ಮೃತಪಟ್ಟಿರಬಹುದು ಎಂದು ಭಾವಿಸಿದ್ದ ವ್ಯಕ್ತಿಯೇ ಕೊಲೆಗಾರ! ಕ್ಲಿಷ್ಟಕರ ಪ್ರಕರಣ ಬೇಧಿಸಿದ ಕಲಬುರಗಿ ಪೊಲೀಸರು
ವಿಚಿತ್ರವೆಂದ್ರೆ, ಇಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಮೊದಲು ಸಿಕ್ಕಿಲ್ಲ! ಕೊಲೆ ಆರೋಪಿ ಪತ್ತೆಯಾದ ಮೇಲೆ ಗೊತ್ತಾಗಿದೆ ಕೊಲೆಯಾದ ವ್ಯಕ್ತಿಯ ಗುರುತು.
ಕಲಬುರಗಿ: ಆರೋಪಿಗಳು ಎಷ್ಟೇ ಬುದ್ದಿವಂತರಿರಲಿ, ಒಂದಿಲ್ಲಾ ಒಂದು ದಿನ ಪೊಲೀಸರ ಕೈಗೆ ಸಿಕ್ಕಿಬೀಳ್ತಾರೆ ಅನ್ನೋದು ಅನೇಕ ಕೇಸ್ ಗಳಲ್ಲಿ ಮೇಲಿಂದ ಮೇಲೆ ಸಾಬೀತಾಗುತ್ತಲೆ ಇದೆ. ಹೌದು ಕಲಬುರಗಿ ಪೊಲೀಸರು (Kalaburagi Police) ಕ್ಲಿಷ್ಟಕರ ಕೊಲೆ ಪ್ರಕರಣವೊಂದನ್ನು (Murder Case) ಬೇಧಿಸುವಲ್ಲಿ ಸಫಲರಾಗಿದ್ದಾರೆ. ವಿಚಿತ್ರವೆಂದ್ರೆ, ಇಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಮೊದಲು ಸಿಕ್ಕಿಲ್ಲ! ಕೊಲೆ ಆರೋಪಿ ಪತ್ತೆಯಾದ ಮೇಲೆ ಗೊತ್ತಾಗಿದೆ ಕೊಲೆಯಾದ ವ್ಯಕ್ತಿಯ ಗುರುತು.
ರಹಸ್ಯ ಪ್ರಕರಣದ ಹಿನ್ನೆಲೆ
ಮೇ19 ರಂದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಸಿರಡೋಣಾ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವನ ಕೈಯೊಂದು ಪತ್ತೆಯಾಗಿತ್ತು. ಹೀಗಾಗಿ ಮಹಗಾಂವ ಠಾಣೆಯ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದ್ದು, ವ್ಯಕ್ತಿಯೋರ್ವನನ್ನು ಮಣ್ಣಲ್ಲಿ ಮುಚ್ಚಿ ಹೋಗಿದ್ದಾರೆ ಅಂತ. ಆದ್ರೆ ನಾಯಿ ಸೇರಿದಂತೆ ಕೆಲ ಪ್ರಾಣಿಗಳು ಮಣ್ಣನ್ನು ಕೆದರಿದ್ದರಿಂದ ಶವ ಇರೋದು ಪತ್ತೆಯಾಗಿತ್ತು. ಆದ್ರೆ ಅರಣ್ಯದಲ್ಲಿ ಸಿಕ್ಕ ಶವ ಯಾರದ್ದು, ಯಾರು ಈ ರೀತಿ ಅರಣ್ಯದಲ್ಲಿ ಶವ ಮುಚ್ಚಿ ಹೋಗಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿರಲಿಲ್ಲಾ. ಹೀಗಾಗಿ ಪೊಲೀಸರು ಅನೇಕರನ್ನು ವಿಚಾರಣೆ ನಡೆಸಿದ್ದರು. ಸುತ್ತಮುತ್ತಲಿನ ಗ್ರಾಮದ ಜನರು ಯಾರು ಕೂಡಾ ಅರಣ್ಯದಲ್ಲಿ ಶವ ಸಂಸ್ಕಾರ ಮಾಡಿಲ್ಲಾ ಅಂತ ಹೇಳಿದ್ದರು. ಇನ್ನೊಂದಡೆ ಪೊಲೀಸರಿಗೆ ಸಿಕ್ಕ ಶವ ನೋಡಿ, ಇದು ಕೊಲೆ ಅಂತ ಅಂದುಕೊಂಡಿದ್ದರು. ಹೀಗಾಗಿ ಕೊಲೆಯಾದ ವ್ಯಕ್ತಿ ಯಾರು ಅನ್ನೋದನ್ನು ಪತ್ತೆ ಮಾಡಲು ಆರಂಭಿಸಿದ್ದರು.
ತಿಂಗಳಾದ್ರು ಗೊತ್ತಾಗಿರಲಿಲ್ಲಾ ಕೊಲೆಯಾದ ವ್ಯಕ್ತಿ ಗುರುತು
ಇನ್ನು ಪೊಲೀಸರು ಶವವಾಗಿ ಪತ್ತೆಯಾದ ವ್ಯಕ್ತಿಯ ಗುರುತು ಪತ್ತೆ ಮಾಡಲು ಟವರ್ ಲೋಕೆಷನ್ ಚೆಕ್ ಮಾಡಿದ್ರು. ಸುತ್ತಮುತ್ತಲಿನ ಪ್ರದೇಶದಲ್ಲಿನ ಟವರ್ ವ್ಯಾಪ್ತಿಯಲ್ಲಿ ಶವ ಸಿಕ್ಕ ಹಿಂದಿನ ಒಂದು ವಾರದ ಅನೇಕರ ಕರೆಗಳನ್ನು ಪರಿಶೀಲಿಸಿದ್ದರು. ಆದ್ರೆ ಕೊಲೆಯಾದ ವ್ಯಕ್ತಿ ಗುರುತು ಪತ್ತೆಯಾಗಿರಲಿಲ್ಲಾ. ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಪೊಲೀಸರಿಗೆ ಕೂಡಾ ಮಾಹಿತಿ ನೀಡಿ, ಯಾರಾದ್ರು ಮಿಸ್ಸಿಂಗ್ ಇದ್ರೆ ಮಾಹಿತಿ ನೀಡಿ ಅಂತ ಕೇಳಿದ್ದರು. ಆದರು ಯಾರು ಕೂಡಾ ಶವದ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಇನ್ನೊಂದಡೆ ಪೊಲೀಸರು ತಮ್ಮ ಪ್ರಯತ್ನ ಬಿಟ್ಟಿರಲಿಲ್ಲ. ಶಿರಡೋಣಾ ಸುತ್ತಮುತ್ತ ಅನೇಕ ವ್ಯಕ್ತಿಗಳನ್ನು ವಿಚಾರಿಸಿದ್ದರು. ಯಾರಾದ್ರು ಮನೆಗೆ ಬಾರದೆ ಇರೋರು ಇದ್ದಾರಾ ಅನ್ನೋದನ್ನು ಪತ್ತೆ ಮಾಡಿದ್ದರು. ಸುತ್ತಮುತ್ತಲಿನ ಪ್ಯಾಕ್ಟರಿಗಳಲ್ಲಿ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ನಂತರ ಓರ್ವ ವ್ಯಕ್ತಿ, ತಮ್ಮ ಗ್ರಾಮಕ್ಕೆ ಕೆಲ ದಿನಗಳಿಂದ ಬಾರದೆ ಇರೋ ಬಗ್ಗೆ ಮಾಹಿತಿ ನೀಡಿದ್ದ. ಆತ ಯಾರು ಅಂತ ನೋಡಿದಾಗ ಗೊತ್ತಾಗಿದ್ದು, ಆತ ಶಿರಡೋಣಾ ಗ್ರಾಮದ ಸತೀಶ್ ಅನ್ನೋದು ಗೊತ್ತಾಗಿತ್ತು.
ಪೊಲೀಸರು ಸತೀಶ್ ಗಾಗಿ ಹುಡುಕಾಟ ನಡೆಸಿದ್ದರು. ನಂತರ ಸತೀಶ್ ಬದುಕಿದ್ದಾನೆ ಅನ್ನೋದು ಗೊತ್ತಾಗಿತ್ತು. ಆದರೆ ಪೊಲೀಸರು ಸಹಜ ಕುತೂಹಲದಿಂದ ಆತನನ್ನು ವಿಚಾರಿಸಿದ್ದಾರೆ. ಎಲ್ಲಿ ಇರ್ತಿಯಾ, ಯಾಕೆ ಊರಿಗೆ ಬಂದಿಲ್ಲಾ ಅನ್ನೋದು ಸೇರಿದಂತೆ ಅನೇಕ ಮಾಹಿತಿ ಕಲೆ ಹಾಕಿದ್ದಾರೆ. ಆದ್ರೆ ಸತೀಶ್ ಅಸಮಂಜರ ಉತ್ತರ ನೀಡಿದ್ದಾನೆ. ಆಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗೊತ್ತಾಗಿದೆ, ಸತೀಶ್ ನೆ ಕೊಲೆ ಆರೋಪಿ ಅನ್ನೋದು. ಯಾವ ವ್ಯಕ್ತಿ ಸತ್ತಿರಬಹುದು ಅಂತ ಅಂದುಕೊಂಡು ಪೊಲೀಸರು ಹುಡುಕಿದ್ದರೋ, ಆತನೇ ಕೊಲೆ ಆರೋಪಿಯಾಗಿದ್ದ.
ಇದನ್ನೂ ಓದಿ: ಕಿರಾತಕ ಮದುವೆಯಾಗಿದ್ದರೂ ಮತ್ತೊಬ್ಬ ಯುವತಿಯನ್ನು ಪ್ರೀತಿಗಾಗಿ ಪೀಡಿಸ್ತಿದ್ದ, ಕಾಟ ತಾಳದೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು
ಶಿರಡೋಣಾ ಗ್ರಾಮದ ಸತೀಶ್ ಮತ್ತು ಆತನ ಸಹಚರರಾದ ಪ್ರದೀಪ್ ಮತ್ತು ಶರಣು ಅನ್ನೋರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊಲೆಯಾದ ವ್ಯಕ್ತಿಯ ಹೆಸರು ರಾಜು ಅನ್ನೋದು ಆರೋಪಿಗಳಿಂದಲೇ ಗೊತ್ತಾಗಿದೆ. ಕಲಬುರಗಿ ನಗರದ ಆಶ್ರಯ ಕಾಲೋನಿ ನಿವಾಸಿಯಾಗಿದ್ದ ಮೂವತ್ತೈದು ವರ್ಷದ ರಾಜು ಬರ್ಬರ ಕೊಲೆಯಾಗಿದ್ದ ವ್ಯಕ್ತಿ. ರಾಜು, ರೌಡಿ ಶೀಟರ್ ಆಗಿದ್ದ. ಕಳ್ಳತನ ಸೇರಿದಂತೆ ಕೆಲ ದುಷ್ಕೃತ್ಯಗಳನ್ನು ಮಾಡುತ್ತಿದ್ದ. ಹೀಗಾಗಿ ಮನೆಯವರು ಆತನಿಂದ ದೂರವಿದ್ದರು. ಇನ್ನು ಸತೀಶ್ ಕೂಡಾ ಕೆಲ ತಿಂಗಳಿಂದ ಕಲಬುರಗಿ ನಗರದ ಆಶ್ರಯ ಕಾಲೋನಿಯಲ್ಲಿಯೇ ಪತ್ನಿ ಜೊತೆ ಇದ್ದ. ಆದ್ರೆ ಪ್ರತಿ ವಾರ ತನ್ನೂರಿಗೆ ಹೋಗಿ ಬಂದು ಮಾಡ್ತಿದ್ದ.
ಇನ್ನು ಸತೀಶ್ ಪತ್ನಿ ಮೇಲೆ ರಾಜು ಕಣ್ಣು ಹಾಕಿದ್ದನಂತೆ. ಜೊತೆಗೆ ರಾಜು ಬಗ್ಗೆ ಸತೀಶ್ ಪೊಲೀಸರಿಗೆ ಮಾಹಿತಿ ನೀಡಿದ್ದನಂತೆ. ರಾಜು ಮತ್ತು ಆರೋಪಿ ಸತೀಶ್ ಈ ಮೊದಲು ಕಲಬುರಗಿ ನಗರದ ಆಶ್ರಯ ಕಾಲೋನಿಯಲ್ಲಿಯೇ ವಾಸವಾಗಿದ್ದರಂತೆ. ಹೀಗಾಗಿ ರಾಜುವನ್ನು, ಸತೀಶ್ ತನ್ನ ಸಹಚರರ ಜೊತೆ ಸೇರಿಕೊಂಡು ಕಲಬುರಗಿ ನಗರದ ಆಶ್ರಯ ಕಾಲೋನಿಯಲ್ಲಿಯೇ ಕೊಲೆ ಮಾಡಿದ್ದನಂತೆ. ಕಳೆದ 17 ರಂದು, ತಾನು ಮನೆ ಖಾಲಿ ಮಾಡುತ್ತಿದ್ದೇನೆ ಅಂತ ಹೇಳಿ, ಟಂಟಂ ತರಿಸಿ, ಬ್ಯಾರಲ್ ನಲ್ಲಿ ಶವ ಹಾಕಿ, ಟಂಟಂನಲ್ಲಿ ಶವವನ್ನು ತಗೆದುಕೊಂಡು ಹೋಗಿ, ಅರಣ್ಯದಲ್ಲಿ ಮುಚ್ಚಿ ಹಾಕಿದ್ದರಂತೆ. ವಾಸನೆ ಬರಬಾರದು ಅಂತ ಉಪ್ಪು ಕೂಡಾ ಹಾಕಿ ಬಂದಿದ್ದರಂತೆ.
ಇದನ್ನೂ ಓದಿ: ರಸ್ತೆ ಬದಿ ಸೊಪ್ಪು ಮಾರುತ್ತಿದ್ದ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆ; ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ
ಪತ್ನಿ ಮೇಲೆ ಕಣ್ಣು ಹಾಕಿದ್ದ ರಾಜುವಿನ ಕತೆಯನ್ನು ಸತೀಶ್ ತನ್ನ ಸಹಚರರ ಜೊತೆ ಸೇರಿ ಕೊಲೆ ಮಾಡಿ, ಅರಮಾಗಿದ್ದ. ಆದ್ರೆ ಕೊಲೆಯಾದ ವ್ಯಕ್ತಿಯನ್ನು ಪತ್ತೆ ಮಾಡಲು ಹೋದ ಪೊಲೀಸರಿಗೆ ಮೊದಲೇ ಆರೋಪಿ ಸಿಕ್ಕಿಬಿದ್ದ. ಇದೀಗ ಸತೀಶ್ ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಸಿಬ್ಬಂದಿ ಕೆಲಸಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಲೆಗಾರರ ಪತ್ತೆಗೆ ಯಾವುದೇ ಒತ್ತಡ ಇರಲಿಲ್ಲ. ಆದರು ತಮ್ಮ ಸಿಬ್ಬಂಧಿ ಕೊಲೆಯಾದ ವ್ಯಕ್ತಿ ಪತ್ತೆ ಮಾಡುವದರ ಜೊತೆಗೆ ಕೊಲೆಗಾರರನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಈ ಪ್ರಕರಣ ಬೇಧಿಸಲು ತಮ್ಮ ಸಿಬ್ಬಂದಿ ಸಾಕಷ್ಟು ಶ್ರಮ ವಹಿಸಿದ್ದಾರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Tue, 4 July 23