AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲೇ ಕುಳಿತುಕೊಂಡು ಅಮೆರಿಕಾ ನಾಗರಿಕರ ಡಾಲರ್ ಡಾಲರ್ ಹಣ ಎಗರಿಸ್ತಿದ್ದ ಖತರ್ನಾಕ್ ಗ್ಯಾಂಗ್ ಖೆಡ್ಡಾಕ್ಕೆ

ಬೆಳಗಾವಿಯಲ್ಲಿ ಕಾಲ್ ಸೆಂಟರ್ ಹೆಸರಿನಲ್ಲಿ ಅಮೆರಿಕಾ ನಾಗರಿಕರನ್ನು ವಂಚಿಸುತ್ತಿದ್ದ ಸೈಬರ್ ವಂಚನೆ ಗ್ಯಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ. 33 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಅಮೆರಿಕಾದ ಹಿರಿಯ ನಾಗರಿಕರನ್ನು ಗುರಿಯಾಗಿಸಿ ಕೋಟ್ಯಂತರ ಡಾಲರ್ ವಂಚಿಸುತ್ತಿದ್ದರು. ಸೈಬರ್ ಭರ್ಜರಿ ಪೊಲೀಸರ ಕಾರ್ಯಾಚರಣೆಯಿಂದ ಬೃಹತ್ ವಂಚನೆ ಜಾಲ ಬೆಳಕಿಗೆ ಬಂದಿದೆ.

ಬೆಳಗಾವಿಯಲ್ಲೇ ಕುಳಿತುಕೊಂಡು ಅಮೆರಿಕಾ ನಾಗರಿಕರ ಡಾಲರ್ ಡಾಲರ್ ಹಣ ಎಗರಿಸ್ತಿದ್ದ ಖತರ್ನಾಕ್ ಗ್ಯಾಂಗ್ ಖೆಡ್ಡಾಕ್ಕೆ
ಬೆಳಗಾವಿ ಸೈಬರ್ ವಂಚನೆ ಗ್ಯಾಂಗ್ ಅರೆಸ್ಟ್
Sahadev Mane
| Edited By: |

Updated on:Nov 15, 2025 | 10:11 AM

Share

ಬೆಳಗಾವಿ, ನವೆಂಬರ್ 15: ಬೆಳಗಾವಿಯಲ್ಲಿ (Belagavi) ಕಾಲ್ ಸೆಂಟರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿಕೊಂಡು ದೂರದ ಅಮೆರಿಕಾ (America) ನಾಗರಿಕರ ಡಾಲರ್ ಡಾಲರ್ ಹಣ ಎಗರಿಸುತ್ತಿದ್ದ ಗ್ಯಾಂಗೊಂದನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಸೈಬರ್ ವಂಚನಾ ಗ್ಯಾಂಗ್‌ ಕೃತ್ಯವನ್ನು ಬೆಳಗಾವಿ ಸೈಬರ್ ಪೊಲೀಸರು ಪತ್ತೆಹಚ್ಚಿ, ದಾಳಿ ನಡೆಸಿ 33 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೇರಿಕಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ಡಾಲರ್‌ ವಂಚಿಸುತ್ತಿದ್ದ ಈ ಗ್ಯಾಂಗ್‌ ವಿರುದ್ಧ ಈಗ ಸೈಬರ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ಸೈಬರ್ ವಂಚಕರ ಗ್ಯಾಂಗ್ ಬೆಳಗಾವಿಯ ಅಜಮ್ ನಗರದ ಕುಮಾರ್ ಹಾಲ್​ನಲ್ಲಿ ‘ಕಾಲ್ ಸೆಂಟರ್’ ಹೆಸರಿನಲ್ಲಿ ವ್ಯವಹಾರಕ್ಕೆ ಅನುಮತಿ ಪಡೆದು ವಂಚನೆ ಎಸಗುತ್ತಿತ್ತು. ಅನಾಮಧೇಯ ವ್ಯಕ್ತಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 37 ಲ್ಯಾಪ್‌ಟಾಪ್‌ಗಳು, 37 ಮೊಬೈಲ್‌ಗಳು ಹಾಗೂ ವಂಚನೆಗೆ ಬಳಸಿದ್ದ ಅನೇಕ ಡಿಜಿಟಲ್ ಸಾಕ್ಷಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಮೆರಿಕಾ ಹಿರಿಯ ನಾಗರಿಕರೇ ಟಾರ್ಗೆಟ್

ಸೈಬರ್ ವಂಚಕರ ಈ ಗ್ಯಾಂಗ್​ನ ಸುಲಿಗೆ ಗುರಿಯಲ್ಲಿದ್ದವರು ಮುಖ್ಯವಾಗಿ ಅಮೇರಿಕಾದ ಹಿರಿಯ ನಾಗರಿಕರು. ಡಾರ್ಕ್ ವೆಬ್‌ನಿಂದ ನಂಬರ್‌ಗಳನ್ನು ಪಡೆದು ಪ್ರತಿದಿನ ನೂರಾರು ಜನರಿಗೆ ಕರೆ ಮಾಡಿ, ವಿವಿಧ ಸುಳ್ಳು ಕಾರಣಗಳನ್ನು ಹೇಳಿ ಹಣ ಎಗರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಅಮೆರಿಕದ ಹಿರಿಯ ನಾಗರಿಕರನ್ನು ವಂಚಿಸುತ್ತಿದ್ದುದು ಹೇಗೆ ಬೆಳಗಾವಿ ಗ್ಯಾಂಗ್?

ಡಾರ್ಕ್ ವೆಬ್‌ನಿಂದ ನಂಬರ್‌ಗಳನ್ನು ಪಡೆದ ನಂತರ ಈ ಗ್ಯಾಂಗ್ ನೂರಾರು ಜನರಿಗೆ ಕರೆ ಮಾಡುತ್ತಿತ್ತು. ಬಳಿಕ ‘ಫೆಡರಲ್ ಟ್ರೇಡ್ ಕಮಿಷನ್‌ನಿಂದ ಮಾತನಾಡುತ್ತಿದ್ದೇವೆ. ನಿಮ್ಮ ಹೆಸರಿನಲ್ಲಿ ಪಾರ್ಸಲ್ ಬಂದಿದೆ, ಪಾರ್ಸಲ್ ರದ್ದು ಮಾಡಲು ಈ ನಂಬರ್‌ಗೆ ಕರೆ ಮಾಡಿ’ ಎಂದು ಹೇಳುತ್ತಿತ್ತು. ಹಾಗೆ ಕರೆ ಮಾಡಿದವರನ್ನು ವಂಚಿಸಿ ಹಣ ಎಗರಿಸುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಮಾಯಕರನ್ನು ನಂಬಿಸಲು ವಂಚಕರು ವಿವಿಧ ರೀತಿಯಲ್ಲಿ ಕಥೆಕಟ್ಟಿದ್ದರು ಎನ್ನಲಾಗಿದೆ. ಸುಮಾರು 11 ಕತೆಗಳನ್ನು ಕಟ್ಟಿದ್ದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಉನ್ನತ ಶಿಕ್ಷಣ ಪಡೆದ ಯುವಕರೇ ವಂಚಕರು!

ಬಂಧಿತರಾದ 33 ಮಂದಿ ಎಲ್ಲರೂ ಉತ್ತರ ಭಾರತದ ಯುವಕರು. ಇಂಜಿನಿಯರಿಂಗ್ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಪಡೆದಿದ್ದ ಅವರನ್ನೆಲ್ಲ ಕಿಂಗ್​ಪಿನ್​ಗಳು ಮಾಸಿಕ 35,000 ರೂ. ಸಂಬಳದ ಕೆಲಸ ಎಂದು ಹೇಳಿ ವಂಚನಾ ಜಾಲಕ್ಕೆ ಸೆಳೆಯಲ್ಪಟ್ಟಿದ್ದರು. ಇವರ ಹಿಂದೆ ಗುಜರಾತ್ ಹಾಗೂ ಕೋಲ್ಕತ್ತಾದಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಕಿಂಗ್ ಪಿನ್‌ಗಳಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ

ಬೆಳಗಾವಿ ಹಾಗೂ ಅಮೆರಿಕಾ ಎರಡೂ ಕಡೆಗಳಿಂದ ಈ ಗ್ಯಾಂಗ್ ಆಪರೇಟ್ ಆಗುತ್ತಿದ್ದು, ಅಮೇರಿಕಾದಲ್ಲಿ ಪೀಡಿತರು ದೂರು ನೀಡಿದ ಪ್ರಕರಣಗಳಲ್ಲೂ ಈ ಗ್ಯಾಂಗ್​ನ ಹೆಸರು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಆರೋಪಿ ಯುವಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 am, Sat, 15 November 25