AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಧಾನ ವಿಫಲ: 8 ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ, ಸರ್ಕಾರಕ್ಕೆ ಸಂಜೆ 7 ಗಂಟೆಯ ಡೆಡ್‌ಲೈನ್‌

ಅಲ್ಲೇ ಊಟ, ಅಲ್ಲೇ ನಿದ್ದೆ, ಅಲ್ಲೇ ಹೋರಾಟ. ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ಕಬ್ಬು ಬೆಳೆಗಾರರು ಬೆಲೆ ನಿಗದಿ ವಿಚಾರವಾಗಿ ಪಟ್ಟು ಹಿಡಿದಿದ್ದಾರೆ. ರೈತರ ಹೋರಾಟ ಇಂದು 8 ನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆ ಸರ್ಕಾರಕ್ಕೆ ಡೆಡ್‌ಲೈನ್‌ ನೀಡಿರುವ ಅನ್ನದಾತರು, ನಾಳೆ ಪ್ರತಿಭಟನೆಗೆ ರಾಷ್ಟ್ರೀಯ ಹೆದ್ದಾರಿಗೆ ಇಳಿಯಲು ನಿರ್ಧರಿಸಿದ್ದಾರೆ.

ಸಂಧಾನ ವಿಫಲ: 8 ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ, ಸರ್ಕಾರಕ್ಕೆ ಸಂಜೆ 7 ಗಂಟೆಯ ಡೆಡ್‌ಲೈನ್‌
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ
Sahadev Mane
| Updated By: Ganapathi Sharma|

Updated on: Nov 06, 2025 | 7:24 AM

Share

ಬೆಳಗಾವಿ, ನವೆಂಬರ್ 6: ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ (Farmers Protest), ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವಾರದಿಂದಲೂ ನಡೆಯುತ್ತಿರುವ ಪ್ರತಿಭಟನೆ ಇಂದು ಉಗ್ರ ರೂಪ ತಾಳುವ ಸಾಧ್ಯತೆ ಇದೆ. ಪ್ರತೀ ಟನ್‌ ಕಬ್ಬಿಗೆ 3500 ರೂಪಾಯಿ ಕೊಡಲೇ ಬೇಕು ಎಂದು ಪಟ್ಟು ಹಿಡಿದಿರೋ ಕಬ್ಬು ಬೆಳೆಗಾರರು, ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಒಂದು ವಾರದಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ಹೋರಾಟ ಇಂದು 8 ನೇ ದಿನಕ್ಕೆ ಕಾಲಿಟ್ಟಿದೆ. ಗುರ್ಲಾಪುರ ಮಾತ್ರವಲ್ಲ ಅಥಣಿ, ರಾಯಬಾಗ, ಬೆಳಗಾವಿ (Belagavi) ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಯೂ ಹೋರಾಟ ನಡೆಯುತ್ತಿದೆ. ರೈತರ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸರ್ಕಾರ, ಹಿರಿಯ ಸಚಿವ ಹೆಚ್‌.ಕೆ ಪಾಟೀಲ್‌ರನ್ನು ಬುಧವಾರ ಸಂಧಾನಕ್ಕೆ ಕಳುಹಿಸಿತ್ತು. ಆದರೆ ಸಂಧಾನ ವಿಫಲ ಆಗಿದೆ.

ಸಿಎಂ ಜತೆ ಮಾತನಾಡಲು ರೈತರ ನಕಾರ: ನಾಳೆ ಹೆದ್ದಾರಿ ಬಂದ್‌

ಸಂಧಾನಕ್ಕೆ ಬಂದಿದ್ದ ಸಚಿವ ಪಾಟೀಲ್‌, ಸಿಎಂ ಅವರ ಬಳಿ‌ ರೈತರ ನಿಯೋಗ ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿದ್ದಾರೆ. ಆದರೆ, ‘ನಾವು ಬರೋದಿಲ್ಲ, ನೀವೇ 3,500 ರೂ. ಬೆಲೆ ನಿಗದಿ ಘೋಷಣೆಯ ನಿರ್ಧಾರ ಮಾಡಿ. ಗುರುವಾರ ಸಂಜೆ 7 ಗಂಟೆಯೊಳಗೆ ನಿರ್ಧಾರ ಮಾಡಿ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಧಾನಕ್ಕೆ ಬಂದಿದ್ದ ಹೆಚ್‌ಕೆ ಪಾಟೀಲ್‌ ವಾಪಸ್ ಆಗಿದ್ದಾರೆ.

ಇದನ್ನೂ ಓದಿ: ಸಚಿವ ಹೆಚ್‌.ಕೆ.ಪಾಟೀಲ್ ಸಂಧಾನ ಸಭೆ ವಿಫಲ

ಇಂದಿನಿಂದ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ರೈತರು, ಶುಕ್ರವಾರದಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಸಚಿವರ ಕಾರಿಗೆ ಮುತ್ತಿಗೆ ಯತ್ನ, ತಳ್ಳಾಟ ನೂಕಾಟ

ಸಂಧಾನ ವಿಫಲ ಆಗುತ್ತಿದ್ದಂತೆಯೇ ಸಚಿವರು ಕಾರು ಹತ್ತಿ ವಾಪಸ್ ಆಗುತ್ತಿದ್ದಾಗ ಅವರ ಕಾರಿನ ಮುಂದೆ ಮಲಗಿ, ಕಾರಿಗೆ ಗುದ್ದಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಬೇಕೇ ಬೇಕು ನ್ಯಾಯ ಬೇಕು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಸಚಿವರ ಕಾರಿಗೆ ಮುತ್ತಿಗೆ ಹಾಕಿದ ರೈತರನ್ನು ಪೊಲೀಸರು ಎಳೆದು ಹಾಕುತ್ತಿದ್ದಂತೆಯೇ ತಳ್ಳಾಟ, ನೂಕಾಟ ಆಯಿತು.

ಕಬ್ಬು ಬೆಳೆಗಾರರ ಬೇಡಿಕೆ ಏನು?

  • ಪ್ರತಿ ಟನ್ ಕಬ್ಬಿಗೆ 3500 ರೂ. ನಿಗದಿಪಡಿಸಿ ಆದೇಶ ಹೊರಡಿಸಬೇಕು.
  • ಕಬ್ಬಿನ ತೆರಿಗೆ ಹಣದಲ್ಲಿ ರೈತರಿಗೆ 1 ಸಾವಿರ ರೂ. ನೀಡಬೇಕು.
  • ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವುದು ಬಂದ್ ಆಗಬೇಕು.
  • ಸರ್ಕಾರವೇ ಸಕ್ಕರೆ ಕಾರ್ಖಾನೆ ಬಳಿ ತೂಕದ ಮಷೀನ್ ಇಡಬೇಕು.
  • ತೂಕ ಸೇರಿ ಪ್ರತಿಯೊಂದು ಮಾಹಿತಿ ಡಿಜಿಟಲೀಕರಣ ಮಾಡಬೇಕು.
  • ಸಕ್ಕರೆ ಆಯುಕ್ತರ ಕಚೇರಿಗೆ 100 ಸಿಬ್ಬಂದಿ ನೇಮಕ‌ ಮಾಡಬೇಕು.

ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗುತ್ತಾ?

ಇದೆಲ್ಲದರ ನಡುವೆ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಇದೇ ಸಭೆಯಲ್ಲಿ ಸರ್ಕಾರ ಬೆಲೆ ನಿಗದಿ ಮಾಡುವ ಸಾಧ್ಯತೆ ಇದೆ. ಇಂದು ಸಂಜೆಯೊಳಗೆ ಈ ಬೇಡಿಕೆಗಳಿಗೆ ಸರ್ಕಾರ ಅಸ್ತು ಎಂದರೆ ಹೋರಾಟ ನಿಲ್ಲಲಿದೆ. ಇಲ್ಲದಿದ್ದರೆ ನಾಳೆಯಿಂದ ಹೋರಾಟದ ಸ್ವರೂಪವೇ ಬೇರೆಯಾಗಲಿದ್ದು, ನಾಳೆ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ