ಚಿಕ್ಕೋಡಿ, ಜುಲೈ 29: ಇತ್ತೀಚೆಗೆ ಪುಣೆಯ ಕೊಥ್ರೂಡ್ ಪೊಲೀಸರಿಂದ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರು (Suspected Terrorist) ಕರ್ನಾಟಕದಿಂದ 70 ಕಿ.ಮೀ ದೂರದ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಅರಣ್ಯ (Amboli Forest) ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ (Trail Blast) ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಆ ರಾಜ್ಯದ ಎಟಿಎಸ್ನಿಂದ ತೀವ್ರ ವಿಚಾರಣೆ ನಡೆಯುತ್ತಿದೆ.
ಶಂಕಿತ ಉಗ್ರರು ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಸಂಕೇಶ್ವರ ಮಾರ್ಗವಾಗಿ ಮಹಾರಾಷ್ಟ್ರದ ಅಂಬೋಲಿ ಅರಣ್ಯಕ್ಕೆ ಪ್ರಯಾಣ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಸಂಕೇಶ್ವರಕ್ಕೆ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಶಂಕಿತ ಉಗ್ರರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ: ವಿದೇಶದಿಂದ ಗ್ರೆನೇಡ್ ಸಪ್ಲೈ
ಕಳೆದ ವಾರ ಪೆಟ್ರೋಲಿಂಗ್ ನಡೆಸುತ್ತಿದ್ದ ಪುಣೆಯ ಕೊಥ್ರೂಡ್ ಪೊಲೀಸರು ಬೈಕ್ ಕಳ್ಳತನ ಶಂಕೆಯಡಿ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಅಮಿರ್ ಅಬ್ದುಲ್ ಹಮೀದ್ ಖಾನ್ ಮತ್ತು ಮೊಹಮ್ಮದ್ ಯಾಕೂಬ್ ಸಾಕಿ ಎಂಬವರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಐಸಿಸ್ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಇದೇ ಕಾರಣಕ್ಕೆ, ಪೊಲೀಸರ ವಶದಲ್ಲಿದ್ದ ಶಂಕಿತ ಉಗ್ರರರನ್ನು ವಶಕ್ಕೆ ಪಡೆದ ಮಹಾರಾಷ್ಟ್ರ ಎಟಿಎಸ್ ವಿಚಾರಣೆ ನಡೆಸುತ್ತಿದೆ. ಈ ವೇಳೆ ಅಂಬೋಲಿ ಪ್ರದೇಶದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸಿದ ಮಾಹಿತಿ ಬಹಿರಂಗವಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಎಟಿಎಸ್ ಜೂನ್ 27 ರಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಬೆಳಗಾವಿ ಪೊಲೀಸರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ