ರೈತರ ಮಧ್ಯೆ ನುಸುಳಿ ಬಂದು ಕಿಡಿಗೇಡಿಗಳಿಂದ ಕಲ್ಲು ತೂರಾಟ: ಡಿವೈಎಸ್ಪಿ ಕೈ ಮುರಿತ, 4 KSRTC ಬಸ್​ ಗಾಜು ಪುಡಿ ಪುಡಿ

ಬೆಳಗಾವಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಅನ್ನದಾತರು ನಡೆಸುತ್ತಿರುವ ಹೋರಾಟ ತೀವ್ರ ಸ್ಪರೂಪ ಪಡೆದುಕೊಂಡಿದೆ. ರೈತರು ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೆಲ ಕಿಡಿಗೇಡಿಗಳು ನುಸುಳಿ ಬಂದು ಕಲ್ಲು ತೂರಿದ್ದಾರೆ. ಇದರಿಂದ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದರೆ, ಹಾಗೂ ಕೆಲ ವಾಹನ ಗ್ಲಾಸ್ ಪುಡಿ ಪುಡಿಯಾಗಿದೆ. ಹಾಗಾದ್ರೆ, ಕಲ್ಲು ತೂರಿದವರ್ಯಾರು?

ರೈತರ ಮಧ್ಯೆ ನುಸುಳಿ ಬಂದು ಕಿಡಿಗೇಡಿಗಳಿಂದ ಕಲ್ಲು ತೂರಾಟ: ಡಿವೈಎಸ್ಪಿ ಕೈ ಮುರಿತ, 4 KSRTC ಬಸ್​ ಗಾಜು ಪುಡಿ ಪುಡಿ
Hattaragi

Updated on: Nov 07, 2025 | 5:57 PM

ಬೆಳಗಾವಿ, (ನವೆಂಬರ್ 07): ಪ್ರತಿ ಕ್ವಿಂಟಲ್​​ ಕಬ್ಬಿಗೆ 3500 ರೂ. ನಿಗದಿ ಮಾಡುವಂತೆ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಈ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದ್ರೆ, ರೈತರ ಶಾಂತಿಯುತ ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಅರೆ. ಹೌದು.. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರೈತರು ಶಾಂತಿಯೂತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಡಿವೈಎಸ್ಪಿ ಕೈ ಮುರಿದೆ. ಇನ್ನು ನಾಲ್ಕು ಕೆಎಸ್​ಆರ್​​ಟಿಸಿ ಬಸ್​​ಗಳ ಗ್ಲಾಸ್ ಪುಡಿ ಪುಡಿಯಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬೆಳಗಾಗಿ ಎಸ್ಪಿ ಭೇಟಿ ನೀಡಿದ್ದಾರೆ.

ಹತ್ತರಗಿಯಲ್ಲಿ ಕಲ್ಲು ತೂರಾಟದಲ್ಲಿ 4 ಕೆಎಸ್​ಆರ್​​ಟಿ ಬಸ್ ಹಾಗೂ ಲಾರಿಗಳ ಗಾಜು ಪುಡಿ ಪುಡಿಯಾಗಿದೆ. ಬಸ್​ಗಳಿಗೆ ಹಾನಿಯಾಗಿರುವುದರಿಂದ ಸ್ಥಳಕ್ಕೆ ಕೆಎಸ್​​ಆರ್​ಟಿಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಲಾರಿ ಸೇರಿದಂತೆ ಇತರೆ ವಾಹನಗಳಿಗೂ ಹಾನಿಯಾಗಿದೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಪ್ರತಿಭಟನೆ ವೇಲೆ ಕೆಲ ಕಿಡಿಗೇಡಿಗಳಿಂದ ಪೊಲೀಸರ ಮೇಲೆ ಕಲ್ಲು ತೂರಾಟ, ಗೃಹ ಸಚಿವ ಹೇಳಿದ್ದೇನು?

ರೈತರಿಂದ ಕಲ್ಲು ತೂರಾಟವಾಗಿಲ್ಲ

ಇನ್ನು ಕಲ್ಲು ತೂರಾಟ ನಡೆಸಿದ ಬಗ್ಗೆ ರೈತ ಮುಖಂಡರು ಪ್ರತಿಕ್ರಿಯಿಸಿ, ನಾವು ಶಾಂತಿಯೂತವಾಗಿ ಧರಣಿ ನಡೆಸುತ್ತಿದ್ದೇವೆ. ಯಾವೋ ಕಿಡಿಗೇಡಿಗಳು ಮಧ್ಯ ನುಸುಳಿ ಬಂದು ಕಲ್ಲು ತೂರಿದ್ದಾರೆ. ಈ ಮೂಲಕ ರೈತರ ಪ್ರತಿಭಟನೆ ದಿಕ್ಕು ತಪ್ಪಿಸಲು ಈ ಕೃತ್ಯ ಎಸಗಿದ್ದಾರೆ ಎಂದರು. ಹಾಗಾದ್ರೆ, ಕಲ್ಲು ಎಸೆದವರು ಯಾರು? ರೈತರ ಪ್ರತಿಭಟನೆ ಬೇರೆ ಸ್ವರೂಪಕ್ಕೆ ಕೊಡೊಯ್ಯಲು ಕಲ್ಲು ತೂರಿದ್ರಾ? ಎನ್ನುವ ಚರ್ಚೆಗಳು ನಡೆಯುತ್ತಿವೆ.

ಸ್ಥಳಕ್ಕೆ IGP  ಮತ್ತು ಎಸ್ಪಿ ದೌಡು

ಹತ್ತರಗಿ ಟೋಲ್ ಬಳಿ ವಾಹನಗಳ ಮೇಲೆ ಕಲ್ಲುತೂರಾಟ ಹಿನ್ನೆಲೆಯಲ್ಲಿಸ ಸ್ಥಳಕ್ಕೆ ಉತ್ತರ ವಲಯದ IGP ಚೇತನ್ ಸಿಂಗ್ ರಾಠೋಡ್ ಹಾಗೂ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಭೀಮಾಶಂಕರ ಗುಳೇದ್ ಅವರು ಕಾರಿನೊಳಗೆ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿಯನ್ನು ಕೂಡಿಸಿಕೊಂಡು ಚರ್ಚಿಸಿದರು. ಈ ಮೂಲಕ ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರು.

6 ಪೊಲೀಸ್ ಸಿಬ್ಬಂದಿಗೆ ಗಾಯ

ಇನ್ನು ಈ ಬಗ್ಗೆ ಟಿವಿ9ಗೆ ಬೆಳಗಾವಿ ಎಸ್​ಪಿ ಭೀಮಾಶಂಕರ ಗುಳೇದ್ ಪ್ರತಿಕ್ರಿಯಿಸಿದ್ದು, ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟವಾಗಿದ್ದು ದುರದೃಷ್ಟಕರ. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಲಾಠಿಚಾರ್ಜ್ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೆವು. ಕಲ್ಲು ತೂರಾಟದಲ್ಲಿ ನಮ್ಮ 6 ಸಿಬ್ಬಂದಿಗೆ ಗಾಯವಾಗಿದೆ. ಡಿವೈಎಸ್​​ಪಿಯವರ ಕೈ ಮುರಿದಿದೆ. ಸದ್ಯ ಪುಣೆ-ಬೆಂಗಳೂರು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದ್ದು, ಏನೆಲ್ಲಾ ಹಾನಿಯಾಗಿದೆ ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಕಲ್ಲುತೂರಾಟ ಪ್ರಕರಣ ಸಂಬಂಧ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಹೇಳಿದರು.

ಕಲ್ಲು ತೂರಾಟದಿಂದ ಡಿವೈಎಸ್‌ಪಿ ಕೈ ಮುರಿತ

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿ ನಡೆಯುತ್ತಿದ್ದ ಧರಣಿ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಡಿವೈಎಸ್‌ಪಿ ಸಜ್ಜನ್ ಕೈ ಮುರಿದಿದೆ. ಕೂಡಲೇ ಅವರು ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಕೈಗೆ ಬ್ಯಾಂಡೇಜ್ ಹಾಕಿಸಿಕೊಂಡೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಹತ್ತರಗಿಯಲ್ಲಿ ಹೆಚ್ಚುವರಿ ಪೊಲೀಸ್​ ನಿಯೋಜನೆ

ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ವಾಹನಗಳ ಮೇಲೆ ಕಲ್ಲುತೂರಾಟ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸದ್ಯ ಹತ್ತರಗಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ವಾಹನ ಸಂಚಾರ ಮುಕ್ತವಾಗಿದೆ.