
ಬೆಳಗಾವಿ, ನವೆಂಬರ್ 01: ಕನ್ನಡ ರಾಜ್ಯೋತ್ಸವ (Kannada Rajyotsava) ಮೆರವಣಿಗೆ ವೇಳೆ ಐವರಿಗೆ ಚಾಕು ಇರಿದು (stabbed) ದುಷ್ಕರ್ಮಿಗಳು ಪರಾರಿಯಾಗಿರುವಂತಹ ಘಟನೆ ನಗರದ ಸದಾಶಿವನಗರದ ಚೆನ್ನಮ್ಮ ವೃತ್ತದ ಬಳಿ ನಡೆದಿದೆ. ಮೂವರು ಬಿಮ್ಸ್ ಆಸ್ಪತ್ರೆಗೆ ಮತ್ತು ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುನಾಥ್ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ವಿನಾಯಕ್ ಮತ್ತು ನಜೀರ್ ಪಠಾಣ್ ಎಂಬುವರಿಗೆ ಚಾಕು ಇರಿಯಲಾಗಿದೆ.
ಬೆಳಗಾವಿಯ ಸದಾಶಿವನಗರದ ಚೆನ್ನಮ್ಮ ವೃತ್ತದ ಬಳಿ ಕನ್ನಡ ರಾಜ್ಯೋತ್ಸವ ಅಂಗವಾಗಿ ರೂಪಕಗಳ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಮೆರವಣಿಗೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಐವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕಮಿಷನರ್ ಭೂಷಣ್ ಬೊರಸೆ ಭೇಟಿ ನೀಡಿ ಹಲ್ಲೆಗೊಳಗಾದವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಜಂಕ್ಷನ್ ಬಳಿ ರಾಜ್ಯೋತ್ಸವ ಮೆರವಣಿಗೆ ವೇಳೆ ಘರ್ಷಣೆ ಆಗಿದೆ. ನಾಲ್ವರಿಗೆ ಚಾಕುವಿನಿಂದ ಇರಿದಿದ್ದಾರೆ, ಒಬ್ಬರ ತಲೆಗೆ ಗಾಯ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಕನ್ನಡ ರಾಜ್ಯೋತ್ಸವದಂದೇ MES ಕಾರ್ಯಕರ್ತರ ಪುಂಡಾಟ; ಅನುಮತಿ ಇಲ್ಲದಿದ್ರೂ ಕರಾಳ ದಿನ ಆಚರಣೆ!
ಯಾರು ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಘಟನೆ ನಡೆದ ಸ್ಥಳದ ಸಿಸಿಟಿವಿ ಪರಿಶೀಲನೆ ಕೂಡ ಮಾಡುತ್ತೇವೆ. ಗಾಯಗೊಂಡ ಎಲ್ಲರೂ ಬೆಳಗಾವಿಯ ನೆಹರುನಗರದ ನಿವಾಸಿಗಳು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಈವರೆಗೆ 3-4 ಲಕ್ಷ ಜನರು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಗಾಯಾಳು ರಾಘವೇಂದ್ರ ಎಂಬುವವರು ಮಾತನಾಡಿದ್ದು, ಮೆರವಣಿಗೆಯಲ್ಲಿ ರೂಪಕ ವಾಹನ ತಂದಿದ್ದೇವು. ನಮ್ಮ ವಾಹನದ ಬಳಿ ಬೇರೆಯವರೊಂದಿಗೆ ಅಪರಿಚಿತರು ಜಗಳ ಮಾಡುತ್ತಿದ್ದರು. ನಮ್ಮ ರೂಪಕ ವಾಹನ ನೋಡಿ ನಮ್ಮ ಮೇಲೆ ಹಲ್ಲೆ ಮಾಡಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಬಂತು: ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ ಎಂಇಎಸ್
ಕೈಯಲ್ಲಿ ಚಾಕು ಹಿಡಿದು ಬಂದು ಹಲ್ಲೆ ಮಾಡಿದ್ದಾರೆ ಎಂದರು. ಹನ್ನೊಂದಕ್ಕೂ ಅಧಿಕ ಜನರಿಂದ ಎಳೆಂಟು ಜನರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕೆಲವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ ಎಂದರು.
ಇನ್ನು ರಾತ್ರಿಯಾದರೂ ಬೆಳಗಾವಿಯಲ್ಲಿ ರಾಜ್ಯೋತ್ಸವ ಉತ್ಸಾಹ ಕಡಿಮೆ ಆಗಿಲ್ಲ. ಯುವತಿಯರ ಪಕ್ಕ ಡ್ಯಾನ್ಸ್ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ಏಟು ನೀಡಿದ್ದು, ಸ್ಥಳದಿಂದ ದಿಕ್ಕಪಾಲಾಗಿದ್ದಾರೆ. ಇಂದು ಬೆಳಗ್ಗೆಯಿಂದಲೂ ಚೆನ್ನಮ್ಮ ವೃತ್ತದಲ್ಲಿ ಅದ್ಧೂರಿ ರಾಜ್ಯೋತ್ಸವ ನಡೆಯುತ್ತಿದ್ದು, ಡಿಜೆ ಹಾಡುಗಳಿಗೆ ಯುವಜನತೆ ಕುಣಿದು ಕುಪ್ಪಳಿಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:11 pm, Sat, 1 November 25