AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯ ರೈತನ ಮಗ IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ!

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸವದಿ ಗ್ರಾಮದ ರೈತ ಪುತ್ರ ಬಸವರಾಜ್ ಕೆಂಪವಾಡ ಅವರು ಯುಪಿಎಸ್​​ಸಿ ನಡೆಸಿದ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೆ, ಎರಡನೇ ಪ್ರಯತ್ನದಲ್ಲಿ ಯುವಕ ಈ ಗುರಿ ತಲುಪಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾನೆ. ಗುರಿ ತಲುಪುವ ಛಲವಿದ್ದರೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಯುವಕ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.

ಬೆಳಗಾವಿಯ ರೈತನ ಮಗ IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ!
ಬೆಳಗಾವಿಯ ರೈತನ ಮಗ IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ!
ಭಾವನಾ ಹೆಗಡೆ
|

Updated on: May 11, 2026 | 8:30 AM

Share

ಬೆಳಗಾವಿ, ಮೇ 11: ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದಲ್ಲಿ ರೈತನ ಮಗನಾದ ಬಸವರಾಜ್ ಧರೇಪ್ಪ ಕೆಂಪವಾಡ UPSC ನಡೆಸಿದ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದು, ಇಡೀ ರಾಜ್ಯಕ್ಕೆ, ವಿಶೇಕ್ಷವಾಗಿ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಶುಕ್ರವಾರ ಪ್ರಕಟವಾದ ಫಲಿತಾಂಶದಲ್ಲಿ ಬಸವರಾಜ್ ಈ ಮಹೋನ್ನತ ಸಾಧನೆ ಮಾಡಿದ್ದಾರೆ. ಒಬ್ಬ ಸಾಮಾನ್ಯ ರೈತನ ಮಗನಾಗಿ, ಗ್ರಾಮೀಣ ಹಿನ್ನೆಲೆಯಿಂದ ಬಂದು ಈ ಸಾಧನೆ ಮಾಡಿರುವುದು ಇಂದು ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದೆ. ಮಗನ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಗ್ರಾಮಸ್ಥರು ಹಾಗೂ ಸಂಬಂಧಿಕರು ಬಸವರಾಜ್ ಅವರ ಮನೆಗೆ ಧಾವಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಮುಖ್ಯಾಂಶಗಳು

  • ಅಥಣಿ ತಾಲ್ಲೂಕಿನ ರೈತನ ಮಗ ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ.
  •  ಯಾವುದೇ ಕೋಚಿಂಗ್ ಪಡೆಯದೆ ಎರಡನೇ ಪ್ರಯತ್ನದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಸವರಾಜ್.
  •  ಬಡತನ ಮೀರಿ ಓದಿದ ಪ್ರತಿಭೆಯಿಂದ ನಾಡಿಗೆ ಸಂದ ಗೌರವ.

ಪರಿಶ್ರಮದ ಹಾದಿ

ಬಸವರಾಜ್ ತನ್ನ ಪ್ರಾಥಮಿಕ ಶಿಕ್ಷಣ ಸವದಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರೈಸಿದ್ದು, ಬಳಿಕ ಅಥಣಿಯಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿದ್ದ. ಶಿರಸಿಯಲ್ಲಿ ಪದವಿ ಮುಗಿಸಿ, ಯುಪಿಎಸ್​ಸಿ ಕನಸು ಹೊತ್ತು ಬೆಂಗಳೂರಿಗೆ ತೆರಳಿದ್ದ. ವಿಶೇಷವೆಂದರೆ, ಯಾವುದೇ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳ ನೆರವಿಲ್ಲದೆ, ಸ್ವಂತ ಪರಿಶ್ರಮದಿಂದ ಬಸವರಾಜ್ ತನ್ನ ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದ ಅಗ್ರಸ್ಥಾನಕ್ಕೇರಿದ್ದಾನೆ.

ಗುರಿ ತಲುಪಲು ಛಲವಿದ್ದರೆ ಬಡತನ ಅಡ್ಡಿಯಾಗದು

ಈ ಕುರಿತು ಸಂತಸ ಹಂಚಿಕೊಂಡ ಬಸವರಾಜ್, ನಾನು ಗ್ರಾಮೀಣ ಭಾಗದವನು. ಮೊರಾರ್ಜಿ ಶಾಲೆಯಲ್ಲಿ ಓದಿದವನು. ಗುರಿ ತಲುಪುವ ಛಲವಿದ್ದರೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನನ್ನ ಸಾಧನೆಯೇ ಸಾಕ್ಷಿ. ಈ ಹಂತ ತಲುಪಿದ್ದು ನನಗೆ ಅಪಾರ ಹೆಮ್ಮೆ ತಂದಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾನೆ.

ತಂದೆ ಧರೇಪ್ಪ ಕೆಂಪವಾಡ ಮಾತನಾಡಿ, ನಾವು ಸಣ್ಣ ರೈತ ಕುಟುಂಬದವರು. ಆರ್ಥಿಕ ಮುಗ್ಗಟ್ಟಿದ್ದರೂ ಮಕ್ಕಳ ಶಿಕ್ಷಣಕ್ಕೆ ಎಂದೂ ಕೊರತೆ ಮಾಡಲಿಲ್ಲ. ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆದು ಕಷ್ಟಪಟ್ಟು ಮಗನನ್ನು ಓದಿಸಿದೆ. ಇಂದು ಅವನ ಸಾಧನೆಯಿಂದ ನಮ್ಮ ಬದುಕು ಸಾರ್ಥಕವಾಯಿತು” ಎಂದು ಭಾವುಕರಾಗಿ ನುಡಿದಿದ್ದಾರೆ. ರೈತ ಕುಟುಂಬದ ಕುಡಿಯೊಬ್ಬ ಈ ಮಟ್ಟಕ್ಕೆ ಬೆಳೆದದ್ದು ಕೇವಲ ಸವದಿ ಗ್ರಾಮಕ್ಕೆ ಮಾತ್ರವಲ್ಲದೆ ಇಡೀ ನಾಡಿಗೆ ಹೆಮ್ಮೆಯ ವಿಷಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us