ಜಮ್ಮು-ಕಾಶ್ಮೀರ: ಲಡಾಖ್​ನಲ್ಲಿ ಗುಡ್ಡ ಕುಸಿದು ಬೆಳಗಾವಿಯ ಯೋಧ ಸಾವು

| Updated By: ವಿವೇಕ ಬಿರಾದಾರ

Updated on: Dec 18, 2024 | 10:35 AM

ಲಡಾಖ್‌ನಲ್ಲಿ ಭೂಕುಸಿತದಿಂದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಸೈನಿಕ ಮಹೇಶ್ ಮೃತಪಟ್ಟಿದ್ದಾರೆ. ಡಿಸೆಂಬರ್ 14 ರಂದು ಕರ್ತವ್ಯದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಪಾರ್ಥಿವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮಕ್ಕೆ ತರಲಾಯಿತು. ಎರಡು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಈ ದುರಂತದಿಂದ ಅವರ ಕುಟುಂಬ ಮತ್ತು ಸ್ನೇಹಿತರು ಆಘಾತಕ್ಕೀಡಾಗಿದ್ದಾರೆ.

ಜಮ್ಮು-ಕಾಶ್ಮೀರ: ಲಡಾಖ್​ನಲ್ಲಿ ಗುಡ್ಡ ಕುಸಿದು ಬೆಳಗಾವಿಯ ಯೋಧ ಸಾವು
ಯೋಧ ಮಹೇಶ್​
Follow us on

ಬೆಳಗಾವಿ, ಡಿಸೆಂಬರ್​ 18: ಜಮ್ಮು-ಕಾಶ್ಮೀರದ (Jammu-Kashmir) ಲಡಾಖ್​ನಲ್ಲಿ (Ladakh) ಗುಡ್ಡ ಕುಸಿದು ಬೆಳಗಾವಿ (Belagavi) ಮೂಲದ ಯೋಧರೊಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಮಹೇಶ್​ ಅವರು ಡಿಸೆಂಬರ್​ 14ರಂದು ಲಡಾಖ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗುಡ್ಡ ಕುಸಿದು ಮೃತಪಟ್ಟಿದ್ದಾರೆ. ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದರು.

ಸೈನಿಕ ಮಹೇಶ್ ಅವರ ಪಾರ್ಥಿವ ಶರೀರ ಮಂಗಳವಾರ (ಡಿಸೆಂಬರ್​ 17) ಸಂಜೆ ಇರಣಟ್ಟಿ ಗ್ರಾಮಕ್ಕೆ ಆಗಮಿಸಿತು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್​ ಗೌರವ ಸಮರ್ಪಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಮಹೇಶ್ ಅವರ ಅಂತ್ಯಸಂಸ್ಕಾರ ನೆರವೇರಿತು. ಎರಡು ತಿಂಗಳ ಹಿಂದೆಯಷ್ಟೇ ಸೈನಿಕ ಮಹೇಶ್ ಅವರ ನಿಶ್ಚಿತಾರ್ಥ ಕೂಡ ಆಗಿದ್ದು, ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ ಲಡಾಖ್​ನಲ್ಲಿ ನಡೆದ ದುರಂತದಲ್ಲಿ ಮಹೇಶ್​ ಪ್ರಾಣ ತೆತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ