ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ: ಮನೆ ಕಟ್ಟಿಸಿಕೊಡೋದಾಗಿ ಹಣ ಪಾವತಿಸಿಕೊಂಡು ಮೋಸ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಸ್ಲಂ ನಿವಾಸಿಗಳಿಗೆ ಮನೆಗಳು ಮಂಜೂರಾಗಿದ್ದವು. ಇದಕ್ಕಾಗಿ 25 ಸಾವಿರ ರೂ. ಹಣ ಪಾವತಿಸಿಕೊಂಡ ಸ್ಲಮ್ ಬೋರ್ಡ್ ಮನೆ ಕಟ್ಟಿಸಿಕೊಡದೇ ಮೋಸ ಮಾಡಿದ್ದಾರೆ ಎಂದು ಜನರು ಆಕ್ರೋಶಗೊಂಡು ಬೀದಿಗಿಳಿದಿದ್ದಾರೆ. ಸ್ಲಮ್ ಬೋರ್ಡ್​ನಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ: ಮನೆ ಕಟ್ಟಿಸಿಕೊಡೋದಾಗಿ ಹಣ ಪಾವತಿಸಿಕೊಂಡು ಮೋಸ
ಮಂಜೂರಾದ ಮನೆ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 15, 2023 | 3:27 PM

ಚಿಕ್ಕೋಡಿ, ನವೆಂಬರ್​​​​ 15: ಬಡವರಿಗೆ ಮನೆ ಕಟ್ಟಿಕೊಡಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತೆ. ಅದರಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (Karnataka Slum Development Board) ವತಿಯಿಂದ ಚಿಕ್ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಸ್ಲಂ ನಿವಾಸಿಗಳಿಗೆ ಮನೆಗಳು ಮಂಜೂರಾಗಿದ್ದವು. ಇದಕ್ಕಾಗಿ 25 ಸಾವಿರ ರೂ. ಹಣ ಪಾವತಿಸಿಕೊಂಡ ಸ್ಲಮ್ ಬೋರ್ಡ್ ಮನೆ ಕಟ್ಟಿಸಿಕೊಡದೇ ಮೋಸ ಮಾಡಿದ್ದಾರೆ ಎಂದು ಜನರು ಆಕ್ರೋಶಗೊಂಡು ಬೀದಿಗಿಳಿದಿದ್ದಾರೆ. ಸ್ಲಮ್ ಬೋರ್ಡ್​ನಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮನೆ ಇಲ್ಲದೆ ಬಡವರಿಗೆ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಅದೆಷ್ಟೋ ಯೋಜನೆಗಳನ್ನು ಜಾರಿ ತರುತ್ತೆ. ಆದರೆ ಅದು ಅರ್ಹ ಫಲಾನುಭವಿಗಳಿಗೆ ತಲುಪಲ್ಲ ಎಂಬ ಆರೋಪ ಇಂದು ನಿನ್ನೆಯದಲ್ಲ. ಇದೇ ರೀತಿ 2019ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ 7 ಸ್ಲಂಗಳಲ್ಲಿ 449 ಫಲಾನುಭವಿಗಳ ಗುರುತಿಸಿ ಮನೆ ಕಟ್ಟಿಸಿಕೊಡಲು ಯೋಜನೆ ರೂಪಿಸಲಾಗಿತ್ತು.

ಯೋಜನೆಯ ನಿಯಮದಂತೆ ಪ್ರಾರಂಭದ ಹಂತದಲ್ಲಿನ ಫಲಾನುಭವಿಗಳಿಗೆ 25 ಸಾವಿರ ರೂ. ಡಿಡಿ ಕಟ್ಟಲು ಸೂಚಿಸಲಾಗಿತ್ತಂತೆ. ತಮಗೂ ಒಂದು ಸೂರು ಆಗುತ್ತೆ ಎಂಬ ಆಸೆಯಲ್ಲಿ ಚಿಕ್ಕೋಡಿ ನಗರದ ಮಾತಂಗಿಕೇರಿಯ ನಿವಾಸಿಗಳು ಸಾಲ ಸೋಲ ಮಾಡಿ 25 ಸಾವಿರ ರೂ. ಹಣ ಪಾವತಿಸಿದ್ರು. ಆದರೆ 2019ರಲ್ಲಿ ಹಣ ಪಾವತಿಸಿದರೂ ಈವರೆಗೂ ಮನೆ ಕಟ್ಟಿಕೊಟ್ಟಿಲ್ಲ.

ಇದನ್ನೂ ಓದಿ: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆಗ್ರಹ; ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದ ಸಾರ್ವಜನಿಕರು

ಇನ್ನೂ ಕೆಲವು ಮನೆಗಳನ್ನು ಅರ್ದಂಬರ್ಧ ಮಾಡಿ ಬಿಟ್ಟ ಆರೋಪ ಕೇಳಿ ಬಂದಿದೆ. ಚಿಕ್ಕೋಡಿಯ ಮಾತಂಗಿಕೇರಿಯಲ್ಲಿ ಜಮಾವಣೆಗೊಂಡಿದ್ದ 50ಕ್ಕೂ ಹೆಚ್ಚು ಫಲಾನುಭವಿಗಳು ಮನೆ ಕಟ್ಟಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ತಾವೆಲ್ಲ ಬಡ ಕೂಲಿ ಕಾರ್ಮಿಕರಾಗಿದ್ದು ಸಾಲ ಸೋಲ ಮಾಡಿ 25 ಸಾವಿರ ರೂಪಾಯಿ ಹಣವನ್ನು ಪಾವತಿ ಮಾಡಿದ್ದೇವೆ. ಆದ್ರೆ ನಾಲ್ಕು ವರ್ಷ ಕಳೆದರೂ ಮನೆ ನಿರ್ಮಾಣ ಮಾಡಿಕೊಡುತ್ತಿಲ್ಲ ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಮಾತಂಗಿ ಕೇರಿ ಸೇರಿದಂತೆ ಒಟ್ಟು ಏಳು ಸ್ಲಮ್ ಪ್ರದೇಶಗಳಿವೆ. ಈ ಎಲ್ಲಾ ಪ್ರದೇಶಗಳಲ್ಲಿಯೂ ಫಲಾನುಭವಿಗಳು ಇದ್ದು ಬಹುತೇಕ ಮನೆಗಳು ಪೂರ್ಣಗೊಳ್ಳದೇ ಇದ್ದರೂ ಪೂರ್ಣಗೊಂಡಿವೆ ಎಂದು ದಾಖಲೆ ಸಲ್ಲಿಸಲಾಗಿದೆ ಎಂದು ಬೆಳಗಾವಿಯ ಸ್ಲಂ ಬೋರ್ಡ್ ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ.

ಮಾತಂಗಿಕೇರಿಯ ನಿವಾಸಿಯೂ ಆಗಿರುವ ಆರ್​ಟಿಐ ಕಾರ್ಯಕರ್ತ ಅನಿಲ್ ಧಾವಣೆ ಆರ್​ಟಿಐನಡಿ ಮಾಹಿತಿ ಕೇಳಿದಾಗ 188 ಮನೆಗಳು ಪೂರ್ಣಗೊಂಡಿವೆ ಎಂಬ ದಾಖಲಾತಿ ನೀಡಿದ್ದಾರಂತೆ. ಆದ್ರೆ ಮಾತಂಗಿಕೇರಿ ಸ್ಲಮ್ ಒಂದರಲ್ಲೇ ಸುಮಾರು 10ಕ್ಕೂ ಹೆಚ್ಚು ಮನೆಗಳು ಇನ್ನೂ ಪೂರ್ಣಗೊಂಡಿಲ್ಲ ಆದ್ರೆ ಪೂರ್ಣಗೊಂಡಿದೆ ಎಂದು ದಾಖಲೆ ನೀಡಿದ್ದಾರೆ ಎಂದು ಅನಿಲ್ ಧಾವಣೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಸಿಲಿಂಡರ್ ಸ್ಫೋಟಕ್ಕೆ ನಾಲ್ಕು ಕುರಿಗಳು ಸಜೀವ ದಹನ, ಮನೆ, 4 ಲಕ್ಷ ಹಣ ಭಸ್ಮ!

ಈ ಕುರಿತು ಮಾತನಾಡಿರುವ ಅನಿಲ್ ಧಾವಣೆ, 2019ರಲ್ಲಿ ಯೋಜನೆ ಬಂದಾಗ ಬಹಳಷ್ಟು ಜನ ಸಂತ್ರಸ್ತಗೊಂಡಿದ್ದರು. ಯೋಜನೆ ನಿಯಮದಂತೆ ಪ್ರಾರಂಭಿಕ ಹಂತದಲ್ಲಿ ಎಸ್​ಸಿ ಸಮುದಾಯದವರಿಗೆ 25 ಸಾವಿರ ರೂ. ಡಿಡಿ ನೀಡಬೇಕಿತ್ತು. ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಅಂದ್ರೆ ಮೇಲ್ಛಾವಣಿ ನಿರ್ಮಾಣ ವೇಳೆ 25 ಸಾವಿರ ರೂ. ಕಂತು ನೀಡಬೇಕೆಂದಿತ್ತು. ಫಲಾನುಭವಿಗಳು ಸಾಲ ಸೋಲ ಮಾಡಿ 25 ಸಾವಿರ ರೂ. ಹಣ ಪಾವತಿಸಿದ್ರು. ಆದರೆ ಈವರೆಗೂ ಮನೆಗಳ ನಿರ್ಮಾಣ ಆಗಿಲ್ಲ.

ಮನೆಗಳನ್ನು ಕಟ್ಟಲು ದುಡ್ಡು ಕೇಳುತ್ತಿದ್ದು ಜಿಪಿಎಸ್ ಮಾಡಲು ಸಹ ಎರಡೆರಡು ಸಾವಿರ ರೂ. ಹಣ ಕೇಳುತ್ತಿದ್ದಾರೆ. ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದಾಗ ಸುಮಾರು ಆರರಿಂದ ಏಳು ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗಿದೆ. ಅಷ್ಟೇ ಅಲ್ಲದೇ ಎಷ್ಟು ಮನೆ ಪೂರ್ಣಗೊಂಡಿದೆ ಎಂದು ಕೇಳಿದಾಗ ಇನ್ನೂ ಕಾಮಗಾರಿ ಆರಂಭಿಸದೇ ಇರುವ ಫಲಾನುಭವಿಗಳ ಮನೆ ಪೂರ್ಣಗೊಂಡಿದೆ ಎಂದು ದಾಖಲೆ ನೀಡಿದ್ದಾರೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೂ ಪತ್ರ ಬರೆದು ಮಾಹಿತಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಮಂಜೂರಾದ ಮನೆಗಳನ್ನು ಕಟ್ಟುತ್ತಿಲ್ಲ, ಅರ್ಧಂಬರ್ಧ ಕಾಮಗಾರಿಯಾದ ಮನೆಗಳನ್ನು ಕಟ್ಟಿಕೊಡುತ್ತಿಲ್ಲ. ಮಾಡಿದ ಮನೆಗಳು ಸಹ ಕಳಪೆ ಕಾಮಗಾರಿ ಆಗಿದೆ. ಕಾಮಗಾರಿ ಆಗದೇ ಇದ್ದರೂ ಬಿಲ್​ ತಗೆದು ಮೋಸ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಮಗೂ ಒಂದು ಸೂರು ಆಗುತ್ತೆ ಅಂತಾ ಸಾಲ ಸೋಲ ಮಾಡಿ 25 ಸಾವಿರ ಹಣ ಪಾವತಿಸಿದ ಫಲಾನುಭವಿಗಳು ಇಂದು ಪರದಾಡುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಸಿಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.