
ಬೆಳಗಾವಿ, ನವೆಂಬರ್ 15: ಬೆಳಗಾವಿ (Belagavi) ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕೃಷ್ಣ ಮೃಗಗಳು (Blackbucks) ಸಾವನ್ನಪ್ಪುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಒಟ್ಟು 28 ಕೃಷ್ಣ ಮೃಗಗಳು ಮೃತಪಟ್ಟಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮತ್ತು ಗೊಂದಲ ಹೆಚ್ಚಾಗಿದೆ.
ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳ ಸಾವು ಸಂಭವಿಸಿತ್ತು. ಆದರೆ, ಇಂದು ಒಂದೇ ದಿನ 20 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಏಕಾಏಕಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಎರಡು ದಿನಗಳ ಹಿಂದೆ ಮೃತಪಟ್ಟ ಮೃಗಗಳ ಮೃತದೇಹಗಳನ್ನು ವಿಶ್ಲೇಷಣೆಗೆ ಲ್ಯಾಬ್ ಗೆ ಕಳುಹಿಸಲಾಗಿತ್ತು.
ಲ್ಯಾಬ್ ವರದಿ ಇನ್ನಷ್ಟೇ ಬರಬೇಕಿದ್ದು, ಇಂದು ಮತ್ತೆ 20 ಮೃಗಗಳು ಸಾವನ್ನಪ್ಪಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮರಣೋತ್ತರ ಪರೀಕ್ಷೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ
ಏತನ್ಮಧ್ಯೆ, ಘಟನೆ ಬಳಿಕ ಎಸಿಎಫ್ ನಾಗರಾಜ್ ಮೃಗಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮೃಗಾಲಯದಲ್ಲಿ ಮೃಗಗಳ ಆರೈಕೆ, ಆಹಾರ, ನೀರಿನ ಗುಣಮಟ್ಟ ಹಾಗೂ ಸೋಂಕಿನ ಹರಡುವಿಕೆ ಕುರಿತಂತೆ ಪರಿಶೀಲನೆ ಮುಂದುವರಿದಿದೆ.
ಸದ್ಯ 28 ಕೃಷ್ಣ ಮೃಗಗಳು ಸಾವನ್ನಪ್ಪಿದ್ದರೆ, ಹತ್ತು ಕೃಷ್ಣ ಮೃಗಗಳು ಬದುಕಿದ್ದು, ಅವುಗಳನ್ನು ನಿಗಾದಲ್ಲಿ ಇರಿಸಲಾಗಿದೆ. ಈಗಾಗಲೇ ಅವುಗಳಿಗೆ ಮುಂಜಾಗ್ರತಾ ಕ್ರಮವಾಗಿ ಔಷಧಿ ನೀಡಿ ಕಾಳಜಿ ವಹಿಸಿದ್ದು, ಹತ್ತಾದರೂ ಬದುಕಲಿ ಅಂತಾ ಪ್ರಯತ್ನ ನಡೆದಿದೆ.
ಒಟ್ಟಿನಲ್ಲಿ ಕೃಷ್ಣ ಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಅರಣ್ಯ ಇಲಾಖೆಯವರ ಬೇಜವಾಬ್ದಾರಿಯಿಂದಾನಾ ಅಥವಾ ಕಾಯಿಲೆಯಿಂದಾನಾ ಅನ್ನೋದು ತನಿಖೆಯಿಂದ ಹೊರ ಬರಲಿದೆ. ಸದ್ಯ ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದ ನಿರ್ಲಕ್ಷ್ಯ ಮೇಲ್ನೊಟಕ್ಕೆ ಕಂಡು ಬರ್ತಿದ್ದು, ಈ ನಿಟ್ಟಿನಲ್ಲಿ ಕೂಡ ತನಿಖೆ ನಡೆಯಲಿದೆ.
Published On - 1:47 pm, Sat, 15 November 25