ಗೋದಾಮಿನಲ್ಲೇ ಹಾಳಾಗ್ತಿದೆ ರೈತರಿಂದ ಖರೀದಿಸಿದ 42,000 ಕ್ವಿಂಟಾಲ್ ತೊಗರಿ; ಸರ್ಕಾರದ ವಿರುದ್ಧ ಜನರ ಆಕ್ರೋಶ

| Updated By: preethi shettigar

Updated on: Oct 09, 2021 | 12:55 PM

ಭಾರೀ ಪ್ರಮಾಣದಲ್ಲಿ ಗೋದಾಮಿನಲ್ಲಿ ಶೇಖರಿಸಿಟ್ಟ ತೊಗರಿ ಹಾಳಾಗಿದೆ. ಕಳೆದ 20 ತಿಂಗಳ ಹಿಂದೆ ರೈತರಿಗೆ ಬೆಂಬಲ ಬೆಲೆ ನೀಡಿ ತೊಗರಿ ಬೇಳೆ ಖರೀದಿಸಲಾಗಿತ್ತು. ರೈತರಿಂದ ಸರ್ಕಾರ ಖರೀದಿ ಕೇಂದ್ರದ ಮೂಲಕ ಪ್ರತಿ ಕ್ವಿಂಟಲ್‌ಗೆ 6,100 ರೂಪಾಯಿ ನೀಡಿ ತೊಗರಿ ಖರೀದಿಸಿದೆ.

ಗೋದಾಮಿನಲ್ಲೇ ಹಾಳಾಗ್ತಿದೆ ರೈತರಿಂದ ಖರೀದಿಸಿದ 42,000 ಕ್ವಿಂಟಾಲ್ ತೊಗರಿ; ಸರ್ಕಾರದ ವಿರುದ್ಧ ಜನರ ಆಕ್ರೋಶ
ಸರ್ಕಾರದ ವಿರುದ್ಧ ಶಂಕರ ಮಾಡಲಗಿ ಆಕ್ರೋಶ
Follow us on

ಬೆಳಗಾವಿ: ರೈತರಿಂದ ಸರ್ಕಾರ ಖರೀದಿ ಮಾಡಿ ಸಂಗ್ರಹಿಸಿಟ್ಟಿದ್ದ ತೊಗರಿ ಬೇಳೆ ಗೋದಾಮಿನಲ್ಲಿಯೇ ಹಾಳಾಗುತ್ತಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಡಕೋಳದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ತೊಗರಿ ಬೇಳೆ ಹಾಳಾಗುತ್ತಿದೆ. ರೈತರಿಂದ ಖರೀದಿಸಿದ ಸುಮಾರು 42,000 ಕ್ವಿಂಟಾಲ್ ತೊಗರಿ ಗೋದಾಮಿನಲ್ಲಿಯೇ ಇದೆ. ರಾಜ್ಯದಲ್ಲಿ 19 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಿ, ಸರ್ಕಾರ ಸಂಗ್ರಹ ಮಾಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮುಗಳಲ್ಲೇ ತೊಗರಿ ಹಾಳಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಭಾರೀ ಪ್ರಮಾಣದಲ್ಲಿ ಗೋದಾಮಿನಲ್ಲಿ ಶೇಖರಿಸಿಟ್ಟ ತೊಗರಿ ಹಾಳಾಗಿದೆ. ಕಳೆದ 20 ತಿಂಗಳ ಹಿಂದೆ ರೈತರಿಗೆ ಬೆಂಬಲ ಬೆಲೆ ನೀಡಿ ತೊಗರಿ ಬೇಳೆ ಖರೀದಿಸಲಾಗಿತ್ತು. ರೈತರಿಂದ ಸರ್ಕಾರ ಖರೀದಿ ಕೇಂದ್ರದ ಮೂಲಕ ಪ್ರತಿ ಕ್ವಿಂಟಲ್‌ಗೆ 6,100 ರೂಪಾಯಿ ನೀಡಿ ತೊಗರಿ ಖರೀದಿಸಿದೆ. ಆದರೆ ಮಾರಾಟ ಮಾಡದೇ ಕರ್ನಾಟಕ ಉಗ್ರಾಣ ನಿಗಮದ ಗೋದಾಮಿನಲ್ಲಿ ತೊಗರಿ ಸಂಗ್ರಹಿಸಲಾಗಿದೆ. ಹೀಗಾಗಿ ಜನರ ಆಹಾರಕ್ಕೆ ಉಪಯೋಗುವ ಬದಲಾಗಿ ತೊಗರಿ ಹಾಳಾಗುತ್ತಿರುವುದನ್ನು ಕಂಡು ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಗೋದಾಮಿಗೆ ಭೇಟಿ ನೀಡಿದ ವೇಳೆ ತೊಗರಿ ಹಾಳಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಆದಷ್ಟು ಬೇಗ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸರ್ಕಾರದ ವಿರುದ್ಧ ಶಂಕರ ಮಾಡಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿ ಸರ್ಕಾರದ ಹಣವೂ ಪೋಲು, ಬೆಳೆಯೂ ಮಣ್ಣು ಪಾಲು
ಖರೀದಿ ಮಾಡಿದ ತೊಗರಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಡಗೋಳ ಗ್ರಾಮದ ಕರ್ನಾಟಕ ಉಗ್ರಾಣ ನಿಗಮದ ಗೋದಾಮಿನಲ್ಲಿ ಶೇಖರಿಸಿಡಲಾಗಿತ್ತು. ಆದರೆ ಇಪ್ಪತ್ತು ತಿಂಗಳುಗಳ ಕಾಲ ಗೋದಾಮಿನಲ್ಲಿಟ್ಟ ತೊಗರಿಯನ್ನು ತೆಗೆದು ನೋಡದಕ್ಕೆ ಇಂದು ಎಲ್ಲಾ ತೊಗರಿಗೆ ಹುಳು ಹತ್ತೆ ಕಾಳುಗಳು ಹಿಟ್ಟಾಗಿ ಮಾರ್ಪಟ್ಟು ಸಂಪೂರ್ಣವಾಗಿ ಹಾಳಾಗುತ್ತಿದೆ‌.

ಸದ್ಯ ರಾಜ್ಯದ ಪ್ರತಿಯೊಂದು ಗೋದಾಮಿನಲ್ಲಿ ತೊಗರಿ ಕಾಳು ಅಷ್ಟೇ ಅಲ್ಲದೇ ಲಕ್ಷಾಂತರ ಕ್ವಿಂಟಲ್​ನಷ್ಟು ಕಡಲೆ ಕಾಳು ಕೂಡ ಶೇಖರಿಸಿಟ್ಟಿದ್ದು, ಅದು ಕೂಡ ಹುಳು ಹತ್ತಿ ಹಾಳಾಗುತ್ತಿದೆ. ಸರ್ಕಾರ ಈಗಲಾದರೂ ಎಚ್ಛೆತ್ತುಕೊಂಡು ಕೂಡಲೇ ಗೋದಾಮಿನಲ್ಲಿರುವ ಬೆಳೆಗಳನ್ನು ಬಡವರಿಗೆ ಹಂಚುವ ಕೆಲಸಕ್ಕೆ ಮುಂದಾಗಬೇಕು. ಈಗಾಗಲೇ ತೊಗರಿ ಮತ್ತು ಕಡಲೆಗೆ ಹುಳು ಹತ್ತಿ‌ ಬಹುತೇಕ ಹಾಳಾಗಿದ್ದು‌. ತಕ್ಷಣ ಕ್ರಮಕ್ಕೆ ಮುಂದಾದರೇ ಅಲ್ಪಸ್ವಲ್ಪ ಉಳಿದ ಕಾಳು ಬಡವರ ಹೊಟ್ಟೆ ತುಂಬಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮಕ್ಕೆ ಮುಂದಾಗಲಿ ಮತ್ತು ಯಾವ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಮುಂದೆ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳಲಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ವರದಿ: ಸಹದೇವ ಮಾನೆ

ಇದನ್ನೂ ಓದಿ:
ಕರ್ನಾಟಕ ಉಗ್ರಾಣ ನಿಗಮದ ಗೋದಾಮಿಗೆ ಕನ್ನ; 42 ತೊಗರಿ ಮೂಟೆ ಕದ್ದಿದ್ದ ಮೂವರು ಆರೋಪಿಗಳ ಬಂಧನ

ನಿರಂತರ ಮಳೆಯಿಂದ ಕಲಬುರಗಿ ರೈತರು ಕಂಗಾಲು; ಜಮೀನಿನಲ್ಲಿ ಕೊಳೆಯುತ್ತಿರುವ ತೊಗರಿ ಬೆಳೆ

Published On - 10:34 am, Sat, 9 October 21