ಬೆಳಗಾವಿ: ಇಡೀ ಜಿಲ್ಲೆಯು ಭೀಕರ ಮಳೆಯಿಂದ ತತ್ತರಿಸಿದ್ದು ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಜೀವದ ಹಂಗು ತೊರೆದು ಲೈನ್ಮನ್ಗಳು ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರ್ಣಿ ಗ್ರಾಮದಲ್ಲಿ ಘಟನೆ ನಡೆದಿದ್ದು ಲೈನ್ಮನ್ಗಳು ಮಳೆಯಲ್ಲಿಯೇ ತೆರಳಿ ಟಿಸಿಗಳು ಮತ್ತು ವಿದ್ಯುತ್ ಕಂಬಗಳನ್ನು ಪರಿಶೀಲಿಸಿದ್ದಾರೆ. ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಹಿರಣ್ಯಕೇಶಿ ನದಿಯ ಹಿನ್ನೀರಿನಿಂದ ಬಂದ್ ಆಗಿರುವ ಹಿಡಕಲ್ ಡ್ಯಾಂ- ಹುಕ್ಕೇರಿ ರಸ್ತೆಯಲ್ಲಿ ರಭಸವಾಗಿ ಹರಿಯುವ ನೀರಿನಲ್ಲಿ ಹೋಗಿ ಲೈನ್ಮನ್ಗಳು ಟಿಸಿಗಳನ್ನ ಪರಿಶೀಲಿಸಿ ಮರಳಿ ಬಂದಿದ್ದಾರೆ. ಪ್ರಾಣದ ಹಂಗು ತೊರೆದು ನೀರಿನಲ್ಲಿ ಹೋಗಿ ಪರಿಶೀಲನೆ ಮಾಡಿ ಬಂದಿದ್ದೇವೆ ಎಂದು ಲೈನ್ಮನ್ ಹೇಳಿಕೆ ನೀಡಿದ್ದಾರೆ.
ನಿಪ್ಪಾಣಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದಲ್ಲಿ ಸಿಲುಕಿದ್ದ ಗರ್ಭಿಣಿ ಮಹಿಳೆಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿದೆ. ವೇದಗಂಗಾ ನದಿಯ ಪ್ರವಾಹದಿಂದ ಕುರ್ಲಿ ಗ್ರಾಮ ಮುಳುಗಡೆಯಾಗಿತ್ತು. ಸ್ಥಳಕ್ಕೆ ತೆರಳಿದ ಸಿಬ್ಬಂದಿ ಗ್ರಾಮದಲ್ಲಿ ಸಿಲುಕಿದ್ದ ಗರ್ಭಿಣಿ ಮಹಿಳೆ ಹಾಗೂ ಇನ್ನೊರ್ವ ರೋಗಿಯನ್ನು ರಕ್ಷಿಸಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಚಿಕ್ಕೋಡಿ: ಕೃಷ್ಣಾ ನದಿಯ ನೀರು ನುಗ್ಗಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮ ನಡುಗಡ್ಡೆಯಂತಾಗಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ಗ್ರಾಮದಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಕೃಷ್ಣಾ ನದಿ ಪ್ರವಾಹಕ್ಕೆ ದಡದ ಅಕ್ಕಪಕ್ಕದಲ್ಲಿ ಬೆಳೆದಿದ್ದ ಕಬ್ಬು ಬೆಳೆ ನಾಶಗೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನಲ್ಲಿ ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಕಬ್ಬು ಬೆಳೆ ಹಾನಿಯಾಗಿದೆ. 3 ವರ್ಷದಿಂದ ನೆರೆಯಿಂದ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ ಈ ಬಾರಿಯೂ ನೆರೆಯಿಂದ ಬೆಳೆ ಹಾನಿಯಾಗಿರುವುದು ಆಘಾತ ಉಂಟುಮಾಡಿದ್ದು ಕಂಗಾಲಾಗಿದ್ದಾರೆ.
ಹುಕ್ಕೇರಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಟಬಾಗಿ ಗ್ರಾಮದ ದುರ್ಗಾದೇವಿ ದೇಗುಲ ಜಲಾವೃತಗೊಂಡಿದೆ. ಅರ್ಚಕರು ಸೇರಿದಂತೆ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಹುಕ್ಕೇರಿ ತಾಲೂಕಿನ ಕುರ್ಣಿ ಗ್ರಾಮದಲ್ಲಿ ಭಾರಿ ಮಳೆಗೆ ಬೆಳೆ, ಮನೆಗಳು ಜಲಾವೃತವಾಗಿವೆ. ಹಿರಣ್ಯಕೇಶಿ ನದಿಯ ನೀರು ನುಗ್ಗಿ 20 ಮನೆಗಳು ಜಲಾವೃತಗೊಂಡಿವೆ. ಸಂತ್ರಸ್ತರು ಸೂರು ಕಳೆದುಕೊಂಡು ದಿಕ್ಕೆಟ್ಟಿದ್ದು ಸಹಾಯ ಮಾಡುವಂತೆ ಅಂಗಲಾಚುತ್ತಿದ್ಧಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಕುರಿತ ವಿಡಿಯೊ ವರದಿ ಇಲ್ಲಿದೆ:
(Belagavi district is suffering by heavy rain and flood even in this situation Lineman’s are working bravely)
Published On - 1:29 pm, Sat, 24 July 21