ಚಿಕ್ಕೋಡಿ: ಕಾಮತೃಷೆಗೆ ಮಗಳ ಮೇಲೆರಗಿದ ಪತಿಯ ಕೊಲೆಗೈದು ತುಂಡು ತುಂಡು ಮಾಡಿ ಜಮೀನಿಗೆಸೆದ ಪತ್ನಿ

| Updated By: Ganapathi Sharma

Updated on: Jan 02, 2025 | 10:52 AM

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಎಂಬಲ್ಲಿ ಶ್ರೀಮಂತ ಇಟ್ನಾಳೆ ಎಂಬ ವ್ಯಕ್ತಿ ತನ್ನ ಪತ್ನಿಯಿಂದಲೇ ಭೀಕರವಾಗಿ ಕೊಲೆಯಾಗಿದ್ದಾನೆ. ಈತ, ಪತ್ನಿ ಸಹಕರಿಸುತ್ತಿಲ್ಲವೆಂದು ಮಗಳ ಮೇಲೆಯೇ ಬಲಾತ್ಕಾರಕ್ಕೆ ಯತ್ನಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಹಣಕ್ಕಾಗಿ, ಪರಪುರುಷರ ಜೊತೆ ಮಲಗುವಂತೆ ಪತ್ನಿಯನ್ನು ಬಿಡಿಸುತ್ತಿದ್ದ ಎಂಬ ಆರೋಪವೂ ಇದೆ.

ಚಿಕ್ಕೋಡಿ: ಕಾಮತೃಷೆಗೆ ಮಗಳ ಮೇಲೆರಗಿದ ಪತಿಯ ಕೊಲೆಗೈದು ತುಂಡು ತುಂಡು ಮಾಡಿ ಜಮೀನಿಗೆಸೆದ ಪತ್ನಿ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ, ಜನವರಿ 2: ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿಲ್ಲವೆಂದು ಮಗಳ ಮೇಲೆ ಬಲಾತ್ಕಾರ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಮಹಿಳೆಯೊಬ್ಬಳು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗ್ರಾಮದ ಶ್ರೀಮಂತ ಇಟ್ನಾಳೆ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಸಾವಿತ್ರಿ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಮೃತ ದೇಹವನ್ನು ಎರಡು ತುಂಡಾಗಿ ಕತ್ತರಿಸಿ ಪಕ್ಕದ ಗದ್ದೆಯಲ್ಲಿ ಎಸೆದಿದ್ದಾಳೆ.

ಬಟ್ಟೆ ಸುಟ್ಟು ತಿಪ್ಪೆಗೆ ಎಸೆದಿದ್ದ ಸಾವಿತ್ರಿ

ಶ್ರೀಮಂತ ಇಟ್ನಾಳೆಯನ್ನು ಕೊಲೆ ಮಾಡಿದ ನಂತರ, ಶವವನ್ನು ಮನೆಯಲ್ಲಿ ಇಟ್ಟುಕೊಂಡರೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಹೆದರಿಕೆ ಸಾವಿತ್ರಿಗೆ ಎದುರಾಗಿದೆ. ಆದರೆ, ಶವವನ್ನು ಸಾಗಿಸುವುದು ಕಷ್ಟ ಎಂದು ಅರಿತ ಆಕೆ ಎರಡು ತುಂಡು ಮಾಡಿದ್ದಾಳೆ. ನಂತರ ಚಿಕ್ಕ ಬ್ಯಾರೆಲ್​​ನಲ್ಲಿ ಹಾಕಿ ಸಾಗಾಟ ಮಾಡಿ ಪಕ್ಕದ ಗದ್ದೆಯಲ್ಲಿ ಎಸೆದು ಬಂದಿದ್ದಾಳೆ.

ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಮೈ ಮೇಲಿನ ಬಟ್ಟೆಯನ್ನೆಲ್ಲ ಸುಟ್ಟು ಹಾಕಿ ಬೂದಿಯನ್ನು ತಿಪ್ಪೆಗೆ ಎಸೆದಿದ್ದಾಳೆ. ಕೊಲೆ ಮಾಡಲು ಬಳಸಿದ್ದ ಕಲ್ಲನ್ನು ತೊಳೆದು ತಗಡಿನ ಶೆಡ್ಡಿನಲ್ಲಿ ಬಚ್ಚಿಟ್ಟಿದ್ದಾಳೆ. ಗಂಡನ ಮೊಬೈಲ್ ಫೋನನ್ನು ಕೂಡ ಸ್ವಿಚ್ ಆಫ್ ಮಾಡಿ ಇಟ್ಟಿದ್ದಾಳೆ. ಕೃತ್ಯದ ವೇಳೆ ಎಚ್ಚರಗೊಂಡಿದ್ದ ಮೊದಲ ಮಗಳಿಗೆ, ನಡೆದ ವಿಚಾರವನ್ನು ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದಾಳೆ. ರಾತ್ರಿ ಬೆಳಗಾಗುವಷ್ಟರಲ್ಲಿ ಕೊಲೆಯ ಸುಳಿವೇ ಸಿಗದಂತೆ ಮಾಡಿದ್ದಾಳೆ.

ಜಮೀನಿನಲ್ಲಿ ಶವ ಕಂಡ ಸ್ಥಳೀಯರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಅವರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ನಡೆದಿರುವ ಘಟನೆ ಒಂದೊಂದಾಗಿ ಬೆಳಕಿಗೆ ಬಂದಿದೆ.

ಚಿಕ್ಕೋಡಿ ಪೊಲೀಸರಿಗೆ ಇಟ್ನಾಳೆ ಪತ್ನಿಯ ಮೇಲೆ ಅನುಮಾನ ಬಂದಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ, ಸತ್ಯ ಬಾಯಿಬಿಟ್ಟ ಸಾವಿತ್ರಿ, ಗಂಡನಿಂದ ನಿರಂತರವಾಗಿ ಆಗುತ್ತಿದ್ದ ಕಿರುಕುಳ, ಶೋಷಣೆಗೆ ಬೇಸತ್ತು ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಪರಪುರುಷರ ಜೊತೆ ಮಲಗುವಂತೆ ಪೀಡಿಸುತ್ತಿದ್ದ ಗಂಡ

ಗಂಡ ಸದಾ ಜಗಳವಾಡುತ್ತಿದ್ದ. ಕುಡಿಯಲು ಹಣಕೊಡಬೇಕು, ಬೈಕ್ ಕೊಡಿಸಬೇಕೆಂದು ಕಿರುಕುಳ ನೀಡುತ್ತಿದ್ದ. ಇಷ್ಟೇ ಅಲ್ಲದೆ, ಹಣಕ್ಕಾಗಿ ಬೇರೆಯವರ ಜೊತೆ ಮಲಗು ಎಂದು ಒತ್ತಾಯಿಸುತ್ತಿದ್ದ. ಇದೇ ಕಾರಣದಿಂದ ಪರ ಪುರುಷರ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿರುವುದಾಗಿ ಸಾವಿತ್ರಿ ಪೊಲೀಸರ ಬಳಿ ತಿಳಿಸಿದ್ದಾಳೆ.

ಇದನ್ನೂ ಓದಿ: ಬೆಳಗಾವಿ: ಡ್ಯೂಟಿ ಬದಲಿಸಿದ್ದಕ್ಕೆ ಠಾಣೆಯಲ್ಲಿ ಆತ್ಮಹತ್ಯೆ ಡ್ರಾಮಾ ಮಾಡಿದ ಕಾನ್ಸ್​ಟೇಬಲ್! ಆಮೇಲೇನಾಯ್ತು?

ಇಷ್ಟೆಲ್ಲಾ ಆದಮೇಲೆ ಪತಿಯು, ಮಗಳನ್ನೂ ಬಿಡದೆ ಬಲಾತ್ಕರಿಸಲು ಯತ್ನಿಸಿದ್ದರಿಂದ ಸಹಿಸಲಾಗದೆ ಕೃತ್ಯ ಎಸಗಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಳೆ. ಮಕ್ಕಳು ಅನಾಥರಾಗಿ ಬಿಡುತ್ತಾರೆ, ಹೀಗಾಗಿ ಬಿಟ್ಟುಬಿಡಿ ಎಂದು ಪೊಲೀಸರ ಬಳಿ ಗೋಗರೆದಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ