ಬೆಳಗಾವಿ ಗಡಿ ಪ್ರದೇಶದ ಹಳ್ಳಿಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾರಾಷ್ಟ್ರ ನಡೆಗೆ ಬೊಮ್ಮಾಯಿ, ಸಿದ್ದರಾಮಯ್ಯ ಖಂಡನೆ

|

Updated on: Apr 05, 2023 | 3:56 PM

ಬೆಳಗಾವಿ ಗಡಿ ಪ್ರದೇಶದ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆ ವಿಸ್ತರಿಸಿದ್ದು ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಗಡಿ ಪ್ರದೇಶದ ಹಳ್ಳಿಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾರಾಷ್ಟ್ರ ನಡೆಗೆ ಬೊಮ್ಮಾಯಿ, ಸಿದ್ದರಾಮಯ್ಯ ಖಂಡನೆ
ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ(Karnataka Maharashtra Border Dispute) ನಡುವೆ ಗಡಿ ವಿವಾದ ನಡೆಯುತ್ತಿದ್ದರೂ ಮಹಾರಾಷ್ಟ್ರ ಸರ್ಕಾರ ಬೆಳಗಾವಿ, ಕಾರವಾರ, ಕಲಬುರ್ಗಿ ಮತ್ತು ಬೀದರ್‌ ಗಡಿ ವ್ಯಾಪ್ತಿಯ 865 ಹಳ್ಳಿಗಳಿಗೆ ತನ್ನ ಆರೋಗ್ಯ ಯೋಜನೆಯನ್ನು ವಿಸ್ತರಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮಹಾರಾಷ್ಟ್ರ ಸರ್ಕಾರದ ನಿಲುವುಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಗಡಿಯಲ್ಲಿರುವ ಕೆಲವರಿಗೆ ವಿಮೆ ನೀಡುವ ಆದೇಶ ಮಾಡಿರುವುದು ಉದ್ದಟತನದ ಪರಮಾವಧಿಯಾಗಿದ್ದು, ಇದು ಎರಡು ರಾಜ್ಯಗಳ ನಡುವಿನ ಬಾಂಧವ್ಯ ಕದಡುವ ಪ್ರಯತ್ನವಾಗಿದೆ ಎಂದು ಸಿಎಂ ಬೊಮ್ಮಾಯಿ ಗುಡುಗಿದ್ದಾರೆ.

ಬೆಳಗಾವಿ ಗಡಿ ಪ್ರದೇಶದ ಗ್ರಾಮಗಳಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ 865 ಗ್ರಾಮಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಏಪ್ರಿಲ್ 3ರಂದು ನಿರ್ಣಯ ಕೈಗೊಂಡಿತ್ತು. ಈಗಾಗಲೇ ಅಂತ್ಯೋದಯ ಆಹಾರ ಯೋಜನೆಯ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಕೈಗೊಂಡಿರುವ ಉಪಕ್ರಮ) ಫಲಾನುಭವಿಗಳಾಗಿರುವ ಜನರು, ಆದ್ಯತಾ ಗುಂಪಿನ ಕುಟುಂಬಗಳು, ಅನ್ನಪೂರ್ಣ ರೇಶನ್ ಕಾರ್ಡ್​​ದಾರರು ಮಾಹಾತ್ಮ ಜ್ಯೋತಿ ರಾವ್ ಫುಲೆ ಜನ ಆರೋಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರದ ನಿರ್ಣಯ ಉಲ್ಲೇಖಿಸಿದೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Belagavi News: ಬೆಳಗಾವಿ ಗಡಿ ಪ್ರದೇಶದ 865 ಗ್ರಾಮಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾರಾಷ್ಟ್ರ

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ‌ನಲ್ಲಿ ಇದ್ದರೂ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಕರ್ನಾಟಕದ ಗಡಿಯಲ್ಲಿರುವ ಕೆಲವರಿಗೆ ವಿಮೆ ನೀಡುವ ಆದೇಶ ಮಾಡಿರುವುದು ಉದ್ದಟತನದ ಪರಮಾವಧಿಯಾಗಿದ್ದು, ಇದು ಎರಡು ರಾಜ್ಯಗಳ ನಡುವಿನ ಬಾಂಧವ್ಯ ಕದಡುವ ಪ್ರಯತ್ನವಾಗಿದೆ. ಮಹಾರಾಷ್ಟ್ರ ಸರ್ಕಾರ ಇದೇ ರೀತಿ ಉದ್ದಟತನ ಮುಂದುವರೆಸಿದರೆ ಕರ್ನಾಟಕ ಸರ್ಕಾರವೂ ಕೂಡ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿಯ ವಿಮೆ ಜಾರಿಗೊಳಿಸಲಾಗುವುದು. ಕರ್ನಾಟಕ ಗಡಿಯಲ್ಲಿರುವ ಜನರಿಗೆ ವಿಮೆ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ, ಅವರಿಂದ ಮಹಾರಾಷ್ಟ್ರಕ್ಕೆ ಸೇರಿದವರೆಂದು ಘೋಷಣಾ ಪತ್ರ ತೆಗೆದುಕೊಳ್ಳುವುದು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ, ಬೆಳಗಾವಿ ಗಡಿವಿವಾದ ನ್ಯಾಯಾಲಯದ ಕಟಕಟೆಯಲ್ಲಿದೆ. ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನಮಗೆ ಇದೆ. ಈ ನಡುವೆ ರಾಜಕೀಯ ಲಾಭದ ದುರುದ್ದೇಶದಿಂದ ಮಹಾರಾಷ್ಟ್ರ ಆಗಾಗ ಗಡಿತಂಟೆಯನ್ನು ಕೆದಕುವ ಕಿಡಿಗೇಡಿತನ ಮಾಡುವುದು ಖಂಡನೀಯ. ಕನ್ನಡಿಗರು ಇದನ್ನು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಬೆಳಗಾವಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ