ಬೆಳಗಾವಿ ಅ.15: ಮಧ್ಯರಾತ್ರಿ ಮಹಿಳೆಗೆ (Woman) ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಅಮಾನವೀಯವಾಗಿ ನಡೆದುಕೊಂಡಿದ್ದ ಎ1 ಆರೋಪಿ ಅರ್ಜುನ್ ಗುಂಡಪ್ಪಗೋಳ ಸೇರಿದಂತೆ 20 ಕ್ಕೂ ಅಧಿಕ ಜನರ ವಿರುದ್ಧ ಘಟಪ್ರಭಾ (Gataprabha) ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ1 ಆರೋಪಿ ಅರ್ಜುನ ಗುಂಡಪ್ಪಗೋಳ ಅನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಸಂತ್ರಸ್ತ ಮಹಿಳೆ ಶ್ರೀದೇವಿ ಗೊಡಚಿ ಅವರು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಅವಾಚ್ಯವಾಗಿ ನಿಂದನೆ, ಕೊಲೆಗೆ ಯತ್ನ ಮತ್ತು ಮಾನಹರಾಜು ಹಾಕಿದ್ದಾರೆಂದು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಎ1 ಆರೋಪಿ ಅರ್ಜುನ್ನನ್ನು ಬಂಧಿಸಲಾಗಿದೆ. ಇನ್ನುಳಿದ ಪುರುಷ ಮತ್ತು ಮಹಿಳಾ ಆರೋಪಿಗಳನ್ನು ಬಂಧಿಸಲು ತಂಡ ರಚನೆ ಮಾಡಲಾಗಿದೆ. ಹನಿಟ್ರ್ಯಾಪ್ ಮಾಡುತ್ತಿದ್ದಾಳೆಂದು ಆರೋಪಿಸಿ ಥಳಿಸಿ ಚಪ್ಪಲಿ ಹಾರಹಾಕಿ ಮೆರವಣಿಗೆ ಮಾಡಿದ್ದಾರೆ. 307, 143, 147, 323, 342, 352, 355, 504, 149 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.
ಗೋಕಾಕ್ ತಾಲೂಕಿನ ಘಟಪ್ರಭಾದ ಮಲ್ಲಾಪುರ ಪಿಜಿ ನಗರ ವಾಸಿಗಳು, ಶ್ರೀದೇವಿ ಗೊಡಚಿ ಎಂಬುವರಿಗೆ ಅ.14ರ ಮಧ್ಯರಾತ್ರಿ ನಡುರಸ್ತೆಯಲ್ಲಿ ಚಪ್ಪಲಿ ಹಾರ ಹಾಕಿ ಘಟಪ್ರಭಾದ ಮೃತ್ಯುಂಜಯ ಸರ್ಕಲ್ನಲ್ಲಿ ಮೆರವಣಿಗೆ ಮಾಡಿದ್ದರು. ಅಲ್ಲದೆ ಮಹಿಳೆ ವಿರುದ್ಧ ಧಿಕ್ಕಾರ ಕೂಗಿ ಥಳಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಎಎಸ್ಐ ಮೇಲೆ ಚಪ್ಪಲಿ ಎಸೆದು, ಪಿಎಸ್ಐಗೆ ಕಚ್ಚಿದ ಮಹಿಳೆ
ಶ್ರೀದೇವಿ ಹನಿಟ್ರ್ಯಾಪ್ ಮಾಡುತ್ತಿದ್ದಾಳೆಂದು ಆರೋಪಿಗಳು ಆಕೆಯ ಮನೆಗೆ ಹೋಗಿ ಪ್ರಶ್ನಿಸಿದ್ದರು. ಈ ವೇಳೆ ಮಹಿಳೆಯರಿಗೆ ಶ್ರೀದೇವಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಳು ಎಂದು ಆರೋಪಿಗಳು ಶ್ರೀದೇವಿಯನ್ನು ಮನೆಯಿಂದ ಹೊರ ತಂದು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಬಳಿಕ ಘಟಪ್ರಭಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದರು.
ಕಳೆದ ತಿಂಗಳು 30ನೇ ತಾರೀಖು ದಲಿತ ಸಂಘಟನೆಯವರು ನನ್ನ ಬಳಿ ಬಂದು ಐದು ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇಲ್ಲವಾದರೆ ನಿನ್ನ ಗಡಿಪಾರು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆಗ ನಾನು ಭೀಕ್ಷೆ ಬೇಡಿಕೊಂಡು ಜೀವನ ಮಾಡುತ್ತೇನೆ, ನಾನು ಎಲ್ಲಿಂದ ಹಣ ಕೊಡಬೇಕು ಎಂದು ಪ್ರಶ್ನಿಸಿದ್ದೆ. ಮತ್ತೆ ನಿನ್ನೆ ರಾತ್ರಿ ನಮ್ಮ ಮನೆಗೆ ಬಂದು ಐದು ಲಕ್ಷ ಕೊಡು ಎಂದು ಪೀಡಿಸಿದರು. ನಾನು ಯಾಕೆ ಹಣ ಕೊಡಬೇಕು ಎನ್ನುತ್ತಿದ್ದಂತೆ ನನಗೆ ಸಿಕ್ಕಾಪಟ್ಟೆ ಹೊಡೆದರು. ನಂತರ ಬೆತ್ತಲೆಗೊಳಿಸಿ, ಅತ್ಯಾಚಾರ ಮಾಡಿದ್ದರು. ಬಳಿಕ ಚಪ್ಪಲಿ ಮಾಲೆ ಹಾಕಿ ಮೆರವಣಿಗೆ ಮಾಡಿದ್ದರು ಎಂದು ಮಹಿಳೆ ಕಣ್ಣೀರು ಹಾಕಿದ್ದಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ