಂದ ಐದು ಜನ ಎಸ್‌ಪಿ, 20 ಜನ ಡಿಎಸ್‌ಪಿ, 72 ಜನ ಪಿಐ, 106 ಜನ ಪಿಎಸ್ಐ, 210 ಜನ ಎಎಸ್‌ಐ, 208 ಜನ ಪಿಸಿ, 405 ಜನ ಹೋಮ್ ಗಾರ್ಡ್, 10 ಮಂದಿ ಕೆಎಸ್‌ಆರ್‌ಪಿ ಪ್ರಹಾರ ದಳ ಆಗಮಿಸಿದ್ದಾರೆ.
ಜತೆಗೆ ಸ್ಥಳೀಯ 3 ಜನ ಎಸ್‌ಪಿ ದರ್ಜೆಯ ಅಧಿಕಾರಿಗಳು,5 ಜನ ಡಿಎಸ್‌ಪಿ, 21 ಜನ ಪಿಐ, 36 ಜನ ಪಿಎಸ್ಐ, 810 ಜನ ಪಿಸಿ, 8 ಜನ ಸಿಎಆರ್ ಪ್ರಹಾರ ದಳವನ್ನು ನಿಯೋಜಿಸಲಾಗಿದೆ. ಅತೀ ಸೂಕ್ಷ್ಮ ಸ್ಥಳಗಳಲ್ಲಿ 487ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮಹಾನಗರ ಪಾಲಿಕೆ ಗಣಪತಿ ವಿಸರ್ಜನೆಗೆ ಆರು ಕಡೆಗಳಲ್ಲಿ ವ್ಯವಸ್ಥೆ ಮಾಡಿದೆ. ನಗರದಲ್ಲಿ ಅಕ್ಷರಶಃ ಪೊಲೀಸ್ ಸರ್ಪಗಾವಲು ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Thu, 28 September 23