ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಎಂಇಎಸ್​ ಮಹಾಮೇಳಕ್ಕೆ ಶಿವಸೇನೆ ಬೆಂಬಲ

| Updated By: ವಿವೇಕ ಬಿರಾದಾರ

Updated on: Dec 04, 2024 | 9:23 AM

ಬೆಳಗಾವಿಯಲ್ಲಿ ನಡೆಯಲಿರುವ 2024ರ ಚಳಿಗಾಲದ ಅಧಿವೇಶನದ ಸಮಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾಮೇಳ ಆಯೋಜಿಸಲು ಯೋಜಿಸಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆ ಈ ಮೇಳಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಗಡಿ ವಿವಾದ ಹಿನ್ನೆಲೆಯಲ್ಲಿ ಈ ಘಟನೆಗಳು ಉದ್ವಿಗ್ನತೆಯನ್ನು ಹೆಚ್ಚಿಸಿವೆ.

ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಎಂಇಎಸ್​ ಮಹಾಮೇಳಕ್ಕೆ ಶಿವಸೇನೆ ಬೆಂಬಲ
ಬೆಳಗಾವಿಯಲ್ಲಿ ಎಂಇಎಸ್​ ಮಹಾಮೇಳಕ್ಕೆ ಶಿವಸೇನೆ ಬೆಂಬಲ
Follow us on

ಬೆಳಗಾವಿ, ಡಿಸೆಂಬರ್​ 04: ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ಡಿಸೆಂಬರ್​ 9 ರಿಂದ 20ವರೆಗೆ 2024ನೇ ಸಾಲಿನ ಚಳಿಗಾಲದ ಅಧಿವೇಶನ (Winter session) ನಡೆಯಲಿದೆ. ಅಧಿವೇಶನ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಬೆಳಗಾವಿಯಲ್ಲಿ ಮಹಾಮೇಳ ನಡೆಸಲು ಮುಂದಾಗಿದೆ. ಎಂಇಎಸ್​ನ ಮಹಾಮೇಳಕ್ಕೆ ಉದ್ಧವ ಠಾಕ್ರೆ ಬಣದ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ. ಅಧಿವೇಶನ ಮೊದಲ ದಿನವೇ ಅನುಮತಿ ಇಲ್ಲದೆ ​ಮಹಾಮೇಳ ನಡೆಸಲು ಎಂಇಎಸ್ ಸಿದ್ಧತೆ ನಡೆಸಿದೆ.

ಈ ಮಹಾಮೇಳ ನಡೆಸಲು ಅನುಮತಿ ನೀಡಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕೆಂದು ಕೊಲ್ಲಾಪುರ ಜಿಲ್ಲಾಧಿಕಾರಿಗೆ ಉದ್ಧವ ಠಾಕ್ರೆ ಬಣದ ಶಿವಸೇನೆ ಮನವಿ ಸಲ್ಲಿಸಿದೆ. ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದೆ. ಆದರೆ, ಬೆಳಗಾವಿಯಲ್ಲಿ ಮಹಾಮೇಳ ಮಾಡಲು ಎಂಇಎಸ್​ಗೆ ಮೂರು ವರ್ಷದಿಂದ ಅಲ್ಲಿನ ಜಿಲ್ಲಾಡಳಿತ ಅನಮತಿ ನೀಡುತ್ತಿಲ್ಲ. ಮಹಾರಾಷ್ಟ್ರದ ನಾಯಕರು ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸುತ್ತಿದ್ದಾರೆ. ಈ ಬಾರಿ ಎಂಇಎಸ್ ಮಹಾಮೇಳಕ್ಕೆ ಮತ್ತು ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಕ್ಕೆ ಅನುಮತಿ ಕೊಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷ ಸಜ್ಜು: 2 ವಾರಕ್ಕಿಂತ ಹೆಚ್ಚು ದಿನ ಅಧಿವೇಶನ ನಡೆಸಲು ಮನವಿ

ಈ ಬಾರಿಯೂ ಎಂಇಎಸ್ ಮಹಾಮೇಳಗೆ ಅನುಮತಿ ಕೊಡದಿದ್ದರೇ, ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಬರುವ ಕರ್ನಾಟಕದ ಸಚಿವರು ಮತ್ತು ಶಾಸಕರಿಗೆ ನಾವು ಅಡ್ಡಿ ಪಡಿಸುತ್ತೇವೆ. ಡಿಸೆಂಬರ್ 9 ರಂದು ಎರಡೂ ರಾಜ್ಯಗಳ ಮಧ್ಯದ ರಸ್ತೆ ಬಂದ್ ಮಾಡುತ್ತೇವೆ. ಕರ್ನಾಟಕದ ರಾಜಕಾರಣಿಗಳು ಮಹಾರಾಷ್ಟ್ರ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ. ಈ ಮೂಲಕ ಉದ್ಧವ ಠಾಕ್ರೆ ಬಣದ ಶಿವಸೇನೆ ಪರೋಕ್ಷವಾಗಿ ಕರ್ನಾಟಕ ಸರ್ಕಾರಕ್ಕೆ ಧಮ್ಕಿ ಹಾಕಿದೆ.

ಗಡಿ ವಿಚಾರವಾಗಿ ಎಂಇಎಸ್​ ಕರ್ನಾಟಕದ ಜೊತೆ ಕ್ಯಾತೆ ತೆಗೆಯುತ್ತಾ ಬಂದಿದೆ. ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಎಂಇಎಸ್​ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಮುಂದಾಗುತ್ತದೆ. ಆದರೆ, ಬೆಳಗಾವಿ ಜಿಲ್ಲಾಧಿಕಾರಿಯವರು ಇದಕ್ಕೆ ಅನುಮತಿ ನೀಡುವುದಿಲ್ಲ. ಅನುಮತಿ ಇಲ್ಲದಿದ್ದರೂ ಎಂಇಎಸ್​ ಕರಾಳ ದಿನಾಚರಣೆ ಆಚರಿಸುತ್ತದೆ.

1,500 ಮಂದಿ ವಿರುದ್ಧ ದೂರು

ಈ ಬಾರಿ ಕನ್ನಡ ರಾಜ್ಯೋತ್ಸವ ದಿನ ಕರಾಳ ದಿನ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮಹರಾಷ್ಟ್ರ ಏಕೀಕರಣ ಸಮಿತಿಯ 46 ಜನ ಮುಖಂಡರು ಸೇರಿದಂತೆ 1,500 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾಜಿ ಶಾಸಕ ಮನೋಹರ ಕಿಣೇಕರ, ಎಮ್​ಇಡಿ ಮುಖಂಡ ಶುಭಂ ಶಳಕೆ, ರಮಾಕಾಂತ ಕೊಂಡುಸ್ಕರ, ವಿಕಾಸ ಕಲಘಟಗಿ ಶಿವಸೇನೆ ಮುಖಂಡ ಪ್ರಕಾಶ ಮರಗಾಳೆ ಸೇರಿದಂತೆ 46 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:56 am, Wed, 4 December 24