ಶಂಕಿತ ಉಗ್ರರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ: ವಿದೇಶದಿಂದ ಗ್ರೆನೇಡ್ ಸಪ್ಲೈ
ಬೆಂಗಳೂರಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ಮನೆಯಲ್ಲಿ ಸಿಕ್ಕ ಗ್ರೆನೇಡ್ ವಿದೇಶದಿಂದ ಆಮದಾಗಿರುವ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ.
ಬೆಂಗಳೂರು: ನಗರದಲ್ಲಿ ಐವರು ಶಂಕಿತ ಭಯೋತ್ಪಾದಕರ (Suspected Terrorists) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ಮನೆಯಲ್ಲಿ ಸಿಕ್ಕ ಗ್ರೆನೇಡ್ (Grande) ವಿದೇಶದಿಂದ ಆಮದಾಗಿರುವ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ಗ್ರೆನೇಡ್ ಬಗ್ಗೆ ಬಿಡಿಟಿಎಸ್, FSL ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಬಂಧಿತ ಐವರು ಶಂಕಿತರು ಕೇವಲ ಕೊರಿಯರ್ ಮೂಲಕ ಬಂದ ಗ್ರೆನೇಡ್, ಪಿಸ್ತೂಲ್ ಇದ್ದ ಪಾರ್ಸೆಲ್ಗಳನ್ನು ತೆಗೆದುಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಆದರೆ ಕೃತ್ಯದ ಯೋಜನೆ, ಸಂಚನ್ನು ಬೇರೆ ತಂಡ ರೂಪಿಸುತ್ತಿದ್ದ ಅಂಶ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಸಿಸಿಬಿ (CCB) ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ವಿಚಾರಣೆ ವೇಳೆ ಸಿಸಿಬಿ ಮುಂದೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಶಂಕಿತ ಉಗ್ರರು
ಇನ್ನು ಈ ಗ್ರೆನೇಡ್, ಪಿಸ್ತೂಲ್ ಬಗ್ಗೆ ಯಾರಿಗೂ ಹೇಳದಂತೆ ಶಂಕಿತರ ಬಳಿ ಆರೋಪಿಗಳಾದ ನಜೀರ್, ಜುನೈದ್ ಪ್ರಮಾಣ ಮಾಡಿಸಿಕೊಂಡಿದ್ದರಂತೆ. ಡೆಲಿವರಿ ಬಾಯ್ ನೀಡುವ ಪಾರ್ಸೆಲ್ ಓಪನ್ ಮಾಡಬಾರದು. ಏನೇ ಕೆಲಸ ಮಾಡಿದರೂ ಯಾರಿಗೂ ಹೇಳದಂತೆ ಶಂಕಿತರು ಪ್ರಮಾಣ ಮಾಡಿದ್ದರು. ಹೀಗಾಗಿ ಶಂಕಿತ ಉಗ್ರರು ಪಾರ್ಸೆಲ್ ತೆರೆಯದೆ ಸೇಫಾಗಿಟ್ಟಿದ್ದರು.
ಶಂಕಿತ ಐವರು ಉಗ್ರರಲ್ಲಿ ಓರ್ವನ ಪ್ರಿಯತಮೆಯಿಂದ ಡ್ರಗ್ಸ್ ಸಪ್ಲೈ
ಶಂಕಿತ ಉಗ್ರರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಲ್ಲದೆ, ಡ್ರಗ್ಸ್ ಕೂಡ ಸಪ್ಲೈ ಮಾಡುತ್ತಿದ್ದರು ಎಂಬ ಅಂಶ ಸಿಸಿಬಿ ತನಿಖೆ ವೇಳೆ ಬಯಲಾಗಿತ್ತು. ಬಂಧಿತರ ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಹಾಗೂ ಉಮರ್ ಇಬ್ಬರು ಶಂಕಿತ ಉಗ್ರರರು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು.
ಸಿಸಿಬಿ ಪೊಲೀಸರು ಶಂಕತಿ ಉಗ್ರ ಮುದಾಸಿರ್ ಪ್ರಿಯತಮೆಯನ್ನು ವಿಚಾರಣೆಗೆ ಒಳಪಡಿಸಿದಾಗ ಈ ಅಂಶ ಬಯಲಾಗಿದೆ. ಹೌದು ಮುದಾಸಿರ್ ಪ್ರಿಯತಮೆ ಕೈಯಲ್ಲಿ ಡ್ರಗ್ಸ್ ಇಟ್ಟು ನಾನು ಹೇಳಿದವರಿಗೆ ಇದನ್ನು ಕೊಡು ಎಂದು ಹೇಳಿ ಹೋಗುತ್ತಿದ್ದನಂತೆ. ಇದರಂತೆ ಪ್ರಿಯತಮ ಮುದಾಸಿರ್ ಹೇಳಿದವರಿಗೆ ಗೆಳತಿ ಡ್ರಗ್ಸ್ ಕೊಡುತ್ತಿದ್ದಳು. ಇನ್ನು ಮುದಾಸಿರ್ ತಾನು ಬಂಧನವಾದ ದಿನವೂ ಗೆಳತಿಗೆ ಡ್ರಗ್ಸ್ ಕೊಟ್ಟು ಸಪ್ಲೈ ಮಾಡು ಎಂದಿದ್ದನಂತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Sat, 29 July 23