ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ: ಅನ್ನದಾತ ಕೂಗಿಗೆ ಸ್ಪಂದಿಸದ ಬೆಳಗಾವಿ ನಾಯಕರು!

ಬೆಳಗಾವಿಯಲ್ಲಿ ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಎಂಟು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಹೀಗದ್ದರೂ ಸ್ಥಳೀಯ ಜನಪ್ರತಿನಿಧಿಗಳ ಮೌನದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ರೈತರ ಪ್ರತಿಭಟನೆ ವಿಚಾರವಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಬೆಳಗಾವಿಯಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.

ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ: ಅನ್ನದಾತ ಕೂಗಿಗೆ ಸ್ಪಂದಿಸದ ಬೆಳಗಾವಿ ನಾಯಕರು!
ರೈತರ ಪ್ರತಿಭಟನೆ
Image Credit source: Google
Edited By:

Updated on: Nov 06, 2025 | 4:13 PM

ಬೆಳಗಾವಿ, ನವೆಂಬರ್​ 06: ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಕಳೆದ 8 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್​ನಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ನಾಯಕರು ಮಾತ್ರ ಫುಲ್​ ಸೈಲೆಂಟ್ ಆಗಿದ್ದಾರೆ. ವಿಪಕ್ಷ, ಆಡಳಿತ ಪಕ್ಷದ ಜನಪ್ರತಿನಿಧಿಗಳು ಜಿಲ್ಲೆಯಲ್ಲಿಯೇ ಇದ್ದರೂ ಕಂಡೂ ಕಾಣದಂತೆ ಓಡಾಡಿಕೊಂಡಿದ್ದಾರೆ.

ಎರಡೆರಡು ಸಕ್ಕರೆ ಕಾರ್ಖಾನೆ ಹೊಂದಿರುವ ಸಚಿವ ಸತೀಶ್ ಗಪ್​ಚುಪ್ ಆಗಿದ್ದರೆ ಇತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸಹ ಸೈಲೆಂಟ್ ಮೂಡ್​ಗೆ ಜಾರಿದ್ದಾರೆ. ಲಕ್ಷ್ಮಣ ಸವದಿ, ರಮೇಶ್​ ಕತ್ತಿ, ಪ್ರಭಾಕರ್​ ಕೋರೆ, ಜಾರಕಿಹೊಳಿ ಬ್ರದರ್ಸ್​, ಜೊಲ್ಲೆ ಸೇರಿ ಘಟಾನುಘಟಿ ನಾಯಕರೆಲ್ಲ ಮೌನವಾಗಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಡೆಯುವ ಸಣ್ಣ ಬ್ಯಾಂಕ್ ಚುನಾವಣೆಗೆ ಒಂದಾಗುವ ನಾಯಕರು, ರೈತರ ವಿಚಾರದಲ್ಲಿ ಡೋಂಟ್​ಕೇರ್ ಮನಸ್ಥಿತಿ ಹೊಂದಿದ್ದಾರೆ ಎಂದು ಅನ್ನದಾತರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ: ಅಂಕಲಗಿ ಪಟ್ಟಣ ಸಂಪೂರ್ಣ ಸ್ತಬ್ಧ

ಬೆಳಗಾವಿಯಲ್ಲಿ ಗೌಪ್ಯ ಸಭೆ ನಡೆಸಿದ ಸಕ್ಕರೆ ಸಚಿವರು

ಕಬ್ಬು ಬೆಳೆಗಾರರ ಹೋರಾಟದಿಂದ ಕೊನೆಗೂ ಎಚ್ಚೆತ್ತ ಸಕ್ಕರೆ ಸಚಿವ ಶಿವಾನಂದ ಪಾಟೀಲ್​, ಹುಬ್ಬಳ್ಳಿಯಿಂದ ಬೆಳಗಾವಿಗೆ ಆಗಮಿಸಿದ್ದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಜೊತೆ ದಿಢೀರ್ ಸಭೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ನಿರ್ದೇಶನದಂತೆ ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಗೌಪ್ಯ ಮೀಟಿಂಗ್​ ನಡೆಸಿದ್ದಾರೆ. ಸಭೆ ಬಳಿಕ ಈ ಬಗ್ಗೆ ಸಿಎಂಗೆ ಕರೆ ಮಾಡಿರುವ ಸಚಿವರು, ಸಕ್ಕರೆ ಕಾರ್ಖಾನೆಯವರು ಹೆಚ್ಚುವರಿ ಹಣ ಕೊಡಲು ಒಪ್ಪುತ್ತಿಲ್ಲ. ಈಗ ಕೊಡುತ್ತಿರೋದೇ ಹೆಚ್ಚು ಅಂತಾ ಹೇಳ್ತಿದ್ದಾರೆ ಎಂದು  ತಿಳಿಸಿದ್ದಾರೆ. ಈ ವೇಳೆ ಸಚಿವರ ಮಾತಿಗೆ ಸಿಎಂ ಗರಂ ಆಗಿದ್ದು, ರೈತರನ್ನ ಮನವೊಲಿಸಿ ಸರಿಮಾಡಿ ಬರಲು ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ರೈತರ ಆಕ್ರೋಶ ಭುಗಿಲೇಳುವ ಸಾಧ್ಯತೆ ಹಿನ್ನಲೆ ಪ್ರತಿಭಟನಾ ಸ್ಥಳಕ್ಕೆ ತೆರಳದೇ ಇರಲು ಶಿವಾನಂದ ಪಾಟೀಲ್​ ಅವರಿಗೆ ಸಿಎಂ ಸಲಹೆ ನೀಡಿದ್ದಾರೆ.

ಸಿಎಂ ನೇತೃತ್ವದಲ್ಲಿ ನಾಳೆ ಸಭೆ

ಕಬ್ಬು ದರ ನಿಗದಿ ಆಗ್ರಹ ವಿಚಾರವಾಗಿ  ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಮೀಟಿಂಗ್ ನಡೆಯಲಿದೆ. 5-6 ಸಚಿವರು, ಕಾರ್ಖಾನೆ ಮಾಲೀಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಧಾನಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:10 pm, Thu, 6 November 25