ಬೆಳಗಾವಿ: ಪ್ರೀತಿ ವಿಚಾರಕ್ಕೆ ಗಲಾಟೆ, ಗ್ರಾಮಕ್ಕೆ ನುಗ್ಗಿ ಅಟ್ಟಹಾಸ ಮೆರೆದ 30 ಜನ ಮುಸುಕುಧಾರಿಗಳು

| Updated By: ವಿವೇಕ ಬಿರಾದಾರ

Updated on: Jan 02, 2024 | 7:34 AM

ಬೆಳಗಾವಿ ಗ್ರಾಮೀಣ ಭಾಗದ ನಾವಗೆ ಗ್ರಾಮಕ್ಕೆ 30ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಂದೂಕು, ತಲ್ವಾರ್, ರಾಡ್​​​​​​ಗಳ ಸಮೇತ ಬಂದಿದ್ದ 30ಕ್ಕೂ ಹೆಚ್ಚು ಮುಸುಕುಧಾರಿಗಳು ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದಾರೆ.

ಬೆಳಗಾವಿ: ಪ್ರೀತಿ ವಿಚಾರಕ್ಕೆ ಗಲಾಟೆ, ಗ್ರಾಮಕ್ಕೆ ನುಗ್ಗಿ ಅಟ್ಟಹಾಸ ಮೆರೆದ 30 ಜನ ಮುಸುಕುಧಾರಿಗಳು
ಬೆಳಗಾವಿ ಗ್ರಾಮೀಣ ಪೊಲೀಸ್​ ಠಾಣೆ
Follow us on

ಬೆಳಗಾವಿ, ಜನವರಿ 02: ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ (ಜ.01) ರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು (Police) 6 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.  ಬಂದೂಕು, ತಲ್ವಾರ್, ರಾಡ್​​​​​​ಗಳ ಸಮೇತ ಬಂದಿದ್ದ 30ಕ್ಕೂ ಹೆಚ್ಚು ಮುಸುಕುಧಾರಿಗಳು ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದ್ದಾರೆ. ಇದರಿಂದ ಮನೆಯ ಕಿಟಕಿ ಗಾಜುಗಳು, ಗೋಡೆಗೆ ಅಂಟಿಸಿದ್ದ ಟೈಲ್ಸ್ ಪುಡಿ ಪುಡಿಯಾಗಿವೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರು, ಆರು ಬೈಕ್ ಜಖಂಗೊಳಿಸಿದ್ದಾರೆ. ಈ ಮುಸುಕುಧಾರಿಗಳು ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತಿ ಸದಸ್ಯರ ಮನೆ ಮೇಲೂ ದಾಳಿ ಮಾಡಿದ್ದಾರೆ.

ಡಿಸೆಂಬರ್​​ 31ರ ರಾತ್ರಿ ಪ್ರೀತಿ ವಿಚಾರವಾಗಿ ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿದೆ. ಈ ನಾವಗೆ ಗ್ರಾಮದ ಮುಖಂಡರು ಮತ್ತು ಪಂಚರು ಮಧ್ಯಪ್ರವೇಶಿಸಿ, ಯುವಕರಿಗೆ ಎರಡೇಟು ನೀಡಿ ಜಗಳ ಬಿಡಿಸಿದ್ದರು. ಇದಾದ ಬಳಿಕ ನಾವಗೆ ಗ್ರಾಮದ ಯುವಕರು ಬಾದರವಾಡಿ ಯುವಕರಿಗೆ ನಿಮ್ಮನ್ನು ನೋಡಿಕೊಳ್ಳುವುದಾಗಿ ವಾರ್ನಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಾದರವಾಡಿ ಗ್ರಾಮದ ಯುವಕರು ನಾವಗೆ ಗ್ರಾಮಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪುಂಡರ ಅಟ್ಟಹಾಸ ಕಂಡು ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಇಬ್ಬರು ಎಸಿಪಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ನೀಡಿದ ಮಾನವ ಹಕ್ಕುಗಳ ಆಯೋಗ

ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡ ರಚನೆ

ಘಟನೆ ಸಂಬಂಧ ಡಿಪಿಸಿ ರೋಹನ್ ಜಗದೀಶ್ ಮಾತನಾಡಿ, ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇವೆ. ಗಲಾಟೆ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನಮ್ಮ ಸಿಬ್ಬಂದಿ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿದ್ದೇವೆ. ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡ ರಚಿಸಲಾಗಿದೆ. ಗ್ರಾಮದಲ್ಲಿ ಕೆಎಸ್​ಆರ್​ಪಿ, ಸಿಎಆರ್​​ ತುಕಡಿ ನಿಯೋಜಿಸಲಾಗಿದೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ ಎಂದು ನಾವಗೆ ಗ್ರಾಮದಲ್ಲಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:28 am, Tue, 2 January 24