
ಬೆಂಗಳೂರು, ಡಿ.12: ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್(High Court) ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದೆ. ಭಾರತ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲಿ ಇಂತಹ ಘಟನೆ ಕಳವಳಕಾರಿಯಾಗಿದೆ. ಜೊತೆಗೆ ಮಾಧ್ಯಮಗಳಲ್ಲಿ ಸಂತ್ರಸ್ತೆಯ ಫೋಟೋ, ಸಂದರ್ಶನ ಬಿತ್ತರಿಸದಂತೆ ನಿರ್ಬಂಧ ಹೇರಲಾಗಿದೆ. ಕೆಲ ಮಾಧ್ಯಮಗಳಲ್ಲಿ ಸಂತ್ರಸ್ತೆಯ ಫೋಟೋ, ವಿಡಿಯೋ ಬಿತ್ತರಿಸಲಾಗುತ್ತಿದೆ. ಇದರಿಂದ ಸಂತ್ರಸ್ತೆ ಘನತೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದೆ. ಆದರೆ, ಘಟನೆಯ ಸುದ್ದಿ ಪ್ರಸಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಆದೇಶಿಸಿದೆ.
ಇದೇ ತಿಂಗಳ 11 ರಂದು ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಾನವ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ನಡೆದಿತ್ತು. ಓರ್ವ ಮಹಿಳೆಯನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಬಳಿಕ ಈ ಘಟನೆಗೆ ಸಂಬಂಧಪಟ್ಟಂತೆ 7 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇನ್ನು ಇಷ್ಟಕ್ಕೆಲ್ಲಾ ಪ್ರೀತಿಸಿದ್ದ ಯುವತಿ ಜೊತೆ ಗ್ರಾಮದ ಯುವಕ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು, ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯ ವರ್ತನೆ ತೋರಿದ್ದರು.
ಇದನ್ನೂ ಓದಿ:ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಬೆಳಗಾವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್
ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಪ್ರಕರಣ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾದ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸ್ತಿದ್ದೇವೆ. ಮಹಿಳೆಯನ್ನ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ ಬಂದು ತಕ್ಷಣ ಮಹಿಳೆ ರಕ್ಷಣೆ ಮಾಡಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ ಎಂದಿದ್ದರು. ಇದೀಗ ಹೈಕೋರ್ಟ್ ಸೂಕ್ತ ತನಿಖೆಗೆ ಆಗ್ರಹಿಸಿ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Tue, 12 December 23