ಬೆಳಗಾವಿ, ಆ.07: ಬೆಳಗಾವಿ ಜಿಲ್ಲೆಯ ನಾವಗೆ ಗ್ರಾಮದ ಹೊರ ವಲಯದಲ್ಲಿ ಇರುವ ಸ್ನೇಹಂ ಟೇಪ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಾಂತ ರೂ. ನಷ್ಟ ಸಂಭವಿಸಿದೆ. ಅಷ್ಟೇ ಅಲ್ಲದೇ ಮಾರ್ಕಂಡೇಯ ನಗರ ನಿವಾಸಿಯಾಗಿದ್ದ ಯಲ್ಲಪ್ಪ ಗುಂಡ್ಯಾಗೋಳ(19) ಬೆಂಕಿಯಲ್ಲಿ ಬೆಂದು ಜೀವ ಕಳೆದುಕೊಂಡಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಮನೆ ನಿರ್ವಹಣೆಗಾಗಿ ಕೆಲಸಕ್ಕೆ ಸೇರಿದ್ದ. ನಿನ್ನೆ(ಮಂಗಳವಾರ) ಸಂಜೆ 7 ಗಂಟೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಕಾರ್ಖಾನೆಗೆ ಬೆಂಕಿ ಹೊತ್ತಿತ್ತು. ಬೆಂಕಿ ಕೆನ್ನಾಲಿಗೆ ತೀವ್ರಗೊಂಡು ಇಡೀ ಕಾರ್ಖಾನೆಯನ್ನು ವ್ಯಾಪಿಸಿದ್ದು, ಇಡೀ ಜಿಲ್ಲಾಡಳಿತವೇ ಬೆಂಕಿ ಕೆನ್ನಾಲಿಗೆ ನಂದಿಸಲು ಶ್ರಮ ವಹಿಸಿತ್ತು.
ಇಡೀ ರಾತ್ರಿ 8 ಅಗ್ನಿ ಶಾಮಕ ವಾಹನಗಳು, ಖಾಸಗಿ ನೀರಿನ ಟ್ಯಾಂಕರ್ಗಳು ಶ್ರಮಿಸಿದ್ದವು. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಸತತ 16 ಗಂಟೆಯ ಕಾರ್ಯಾಚರಣೆಯ ಬಳಿಕ ಯಲ್ಲಪ್ಪ ಗುಂಡ್ಯಾಗೋಳ ಇರುವ ಸ್ಥಳವನ್ನು ಅಧಿಕಾರಿಗಳು ತಲುಪಿದ್ದರು. ಜೆಸಿಬಿ ಮೂಲಕ ಗೋಡೆ ಹೊಡೆದು ಸುಟ್ಟು ಕರಕಲಾಗಿದ್ದ ಯಲಪ್ಪನ ದೇಹದ ಮೂಳೆಗಳನ್ನು ಹೊರ ತೆಗೆದರು. ಬಳಿಕ ಕುಟುಂಬಸ್ಥರು, ತಹಶೀಲ್ದಾರ್, ಡಿಎಚ್ಒ ಸ್ಥಳ ಪಂಚನಾಮೆ ಮಾಡಿ ಮೂಳೆಯೊಂದನ್ನ ಡಿಎನ್ಎ ಟೆಸ್ಟ್ಗೆ ಎಫ್ಎಸ್ಎಲ್ ತಂಡ ರವಾನೆ ಮಾಡಿತು. ಅಳಿದೂಳಿದ ಮೂಳೆಗಳನ್ನ ಕುಟುಂಬಸ್ಥರಿಗೆ ಚೀಲದಲ್ಲಿ ನೀಡ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತು.
ಇದನ್ನೂ ಓದಿ:ಬೆಳಗಾವಿಯ ಇನ್ಸುಲೆನ್ ಟೇಪ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ: ಅಗ್ನಿಶಾಮಕ, ಪೊಲೀಸ್, ಆ್ಯಂಬುಲೆನ್ಸ್ ದೌಡು
ಇಂದು(ಬುಧವಾರ) ಬೆಳಗ್ಗೆಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಹುಬ್ಬಳ್ಳಿಯಿಂದ ಅಗ್ನಿ ಶಾಮಕ ಸಿಬ್ಬಂದಿ, ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಇನ್ನೂ ಬೆಂಕಿ ಮಾತ್ರ ಹತೋಟಿಗೆ ಬಂದಿಲ್ಲ. ನೀರು ಎರಚಿದ ಕಡೆಯಲ್ಲಿ ತೀವ್ರ ಹೊಗೆ ಆವರಿಸಿದೆ. ಹೊಗೆ, ಬೆಂಕಿ ನಂದಿಸಲು ಇನ್ನೂ ಸಿಬ್ಬಂದಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ, ಕಾರ್ಖಾನೆಯಲ್ಲಿ ಇರುವ ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ಹತ್ತಿದ್ದು, ಇದು ನಿಯಂತ್ರಣಕ್ಕೆ ಬಂದಿಲ್ಲ.
ಕಾರ್ಖಾನೆಯಲ್ಲಿ ಇನ್ಸೂಲಿನ್ ಟೇಪ್ ಸಿದ್ದಪಡಿಸಲಾಗುತ್ತಿತ್ತು. ಇಲ್ಲಿನ ಇನ್ಸೂಲಿನ್ ಟೇಪ್ ವಿದೇಶಕ್ಕೆ ರಪ್ತು ಮಾಡಲಾಗುತ್ತಿತ್ತು. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ 10 ಲಕ್ಷ ಪರಿಹಾರ ಮತ್ತು ಕುಟುಂಬಸ್ಥರಲ್ಲಿ ಒಬ್ಬರಿಗೆ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಇತ್ತ ಮೂರು ಜನ ಗಾಯಾಳುಗಳಿಗೆ ಪರಿಹಾರ ಕೊಡುತ್ತೀವಿ ಎಂದಿದ್ದಾರೆ. ಸಾಕಷ್ಟು ಹಾನಿಯಾಗಿದ್ದು, ಆದರೂ ಎಲ್ಲ ಕಾರ್ಮಿಕರು ನಮ್ಮ ಕುಟುಂಬಸ್ಥರು, ಅವರ ಬೆನ್ನಿಗೆ ನಾವಿರುತ್ತೇವೆ ಎಂದು ಕಾರ್ಖಾನೆಯ ಮಾಲೀಕ ಅನೀಷ್ ಮೈತ್ರಾಣಿ ಹೇಳಿದರು.
ಇನ್ನು ಘಟನಾ ಸ್ಥಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೊಸೆ ಡಾ. ಹಿತ್ ಭೇಟಿ ನೀಡಿ, ಮಾಹಿತಿ ಪಡೆದು ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇತ್ತ ಕಾರ್ಖಾನೆಯಲ್ಲಿ 440 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈಗ ಕಾರ್ಖಾನೆಯನ್ನು ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಕಾರ್ಖಾನೆಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವಂತೆ ಮೃತನ ಕುಟುಂಬದ ಸದಸ್ಯರು ಆಗ್ರಹ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ