
ಬೆಳಗಾವಿ, ನವೆಂಬರ್ 4: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿಯ (Belagavi Farmer’s Protest) ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಅಥಣಿಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡಿದ್ದು, ಜಿಲ್ಲೆಯ ಪ್ರಮುಖ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬೆಳಗಾವಿಯ ಅಥಣಿ, ಚಿಕ್ಕೋಡಿ, ಗುರ್ಲಾಪುರ, ಜಾಂಬೋಟಿ, ಗೋಕಾಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅಂಗಡಿ–ಮಳಿಗೆಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿವೆ. ಗೋಕಾಕ್-ಅಥಣಿ ರಸ್ತೆ, ದರೂರ ಹಲ್ಯಾಳ ಸೇತುವೆ ಮೆಲೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ರೈತ ಸಂಘದ ಮುಖಂಡ ಗಣೇಶ ಈಳಿಗೇರ್ ನೇತೃತ್ವದಲ್ಲಿ ಗೋಕಾಕ್ ಪಟ್ಟಣದ ನಾಕಾ ನಂಬರ್ ಒನ್ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದು, ರೈತರ ಈ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ಕಬ್ಬಿಗೆ 3,500ರೂ. ದರ ನಿಗದಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಎರಡು ದಿನದಲ್ಲಿ ದರ ಘೋಷಣೆ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ನಾಲ್ಕು, ಬೆಂಗಳೂರು ಪುಣೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ರೈತರ ಈ ಪ್ರತಿಭಟನೆಯ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಗುರ್ಲಾಪುರದಲ್ಲಿ ಕೆಲ ದಿನಗಳಿಂದ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ನ್ಯಾಯಯುತವಾಗಿರುವ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸದಿದ್ದಾಗ ವಿರೋಧ ಪಕ್ಷವಾಗಿ ನಾವು ಬೆಂಬಲ ನೀಡಬೇಕಿದೆ. ಹಾಗಾಗಿ ನಾನು ಸಹ ಪಕ್ಷದ ಎಲ್ಲಾ ಮುಖಂಡರ ಜೊತೆಗೆ ಚರ್ಚೆ ಮಾಡಿ, ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ಬಂದಿದ್ದೇನೆ ಎಂದಿದ್ದಾರೆ.
ಅತಿವೃಷ್ಟಿ ಸಂದರ್ಭದಲ್ಲಿ ಸಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಪ್ರವಾಸ ಮಾಡಿದ್ದೆ. ಭೀಕರ ಮಳೆಯಿಂದ ತೊಂದರೆಗಿಡಾದಾಗ ಉಸ್ತುವಾರಿ ಸಚಿವರಾಗಲಿ, ಕಂದಾಯ ಸಚಿವರಾಗಲಿ, ಕೃಷಿ ಸಚಿವರಾಗಲಿ ಉತ್ತರ ಕರ್ನಾಟಕ ಪ್ರವಾಸ ಮಾಡಲಿಲ್ಲ. ರೈತರು ಕಾರ್ಖಾನೆಗಳಲ್ಲಿ 6 ಮಿಲಿಯನ್ ಟನ್ ಕಬ್ಬು ಅರೆಯುತ್ತಾರೆ. ಅದರಿಂದ ರಾಜ್ಯ ಸರ್ಕಾರಕ್ಕೆ 50-60ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ ಈಗ ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿ ಕೇಳಲು ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ. ಈ ಸರ್ಕಾರಕ್ಕೆ ನಾಡಿನ ರೈತರ ಮೇಲೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ ವಿಕೋಪಕ್ಕೆ ತಿರಗಿದ ಕಬ್ಬು ಬೆಳೆಗಾರರ ಹೋರಾಟ: ಕಿಡಿಗೇಡಿಗಳಿಂದ ಕಲ್ಲು ತೂರಾಟ
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ , ಬೆಳಗಾವಿ ಪ್ರತಿಭಟನೆ ಕುರಿತು ನಾನೂ ಕೂಡಾ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಜತೆ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ. ಇಲ್ಲದಿದ್ರೆ ಪೊಲೀಸರಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಆಗುತ್ತದೆ ಎಂದಿದ್ದೇನೆ. ಸತೀಶ್ ಜಾರಕಿಹೊಳಿ ಸೇರಿ ಆ ಭಾಗದ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ. ನಿನ್ನೆ ಒಬ್ಬರು ರೈತರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಬಿಜೆಪಿಯವರು ಸಹಜವಾಗಿ ಇಂಥ ಸಂದರ್ಭದಲ್ಲಿ ಬೆಂಬಲ ಕೊಟ್ಟಿದ್ದಾರೆ. ಇಂಥ ಅವಕಾಶ ಮತ್ತೆ ಸಿಕ್ಕರೆ ಬಿಡುತ್ತಾರಾ? ಸರ್ಕಾರ ಕುರ್ಚಿ ಕಚ್ಚಾಟದಲ್ಲಿ ತೊಡಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನಾಗಿತ್ತು ಎಂದು ಅವರೇ ನೋಡಿಕೊಳ್ಳಲಿ ಎಂದಿದ್ದಾರೆ.
ರೈತರ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, 10.25 ಪ್ರತಿಶತ ಇಳುವರಿ ಇರುವ ಟನ್ ಕಬ್ಬಿಗೆ 3500 ರೂ. ಗಳನ್ನು ನಿಗದಿಪಡಿಸಿದೆ. ಇದರ ಆಧಾರದ ಮೇಲೆ ರಾಜ್ಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ರಾಜ್ಯದಲ್ಲಿರುವ 81 ಕಾರ್ಖಾನೆಗಳು 2025-26ನೇ ಸಾಲಿನಲ್ಲಿ ಬೆಳೆಗಾರರಿಗೆ ಪಾವತಿಸಬೇಕಾದ ಮೊದಲ ಕಂತಿನ ದರವನ್ನು ನಿಗದಿಪಡಿಸಿದ್ಸೆದು, ಈ ಕುರಿತು ಸೆ.15 ರಂದು ಆದೇಶ ಹೊರಡಿಸಿತ್ತು. ಕಳೆದ ವರ್ಷ ಅರೆದ ಕಬ್ಬಿನಿಂದಾದ ಸಕ್ಕರೆಯ ಆಧಾರದಲ್ಲಿ ಎಫ್ಆರ್ಪಿ ನಿಗದಿಪಡಿಸಲಾಗಿದೆ. ಆದರೆ, ರಾಜ್ಯ ಕಾರ್ಖಾನೆಗಳಿಗೆ ಇಷ್ಟು ಬೆಲೆ ನೀಡಲು ಹಿಂಜರಿಯುತ್ತಿದೆ . ಸಧ್ಯಕ್ಕೆ 2700 ರೂ.ಗಳಿಂದ 3100 ರೂಗಳ ವರೆಗೆ ದರ ತೀರ್ಮಾನಿಸಲಾಗಿದೆ.
ಕಾರ್ಖಾನೆಗಳು ಕಬ್ಬಿನ ಕಟಾವು ಮತ್ತುಸಾಗಾನಣಿಕೆಯ ವೆಚ್ಚವನ್ನು ಲೆಕ್ಕ ಹಾಕಿ ಅದನ್ನು ದರದಲ್ಲಿ 800 ರೂ.ಗಳಿಂದ 900 ರೂ.ಗಳ ವರೆಗೂ ಕಡಿತ ಮಾಡುತ್ತವೆ. ಹೀಗಾದರೆ ಟನ್ ಕಬ್ಬಿನ ದರ ಇನ್ನೂ ಕಡಿಮೆಯಾಗುತ್ತದೆ. ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲಿಯೇ 300 ರೂ.ಗಳಿಂದ 400ರೂ.ಗಳ ವರೆಗೆ ಹೆಚ್ಚಿನ ದರ ನೀಡುತ್ತಿದ್ದಾರೆ. ಅಲ್ಲಿನ ಕಾರ್ಖಾನೆಗಳು ಪ್ರತಿ ತಿಂಗಳೂ 3400 ರೂಗಳನ್ನು ನೀಡುತ್ತಿವೆ. ಆದರೆ ನಮ್ಮ ರಾಜ್ಯದಲ್ಲಿಯೇ ಹಣ ಪಾವತಿ ಮಾಡಲು ವಿಳಂಬ ಮಾಡುತ್ತಿವೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Tue, 4 November 25