ಬೆಳಗಾವಿ: ಕನ್ನಡ ನೆಲದಲ್ಲೇ ಸರ್ಕಾರಿ ಕನ್ನಡ ಶಾಲಾ ಕೊಠಡಿ ನಿರ್ಮಾಣಕ್ಕೆ ಮರಾಠಿಗರ ವಿರೋಧ
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಶಾಲಾ ಹೊಸ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಗೆ ಎಸ್‌ಡಿಎಂಸಿ ಸದಸ್ಯರು ಮುಂದಾಗಿದ್ದಾರೆ. ಈ ವೇಳೆ ಸರ್ಕಾರಿ ಮರಾಠಿ ಶಾಲೆಯ ಎಸ್ ಡಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ಜಾಗದಲ್ಲಿ ಕನ್ನಡ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಜಮೀನು ನೀಡಬೇಕೆಂದು ಕನ್ನಡ ಭಾಷಿಕರು ಪಟ್ಟು ಹಿಡಿದಿದ್ದಾರೆ.
ಚಿಕ್ಕೋಡಿ, ನವೆಂಬರ್ 29: ಕನ್ನಡ ನೆಲದಲ್ಲೇ ಸರ್ಕಾರಿ ಕನ್ನಡ ಶಾಲಾ (Government Kannada School) ಕೊಠಡಿ ನಿರ್ಮಾಣಕ್ಕೆ ಮರಾಠಿ ಭಾಷಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆ ನಿಪ್ಪಾಣಿ (Nippani) ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಶಾಲಾ ಕೊಠಡಿ ಭೂಮಿ ಪೂಜೆ ವೇಳೆ ಬುಧವಾರ ಮರಾಠಿ ಭಾಷಿಕರಿಂದ ಹೈಡ್ರಾಮಾ ನಡೆದಿದೆ. 50 ವರ್ಷಗಳಿಗೂ ಹೆಚ್ಚು ಹಳೆಯದಾದ ಸರ್ಕಾರಿ ಕನ್ನಡ ಶಾಲೆಯ ಕೊಠಡಿ ನೆಲಸಮ ಮಾಡಿ ಹೊಸ ಕೊಠಡಿ ನಿರ್ಮಾಣಕ್ಕೆ ಮುಂದಾಗಲಾಗಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ಮರಾಠಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಕನ್ನಡ ಶಾಲೆಯ ಕೊಠಡಿ ನಿರ್ಮಾಣಕ್ಕೆ ವಿರೋಧಿಸುತ್ತಿದ್ದಾರೆ. ಕನ್ನಡ, ಉರ್ದು, ಮರಾಠಿ ಶಾಲೆಗೆ ಕಾರದಗಾ ಗ್ರಾಮದ ಸರ್ವೇ ನಂ.462ರಲ್ಲಿ ಜಾಗ ಮೀಸಲಿಡಲಾಗಿತ್ತು. ಕಳೆದ ಹಲವು ವರ್ಷಗಳ ಹಿಂದೆ ಕನ್ನಡ ಶಾಲಾ ಮಕ್ಕಳ ಸಂಖ್ಯೆ ಕಡಿಮೆಯಾದ ಕಾರಣ ಕಾರದಗಾ ಗ್ರಾಮದ ಹಳೆಯ ಸರ್ಕಾರಿ ಮರಾಠಿ ಶಾಲಾ ಕಟ್ಟಡಕ್ಕೆ ಕೊಠಡಿಯನ್ನು ಸ್ಥಳಾಂತರಿಸಲಾಗಿತ್ತು. ಕ್ರಮೇಣ ಮಕ್ಕಳ ಸಂಖ್ಯೆ ಹೆಚ್ಚಳವಾದ ಕಾರಣ ಮೊದಲು ಮೀಸಲಿದ್ದ ಜಾಗದಲ್ಲಿ ಶಾಲಾ ಕೊಠಡಿ ಕಟ್ಟಲು ಮನವಿ ಸಲ್ಲಿಸಲಾಗಿತ್ತು.
ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಮಾಡಿ ಗ್ರಾಮಸ್ಥರು ಅನುಮತಿ ಪಡೆದಿದ್ದರು. 2022ರ ಡಿಸೆಂಬರ್ 27ರಂದೇ ಅನುಮತಿ ಪಡೆಯಲಾಗಿತ್ತು. ಇದಕ್ಕೂ ಮುನ್ನವೇ 2022ರ ನವೆಂಬರ್ 16ರಂದು ಕೊಠಡಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಲೋಕೋಪಯೋಗಿ ಇಲಾಖೆಯಿಂದ 11 ಲಕ್ಷ 98 ಸಾವಿರ ರೂ. ಅನುದಾನ ಮಂಜೂರಾಗಿತ್ತು. ಬಳಿಕ ಕಾರದಗಾ ಗ್ರಾಮ ಪಂಚಾಯತಿ ಕಚೇರಿಯಿಂದ ಎನ್‌ಓಸಿ ಪಡೆಯಲಾಗಿತ್ತು.
ಇದನ್ನೂ ಓದಿ: 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ
ಭೂಮಿ ಪೂಜೆ ವೇಳೆ ವಾಗ್ವಾದ
ಇಂದು (ಬುಧವಾರ) ಹೊಸ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಗೆ ಎಸ್‌ಡಿಎಂಸಿ ಸದಸ್ಯರು ಮುಂದಾಗಿದ್ದಾರೆ. ಈ ವೇಳೆ ಸರ್ಕಾರಿ ಮರಾಠಿ ಶಾಲೆಯ ಎಸ್ ಡಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ಜಾಗದಲ್ಲಿ ಕನ್ನಡ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಜಮೀನು ನೀಡಬೇಕೆಂದು ಕನ್ನಡ ಭಾಷಿಕರು ಪಟ್ಟು ಹಿಡಿದಿದ್ದಾರೆ. ಒಂದು ಎಕರೆ ಜಾಗದಲ್ಲಿ ತಮಗೆ ಮೀಸಲಿರುವ ಜಮೀನಿನಲ್ಲೇ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಕನ್ನಡ ಭಾಷಿಕರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ