ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಟ್ರೈನಿಂಗ್ ನೀಡಿದ ಪ್ರದೇಶವನ್ನೇ ಅಡ್ಡಾ ಮಾಡಿಕೊಂಡ ಗ್ಯಾಂಗ್ ಮಹಾರಾಷ್ಟ್ರದ ಕೂಗಳತೆ ದೂರದಲ್ಲಿ ಪಿಸ್ತೂಲ್ ಮಾರಾಟ ದಂಧೆ ನಡೆಸುತ್ತಿದೆ. ಪೊಲೀಸರ ಸಮಯಪ್ರಜ್ಞೆಯಿಂದ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಗ್ಯಾಂಗ್ ಅಂದರ್ ಆಗಿದೆ. ಸದರಿ ಗ್ಯಾಂಗ್ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಉಚಗಾಂವ ಕ್ರಾಸ್ ಬಳಿ ಸಿಕ್ಕಿಹಾಕಿಕೊಂಡಿದೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ನಾಡ ಪಿಸ್ತೂಲ್ ಮಾರಾಟ ದಂಧೆ ನಡೆಯುತ್ತಿದ್ದು, ಗೌರಿ ಲಂಕೇಶ್ ಹತ್ಯೆಗೆ ಸ್ಕೆಚ್ ಹಾಕಿದ್ದ ಸ್ಥಳದಲ್ಲೇ ಮಾರಾಟ ನಡೆದಿದೆ. ಖಾನಾಪುರ ತಾಲೂಕಿನ ಜಾಂಬೋಟಿ ಅರಣ್ಯ ಪ್ರದೇಶ ಪಿಸ್ತೂಲ್ ಮಾರಾಟದ ಅಡ್ಡೆಯಾಗಿದೆ. ರಾಜ್ಯದ ಬಹುತೇಕ ರೌಡಿಗಳಿಗೆ ಇಲ್ಲಿಂದಲೇ ಗನ್ ಸಪ್ಲೈ ಆಗುತ್ತದೆ. ಚೈನ್ ಲಿಂಕ್ ಮಾದರಿಯಲ್ಲಿ ಒಬ್ಬರಿಂದೊಬ್ಬರ ಕೈಗೆ ಶಿಫ್ಟ್ ಆಗುತ್ತೆ ಪಿಸ್ತೂಲ್ ಮತ್ತು ಗುಂಡುಗಳು. ರಾತ್ರಿ ಸಂದರ್ಭದಲ್ಲೇ ಮಹಾರಾಷ್ಟ್ರದಿಂದ ಬಂದು ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟವಾಗುವುದು ಗಮನಾರ್ಹ.
ಪತ್ತೆಯಾಗಿದ್ದು ಹೇಗೆ? ಗುಂಪು ಗುಂಪಾಗಿ ನಿಂತಿದ್ದವರ ಮೇಲೆ ಸಂಶಯ ಬಂದು ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಈ ವೇಳೆ ಎಸ್ಕೇಪ್ ಆಗಲು ಮುಂದಾದಾಗ ಕೆಲವರನ್ನ ಹಿಡಿದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡಲು ಬಂದಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ಪೊಲೀಸರು ಸ್ಥಳದಲ್ಲಿ ದೊರೆತ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ತುಳಸಿದಾಸ್ ಜೋಷಿ ಮತ್ತು ನಾರಾಯಣ ಪಾಟೀಲ್ ಮಾರಾಟ ಮಾಡಲು ಬಂದಿದ್ದ ಆರೋಪಿಗಳು ಎನ್ನಲಾಗಿದೆ. ಈ ಖದೀಮರ ಗ್ಯಾಂಗ್ ಬೆಳಗಾವಿ ಮೂಲದ ವ್ಯಕ್ತಿಯ ನೆರವಿನೊಂದಿಗೆ ರಾಜ್ಯಕ್ಕೆ ಎಂಟ್ರಿ ಆಗುತ್ತೆ. ಗದಗ ಜಿಲ್ಲೆಯ ಅಣ್ಣಿಗೇರಿ ಮೂಲದ ರೌಡಿ ಶೀಟರ್ ಉಮೇಶ್ ಬೆಳೆಗೇರಿಗೆ ಪಿಸ್ತೂಲ್ ಮಾರಾಟ ಮಾಡುವ ವೇಳೆ ಪಿಸ್ತೂಲ್ ಗ್ಯಾಂಗ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.
ಒಟ್ಟು ಎಂಟು ಜನರನ್ನ ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಮೂವರು ಮಹಾರಾಷ್ಟ್ರ, ಓರ್ವ ಮಧ್ಯಪ್ರದೇಶ ಆರೋಪಿ, ನಾಲ್ಕು ಜನ ಕರ್ನಾಟಕದ ಆರೋಪಿಗಳು ಬಂಧನಕ್ಕೀಡಾಗಿದ್ದಾರೆ ಎಂದು ಬೆಳಗಾವಿಯಲ್ಲಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ. ಮಧ್ಯಪ್ರದೇಶದ ಇನ್ನೋರ್ವ ಆರೋಪಿ ಪತ್ತೆಗೂ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 17 ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡಿದ ಸಿಸಿಹೆಚ್ ವಿಶೇಷ ನ್ಯಾಯಾಲಯ
(belagavi police arrest gang of 4 people selling country made pistols)
Published On - 11:26 am, Mon, 15 November 21