
ಬೆಂಗಳೂರು, ಡಿಸೆಂಬರ್ 07: ನಾಳೆಯಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಹಿನ್ನಲೆ ಕುಂದಾನಗರಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಈಗಾಗಲೇ 3 ಸಾವಿರ ರೂಮ್ ಬುಕ್ ಆಗಿದ್ದು, ಸಿಎಂ ಮತ್ತು ಡಿಸಿಎಂಗೆ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಳಿಗಾಲದ ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ದೆಹಲಿಯಲ್ಲಿ ಉಗ್ರರಿಂದ ಕಾರು ಸ್ಫೋಟ ಪ್ರಕರಣ ಹಿನ್ನೆಲೆ ಅಧಿವೇಶನದ ವೇಳೆ ಎಚ್ಚರವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಬೆಳಗಾವಿ ಸುವರ್ಣಸೌಧದ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ ನಗರದಲ್ಲಿ ಹೆಚ್ಚುವರಿಯಾಗಿ 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆರು ಎಸ್ಪಿ ಱಂಕ್ ಮಟ್ಟದ ಪೊಲೀಸ್ ಅಧಿಕಾರಿಳು, 146 ಹಿರಿಯ ಪೊಲೀಸ್ ಅಧಿಕಾರಿಗಳು, 3,820 ಪೊಲೀಸ್ ಸಿಬ್ಬಂದಿ, 500 ಹೋಂ ಗಾರ್ಡ್ಸ್, 8 ಕ್ಷಿಪ್ರ ಕಾರ್ಯಪಡೆ, 10 ಡಿಎಆರ್ ತುಕಡಿ, 35 ಕೆಎಸ್‌ಆರ್‌ಪಿ ತುಕಡಿ, 1 ಬಿಡಿಡಿಎಸ್ ತಂಡ, 1 ಗರುಡಾ ಫೋರ್ಸ್, 16 ವಿಧ್ವಂಸಕ ಕೃತ್ಯ ತಪಾಸಣೆ ತಂಡಗಳು ಭದ್ರತೆಗಾಗಿ ನಿಯೋಜನೆಗೊಂಡಿವೆ. ಸುವರ್ಣ ವಿಧಾನಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಇರಲಿದ್ದು, ಸುವರ್ಣ ಗಾರ್ಡನ್ ಮತ್ತು ಅಲಾರವಾಡ ಬಳಿ ಪ್ರತಿಭಟನೆಗಳಿಗೆ ಸ್ಥಳ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಏರುತ್ತಲೇ ಇದೆ ಬೆಳಗಾವಿ ಅಧಿವೇಶನದ ವೆಚ್ಚ: ಈ ಬಾರಿ ಎಷ್ಟು ಖರ್ಚಾಗುತ್ತೆ ಗೊತ್ತಾ?
ಸಿಎಂ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವ ಹಿನ್ನಲೆ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ವಿಪಕ್ಷ ಬಿಜೆಪಿ ಚಿಂತಿಸಿತ್ತು. ಆದರೆ ಈಗ ತನ್ನ ನಿರ್ಧಾರದಿಂದ ಕಮಲಪಡೆ ಹಿಂದೆ ಸರಿದಿದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, ಅವಿಶ್ವಾಸ ಮಂಡನೆಗೆ ಮುಂದಾಗದಂತೆ ಬಿಜೆಪಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಅವಿಶ್ವಾಸ ಮಂಡನೆ ಮಾಡಿದರೆ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಸೃಷ್ಟಿಯಾಗುತ್ತದೆ. ಹೀಗಾಗಿ ಒಗ್ಗಟ್ಟಾಗುವುದಕ್ಕೆ ಅವಕಾಶ ಕೊಡುವುದು ಬೇಡ ಎಂದು HDK ಸಲಹೆ ಹಿನ್ನಲೆ ಬಿಜೆಪಿ ನಿರ್ಧಾರ ಬದಲಾಯಿಸಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 am, Sun, 7 December 25