ಬೆಳಗಾವಿಯಲ್ಲಿ ಭೀಕರ ಕೊಲೆ; ಪತ್ನಿ, ಆಕೆಯ ಪ್ರಿಯಕರನ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಆರೋಪಿ ಪರಾರಿ

| Updated By: ಗಣಪತಿ ಶರ್ಮ

Updated on: Jul 04, 2023 | 6:50 PM

ಅನೈತಿಕ ಸಂಬಂಧದ ಆರೋಪದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ವ್ಯಕ್ತಿಯೊಬ್ಬರು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾದ ಭೀಕರ ಘಟೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಕ್ಕತಂಗಿಯರಹಾಳದಲ್ಲಿ ಮಂಗಳವಾರ ನಡೆದಿದೆ.

ಬೆಳಗಾವಿಯಲ್ಲಿ ಭೀಕರ ಕೊಲೆ; ಪತ್ನಿ, ಆಕೆಯ ಪ್ರಿಯಕರನ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಆರೋಪಿ ಪರಾರಿ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ: ಅನೈತಿಕ ಸಂಬಂಧದ ಆರೋಪದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ವ್ಯಕ್ತಿಯೊಬ್ಬರು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾದ ಭೀಕರ ಘಟೆ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ಅಕ್ಕತಂಗಿಯರಹಾಳದಲ್ಲಿ ಮಂಗಳವಾರ ನಡೆದಿದೆ. ಹತ್ಯೆಯಾದವರನ್ನು ರೇಣುಕಾ ಮಾಳಗಿ (40) ಹಾಗೂ ಮಲ್ಲಿಕಾರ್ಜುನ ಜಗದಾರ್ (35) ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಅವರು ರೇಣುಕಾ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದರು ಎನ್ನಲಾಗಿದೆ. ರೇಣುಕಾ ಮಾಳಗಿ ಪತಿ ಯಲ್ಲಪ್ಪ ಮಾಳಗಿ ಕೃತ್ಯ ಎಸಗಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ ಪಾಟೀಲ್ ಭೇಟಿ ನೀಡಿದ್ದಾರೆ. ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅರ್ಚಕ ಕೆಲಸ ಬಿಡಿಸಿದ್ದಕ್ಕೆ ಮರಕ್ಕೆ ಜೋಕಾಲಿ ಕಟ್ಟಿ ಪೂಜಾರಿಯ ಧರಣಿ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿ ಅರ್ಚಕ ಕೆಲಸ ಬಿಡಿಸಿದ್ದಕ್ಕೆ ಪೂಜಾರಿಯೊಬ್ಬರು ಮರಕ್ಕೆ ಜೋಕಾಲಿ ಕಟ್ಟಿ ಧರಣಿ ನಡೆಸಿದ್ದಾರೆ. ಹರಿಯಾಣ ಮೂಲದ ದೇವೇಂದ್ರ ಸಿಂಗ್ ಶರ್ಮಾ ಎಂಬ ಪೂಜಾರಿ ಧರಣಿ ನಡೆಸಿದವರು. ಹಬ್ಬಾನಟ್ಟಿ ಮಾರುತಿ ದೇವಾಲಯಕ್ಕೆ ನಿತ್ಯ ಪೂಜೆ, ಧಾರ್ಮಿಕ ಕೆಲಸಕ್ಕೆಂದು ದೇವೇಂದ್ರ ಅವರನ್ನು ನೇಮಕ ಮಾಡಲಾಗಿತ್ತು. ಇವರು ಕಳೆದ ಎರಡು ತಿಂಗಳಿನಿಂದ ಹನುಮಾನ್ ದೇವಸ್ಥಾನ ಪೂಜಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಪೂಜೆ ಪುನಸ್ಕಾರ ಇಷ್ಟ ಆಗುತ್ತಿಲ್ಲ ಎಂಬ ಕಾರಣಕ್ಕೆ ದೇವೇಂದ್ರ ಅವರನ್ನು ಹಬ್ಬಾನಟ್ಟಿ ದೇವಸ್ಥಾನದ ಆಡಳಿತ ಮಂಡಳಿ ಕೆಲಸದಿಂದ ತೆಗೆದುಹಾಕಿತ್ತು ಎನ್ನಲಾಗಿದೆ.

ಆಡಳಿತ ಮಂಡಳಿ ನೀಡಿದ ಭರವಸೆಯಿಂದ ಕುಟುಂಬ ಸಮೇತ ಬಂದಿದ್ದೇನೆ. ಏಕಾಏಕಿ ಕೆಲಸದಿಂದ ಬಿಡಿಸಿದ್ದು, ನ್ಯಾಯ ಬೇಕು ಎಂದು ಪೂಜಾರಿ ಅಲವತ್ತುಕೊಂಡಿದ್ದಾರೆ. ಬಳಿಕ ಮಲಪ್ರಭಾ ನದಿಯಲ್ಲಿ‌ನ ಮರಕ್ಕೆ ಜೋಕಾಲಿ ಕಟ್ಟಿ ಧರಣಿ ಕುಳಿತಿದ್ದಾರೆ.

ಪೂಜಾರಿ ಕೆಲಸ ನಂಬಿ ಕುಟುಂಬ ಸಮೇತ ಹರಿಯಾಣದಿಂದ ಬಂದಿದ್ದೇನೆ. ವಾಪಾಸ್ ಕೆಲಸಕ್ಕೆ ಸೆರಿಸಿಕೊಳ್ಳಿ ಎಂದು ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ, ದೇವರಿಗೆ ಅಪಮಾನ ಮಾಡಿದವರು ಕಮಿಟಿಯಲ್ಲಿರಬಾರದು. ದೇವಸ್ಥಾನಕ್ಕೆ ದೇಣಿಗೆ ಬಂದ ಹಣವನ್ನು ಆಡಳಿತ ಮಂಡಳಿ ಸದಸ್ಯರ ಮನೆಯಲ್ಲಿ ಎಣಿಸಲಾಗುತ್ತೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಅರ್ಚಕ ಸ್ಥಾನದಿಂದ ಕೆಳಗಿಳಿಸಿ ಬೇರೆಯವರಿಗೆ ನೀಡಿದ್ದಾರೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಮೃತಪಟ್ಟಿರಬಹುದು ಎಂದು ಭಾವಿಸಿದ್ದ ವ್ಯಕ್ತಿಯೇ ಕೊಲೆಗಾರ! ಕ್ಲಿಷ್ಟಕರ ಪ್ರಕರಣ ಬೇಧಿಸಿದ ಕಲಬುರಗಿ ಪೊಲೀಸರು

ಕಮಿಟಿಯವರು ನನ್ನನ್ನು ಗೌರವದಿಂದ ಹರಿಯಾಣಕ್ಕೆ ಕಳುಹಿಸಬೇಕು. ಮುಂದಿನ ವರ್ಷದ ವರೆಗೂ ನಾನು ನದಿಯಲ್ಲಿ ಧರಣಿ ಕೂರಲು ಸಿದ್ಧನಿದ್ದೇನೆ. ನಾನು ನದಿಯಲ್ಲಿ ಕುಳಿತಿರುವವರೆಗೂ ಮಾರುತಿ ಕೃಪೆಯಿಂದ ಮಳೆ ಆಗುವುದಿಲ್ಲ. ಜುಲೈ 20ರ ವರೆಗೂ ಮಳೆ ಆಗದಿದ್ದಾಗ ನನ್ನ ಬಳಿ ಬನ್ನಿ ಹೀಗೆ ಕುಳಿತಿರುತ್ತೇನೆ. ನಂತರ ಆಗಸ್ಟ್ 20ಕ್ಕೆ ಬನ್ನಿ ನದಿಯಲ್ಲೇ ಕುಳಿತಿರುತ್ತೇನೆಂದು ಶಪಥ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ