ಬೆಂಗಳೂರು: ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಮೇಲೆ ಚಪ್ಪಲಿ ಎಸೆದು, ಪಿಎಸ್​​ಐಗೆ ಕಚ್ಚಿದ ಮಹಿಳೆ

ಮಹಿಳೆ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಸಿಬ್ಬಂದಿಯೊಬ್ಬರ ಮೇಲೆ ಚಪ್ಪಲಿ ಎಸೆದು, ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಆಕೆಯನ್ನು ಹಿಡಿಯಲು ಯತ್ನಿಸಿದ ನಮ್ಮ ಮಹಿಳಾ ಸಬ್ ಇನ್‌ಸ್ಪೆಕ್ಟರ್​​ಗೆ ಕಚ್ಚಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಮೇಲೆ ಚಪ್ಪಲಿ ಎಸೆದು, ಪಿಎಸ್​​ಐಗೆ ಕಚ್ಚಿದ ಮಹಿಳೆ
ಆಡುಗೋಡಿ ಪೊಲೀಸ್ ಠಾಣೆ
Follow us
| Updated By: ವಿವೇಕ ಬಿರಾದಾರ

Updated on: Oct 14, 2023 | 2:28 PM

ಬೆಂಗಳೂರು ಅ.14: ನಗರದ ಆಡುಗೋಡಿ (Adugodi) ಪೊಲೀಸ್ ಠಾಣೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಹೈ ಡ್ರಾಮಾ ನಡೆದಿದ್ದು, ಮಹಿಳೆಯೊಬ್ಬರು ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (WPSI) ಅವರನ್ನು ಕಚ್ಚಿ, ಸಹಾಯಕ ಸಬ್ ಇನ್‌ಸ್ಪೆಕ್ಟರ್ (ASI) ಮೇಲೆ ಚಪ್ಪಲಿ ಎಸೆದಿದ್ದಾಳೆ.

ಗುರುವಾರ ಬೆಳಗಿನ ಜಾವ 2.30ಕ್ಕೆ ನೆಕ್ಸಸ್ ಮಾಲ್​ನ 4ನೇ ಮಹಡಿಯಲ್ಲಿ ಅಡ್ಡಾಡುತ್ತಿದ್ದ ಮಹಿಳೆಯನ್ನು ಸಿಬ್ಬಂದಿಗಳು ಸಮಯವಾಯಿತು ಮಾಲ್​​ನಿಂದ ಹೊರ ಹೋಗುವಂತೆ ಹೇಳಿದ್ದಾರೆ. ಆದರೆ ಮಹಿಳೆ ಮಾಲ್​​ನಿಂದ ಹೋಗದೆ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಲ್ಲದೆ ಸಿಬ್ಬಂದಿಗಳ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿದ್ದಾಳೆ. ಇದನ್ನು ಕಂಡ ಮಾಲ್‌ನ ವ್ಯವಸ್ಥಾಪಕ ಮ್ಯಾನೇಜರ್​ ಪೊಲೀಸರಿಗೆ ಕರೆ ಮಾಡಿದ್ದಾರೆ.

ವಿಷಯ ತಿಳಿದು ಮಾಲ್​ಗೆ ಆಗಮಿಸಿದ ಆಡುಗೋಡಿ ಪೊಲೀಸರು ಮಹಿಳೆಗೆ ಮನೆಗೆ ಹೋಗುವಂತೆ ಹೇಳಿದ್ದಾರೆ. ಈಗಲೂ ಮಹಿಳೆ ಪೊಲೀಸರ ಮಾತು ಕೇಳದೆ ನಿಂದಿಸಲು ಆರಂಭಿಸಿದ್ದಾಳೆ. ಈ ವೇಳೆ ಮಹಿಳಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್​ ಠಾಣೆಯಲ್ಲಿ ಎಎಸ್​​ಐ “ಮಾಲ್ ಸಿಬ್ಬಂದಿ ವಿರುದ್ಧ ಏನಾದರೂ ಇದ್ದರೆ ದೂರು ನೀಡುವಂತೆ” ಹೇಳಿದ್ದಾರೆ. ಆದರೆ ಮಹಿಳೆ ಇದ್ದಕ್ಕಿದ್ದಂತೆ ಎಎಸ್​​​ಐ ಮೇಲೆ ಚಪ್ಪಲಿ ಎಸೆದು, ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಹಿಡಿಯಲು ಹೋದ ಮಹಿಳಾ ಸಬ್ ಇನ್‌ಸ್ಪೆಕ್ಟರ್​​ಗೆ ಮಹಿಳೆ ಕಚ್ಚಿದ್ದಾಳೆ.

ಇದನ್ನೂ ಓದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲಿ ಅಮಾನವೀಯ ಘಟನೆ; ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಈ ಬಗ್ಗೆ ನೆಕ್ಸಸ್ ಮಾಲ್‌ನ ಮ್ಯಾನೇಜರ್ ವಿಜಯ್ ಕುಮಾರ್​ ಮಾತನಾಡಿ “ಗುರುವಾರ ಬೆಳಗಿನ ಜಾವ 2:30 ರ ಸುಮಾರಿಗೆ ಮಾಲ್​​ನಿಂದ ಹೊರಡುವಂತೆ ಮಹಿಳೆಗೆ ಹೇಳಿದೆವು. ಆದರೆ ಅವರು ಅವಾಚ್ಯ ಶಬ್ದಗಳಿಂದ ನಮಗೆ ನಿಂದಿಸಿದರು. ಅಲ್ಲದೆ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಲು ಪ್ರಾರಂಭಿಸಿದರು. ಈ ವೇಳೆ ನಾನು ಪೊಲೀಸರಿಗೆ ಕರೆ ಮಾಡಿದೆ” ಎಂದು ಹೇಳಿದರು.

ಮಹಿಳೆ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಸಿಬ್ಬಂದಿಯೊಬ್ಬರ ಮೇಲೆ ಚಪ್ಪಲಿ ಎಸೆದು, ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಆಕೆಯನ್ನು ಹಿಡಿಯಲು ಯತ್ನಿಸಿದ ನಮ್ಮ ಮಹಿಳಾ ಸಬ್ ಇನ್‌ಸ್ಪೆಕ್ಟರ್​​ಗೆ ಕಚ್ಚಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಹಿಳೆ ಮಾದಕ ವಸ್ತು ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದೇವೆ ಎಂದು ಪೊಲೀಸರು ಹೇಳಿದರು. ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್​ 324, 353 ಹಾಗೂ ಇತರ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ