ಬೆಳಗಾವಿ, (ಡಿಸೆಂಬರ್ 07): ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತ(Accident) ಸಂಭವಿಸಿದ್ದು, ಬಾಲಕಿ ಸೇರಿ ಇಬ್ಬರು ಸಜೀವ ದಹನವಾಗಿದ್ದಾರೆ. ಬೆಳಗಾವಿ(Belagavi) ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್(24) ಹಾಗೂ ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್(12) ಮೃತ ದುರ್ದೈವಿಗಳು. ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಸಮಿಕ್ಷಾ ಮತ್ತು ಮೋಹನ್ ಮಾರುತಿ ಸಜೀವ ದಹನವಾಗಿದ್ದಾರೆ.
ಮದುವೆ ಮುಗಿಸಿಕೊಂಡು ವಾಪಸ್ ಬಂಬರಗಾ ಗ್ರಾಮಕ್ಕೆ ಹೊರಟಿದ್ದ ಕಾರು, ಅಡ್ಡ ಬಂದ ಟಿಪ್ಪರ್‌ಗೆ ಗುದ್ದಿದೆ. ಪರಿಣಾಮ ಟಿಪ್ಪರ್ ನ ಡಿಸೇಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎರಡೂ ವಾಹನಗಳು ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದರೆ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ಕಾರಿನಲ್ಲಿದ್ದ ಇನ್ನುಳಿದ ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗುಂದ್ಕರ್ ಎನ್ನುವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಇನ್ನು ಸ್ಥಳಕ್ಕೆ ಡಿಸಿಪಿ ಸ್ನೇಹಾ, ಎಸಿಪಿ ಮತ್ತು ಕಾಕತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಇಬ್ಬರ ಶವವನ್ನ ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಅಪಘಾತವಾಗುತ್ತಿದ್ದಂತೆಯೇ ಟಿಪ್ಪರ್ ಚಾಲಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ