ಪಂಚಮಸಾಲಿ 2ಎ ಮೀಸಲಾತಿ ಹೋರಾಟ: ಸಿಎಂ ಸಿದ್ದರಾಮಯ್ಯ ಸಭೆ ಬಳಿಕ ಮುಖಂಡರಲ್ಲಿ ಭಿನ್ನ ನಿಲುವು, ಹೈಡ್ರಾಮ
2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದ ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದರು. ಸಭೆ ಮುಗಿಸಿ ಸಿದ್ದರಾಮಯ್ಯ ತೆರಳುತ್ತಿದ್ದಂತೆ ಸಮುದಾಯದ ನಾಯಕರಾಗಿರುವ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ ಹಾಗೂ ಪದಾಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

ಬೆಳಗಾವಿ, ಡಿ.12: ಪಂಚಮಸಾಲಿ ಸಮುದಾಯಕ್ಕೆ 2 ಮೀಸಲಾತಿ (Panchamasali 2A Reservation) ನೀಡುವಂತೆ ಆಗ್ರಹಿಸಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರಾಟ ನಡೆದು ಬಳಿಕ ತಣ್ಣಗಾಗಿತ್ತು. ಇದೀಗ ಮತ್ತೆ ಹೋರಾಟ ಆರಂಭವಾಗಿದೆ. ಬೆಳಗಾವಿ ಅಧಿವೇಶನದ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಭೆ ನಡೆಸಿದ್ದಾರೆ. ಆದರೆ, ಸಭೆ ಮುಕ್ತಾಯದ ನಂತರ ನಡೆದ ಮುಖಂಡರ ಸಭೆಯಲ್ಲಿ ಹೈಡ್ರಾಮವೇ ನಡೆಯಿತು.
ಸಿಎಂ ಸಭೆ ನಂತರ ಪಂಚಮಸಾಲಿ ಮುಖಂಡರ ಸಭೆ ನಡೆಯಿತು. ಈ ವೇಳೆ ನಾಳೆ ಹೋರಾಟ ಮಾಡಬೇಕಾ? ಬೇಡವಾ? ಸಿಎಂ ನೀಡಿದ ಗಡುವಿನವರೆಗೂ ಕಾಯಬೇಕಾ ಅನ್ನೋದರ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಬಸವ ಜಯಮೃತ್ಯುಂಜಯಶ್ರೀ ಎದುರೇ ವಿಜಯಾನಂದ ಕಾಶಪ್ಪನವರ್ ಮತ್ತು ಪದಾಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ರಾಜಕಾರಣ ಮಾಡುವುದು ಬೇಡ ಎಂದು ಕಾಶಪ್ಪನವರ್ ಗದರಿದರು. ಅಂತಿಮವಾಗಿ ಕಾಶಪ್ಪನವರ್, ಕುಲಕರ್ಣಿ ತೀರ್ಮಾನಕ್ಕೆ ಬದ್ಧ ಎಂದು ಸದಸ್ಯರು ಹೇಳಿದರು.
ಚೆನ್ನಮ್ಮ ಸರ್ಕಲ್ ಬಳಿ ಬೃಹತ್ ಸಭೆ
ಸಭೆ ಬಳಿಕ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬೃಹತ್ ಪ್ರಮಾಣದ ಹೋರಾಟಕ್ಕೆ ನಾಳೆ ಕರೆ ಕೊಡಲಾಗಿದೆ. ಈ ಹೋರಾಟಕ್ಕೆ ಮಣಿದ ಸರ್ಕಾರ ಇಂದು ನಮ್ಮೊಂದಿಗೆ ಮುಕ್ತ ಮಾತುಕತೆ ಮಾಡಿದೆ. ರಾಜ್ಯಾದ್ಯಂತ ಬರುವ ನಮ್ಮ ಎಲ್ಲ ಸಮಾಜದ ಬಂಧುಗಳು, ಮುಖಂಡರು ನಾಳೆ ಚೆನ್ನಮ್ಮ ಸರ್ಕಲ್ ಬಳಿ ಸಭೆ ಸೇರಿ ಹೋರಾಟದ ಬಗ್ಗೆ ಚರ್ಚಿಸೋಣ ಎಂದರು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಮುನ್ನಲೆಗೆ: ಸರ್ಕಾರಗಳ ಮುಂದೆ ಸ್ವಾಮೀಜಿ ಇಟ್ಟ 2 ಬೇಡಿಕೆಗಳೇನು?
ಮುಖ್ಯಮಂತ್ರಿ ಏನು ಚರ್ಚೆ ಮಾಡಿದ್ದಾರೆ, ನಾವು ಯಾವ ನಿಲುವನ್ನ ತೆಗೆದುಕೊಳ್ಳಬೇಕು ಅನ್ನೋದರ ಬಗ್ಗೆ ಇಂದು ಸಂಜೆ ನಿರ್ಧಾನ ಮಾಡುತ್ತೇವೆ. ನಾಳೆ ಬೆಳಗ್ಗೆ 10 ಗಂಟೆಗೆ ಚೆನ್ನಮ್ಮ ಸರ್ಕಲ್ ಬಳಿ ಬೃಹತ್ ಪಂಚಮಸಾಲಿ ಸಭೆ ನಡೆಯಲಿದೆ. ನಾಳೆ ನಮ್ಮ ಮುಂದಿನ ನಿರ್ಧಾರವನ್ನ ಪ್ರಕಟ ಮಾಡುತ್ತೇವೆ ಎಂದರು.
ಹಿಂದಿನ ಸರ್ಕಾರದ ಆದೇಶ ಪಾಲಿಸಿ ಅಂತ ಸಿದ್ದರಾಮಯ್ಯಗೆ ಮನವಿ
ಸಭೆ ಬಳಿಕ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಬಸವರಾಜ ಬೊಮಾಯಿ ನೇತೃತ್ವದ ಸರ್ಕಾರವು ಒಕ್ಕಲಿಗರಿಗೆ ಶೇ.6, ಲಿಂಗಾಯರಿಗೆ ಶೇ.7 ರಷ್ಟು ಮೀಸಲಾತಿ ಘೋಷಿಸಿತ್ತು. ಹಿಂದಿನ ಸರ್ಕಾರದ ಆದೇಶ ಪಾಲಿಸಿ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ವಿಚಾರ ಮಾಡುತ್ತೇವೆ ಅಂತ ಹೇಳಿದ್ದಾಗಿ ತಿಳಿಸಿದರು.
ಮೀಸಲಾತಿ ವಿಚಾರದಲ್ಲಿ ಸಂಪುಟದ ನಿರ್ಧಾರ ಇದರಲ್ಲಿ ಬಹಳ ಮುಖ್ಯವಾಗಿದೆ. ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದೇವೆ. ಸಭೆಯಲ್ಲಿ ಯಾವ ವಿಚಾರವೂ ಇತ್ಯರ್ಥ ಆಗಿಲ್ಲ. ಸ್ವಾಮೀಜಿ ನೇತ್ರತ್ವದಲ್ಲಿ ನಾಳೆ ಹೋರಾಟ ನಡೆಯಲಿದೆ ಎಂದರು.
ಕಾಂತರಾಜು ವರದಿಯಲ್ಲಿ ಸ್ಯಾಂಪಲ್ ಸಂಗ್ರಹಿಸಿ ಮಾಡಲಾಗಿದೆ. ಬಡ ಲಿಂಗಾಯತ ಜನ ಮೀಸಲಾತಿ ಸಿಗುತ್ತದೆ ಅಂತ ಗಾಣಿಗ, ಕುಂಬಾರ ಅಂತ ಬರೆಸಿಕೊಂಡರು. ಲಿಂಗಾಯತ ಗಾಣಿಗ ಅಂತ ಹಾಕಿಸಿಕೊಂಡಿಲ್ಲ. ಜಾತಿಗಣತಿಗೂ ಮೊದಲು 2C ಮತ್ತು 2D ಮೀಸಲಾತಿ ಜಾರಿ ಮಾಡಿ. ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ನಿರ್ಧಾರ ತಗೆದುಕೊಳ್ಳಬೇಕು ಎಂದರು.
ನಾಳೆ ನಮ್ಮ ನಿಲುವು ಪ್ರಕಟಣೆ: ವಿಜಯಾನಂದ್ ಕಾಶಪ್ಪನವರ್
ವಿಜಯಾನಂದ್ ಕಾಶಪ್ಪನವರ್ ಮಾತನಾಡಿ, ನಮ್ಮ ಬೇಡಿಕೆ ಈಡಿರಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಚೆನ್ನಮ್ಮ ಸರ್ಕಲ್ ನಲ್ಲಿ ನಾಳೆ ನಮ್ಮ ನಿಲುವು ಪ್ರಕಟಣೆ ಮಾಡುತ್ತೇವೆ ಎಂದರು. ಹೋರಾಟ ಮಾಡಬೇಕೋ ಬೇಡವೇ ಎಂಬ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಪಕ್ಷಾತಿತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಹಾಗೇ ನಡೆಯುತ್ತದೆ. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದರು.
ಸಣ್ಣಪುಟ್ಟ ವ್ಯವಸ್ಥೆ ಇರುತ್ತದೆ. ಅದು ಅವರ ಭಾವನೆಗೆ ತಕ್ಕಂತೆ ಅವರು ಹೇಳುತ್ತಾರೆ. ಹಿಂದೆ ಯಾವ ರೀತಿ ನಡೆದಿದೆ ಆ ರೀತಿ ನಡೆದರೆ ಅವರಿಗೂ ಗೌರವ ನಮಗೂ ಗೌರವ. ಅದನ್ನ ಉಳಿಸಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Tue, 12 December 23



