ಬೆಳಗಾವಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, 7 ಜನ ಅರೆಸ್ಟ್
ಬೆಳಗಾವಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪ್ರೀತಿಸಿದ್ದ ಯುವತಿ ಜೊತೆ ಗ್ರಾಮದ ಯುವಕ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯ ವರ್ತನೆ ತೋರಿದ್ದಾರೆ.
ಬೆಳಗಾವಿ, ಡಿ.11: ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault) ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು 7 ಜನರನ್ನು ಅರೆಸ್ಟ್ ಮಾಡಲಾಗಿದೆ. ಪ್ರೀತಿಸಿದ್ದ (Love) ಯುವತಿ ಜೊತೆ ಗ್ರಾಮದ ಯುವಕ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯ ವರ್ತನೆ ತೋರಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ.
ಯುವತಿಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು. ಯದೀ ಮೇಲ್ ಶಾದಿ ಮಾಡಲು ಯುವತಿಯ ಕುಟುಂಬಸ್ಥರು ನಿರ್ಧರಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಿನ್ನೆ ಮಧ್ಯರಾತ್ರಿ ಯುವತಿ ಪ್ರಿಯಾಂಕಾ ಕರೆದುಕೊಂಡು ಯುವಕ ದುಂಡಪ್ಪ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮಲಗಿದ್ದ ಯುವಕನ ತಾಯಿಯನ್ನು ಹೊರಗೆಳೆದು ಮಹಿಳೆ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ್ದಾರೆ. ಬಳಿಕ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಮಹಿಳೆಯರು ಸೇರಿ ಒಂಬತ್ತು ಜನರ ವಿರುದ್ಧ ದೂರು ದಾಖಲಾಗಿದ್ದು 7 ಜನ ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: ಉಡುಪಿ ನೇಜಾರಿನಲ್ಲಿ ನಾಲ್ವರ ಅಮಾನುಷ ಹತ್ಯೆ ಪ್ರಕರಣದಲ್ಲಿ ಅನಪೇಕ್ಷಿತ ಬೆಳವಣಿಗೆ: ಗ್ರಾಮಸ್ಥರ ಆಕ್ರೋಶ
ಇನ್ನು ಘಟನಾ ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾದ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸ್ತಿದ್ದೇವೆ. ಮಹಿಳೆಯನ್ನ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಅಂತಾ ಗೊತ್ತಾಗಿದೆ. ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ ಬಂದು ತಕ್ಷಣ ಮಹಿಳೆ ರಕ್ಷಣೆ ಮಾಡಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಘಟನೆ ಸಂಬಂಧ ಇಬ್ಬರು ಎಸ್ಕೇಪ್ ಆಗಿದ್ದು ಅವರ ಶೋಧ ನಡೆಸುತ್ತಿದ್ದೇವೆ. ಹಲ್ಲೆಗೊಳಗಾದ ಮಹಿಳೆಯ ಮಗ ಮತ್ತು ಯುವತಿ ಓಡಿ ಹೋಗಿದ್ದಾರೆ. ಇದೇ ಕಾರಣಕ್ಕೆ ಯುವತಿ ಮನೆಯವರು ಬಂದು ಗಲಾಟೆ ಮಾಡಿದ್ದಾರೆ. ಕಂಬಕ್ಕೆ ಕಟ್ಟಿ ಹಾಕಿ ಮಹಿಳೆಯನ್ನ ಹೊಡೆದಿದ್ದಾರೆ. ಈ ರೀತಿ ಘಟನೆ ಆಗಬಾರದಿತ್ತು ಎಂದರು.
ಓಡಿ ಹೋದ ಯುವಕನ ಅಜ್ಜಿ ಈರವ್ವ ಹೇಳಿದಿಷ್ಟು
ಘಟನೆ ಸಂಬಂಧ ಪ್ರತ್ಯಕ್ಷದರ್ಶಿ ಅಜ್ಜಿ ಈರವ್ವ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ರಾತ್ರಿ ಕಲ್ಲು ದೊಣ್ಣೆ ಹಿಡಿದು ಮಲಗಿದ್ದ ನಮ್ಮ ಮೇಲೆ ದಾಳಿ ಮಾಡಿದರು. ನೊಂದ ಮಹಿಳೆ ಮೇಲೆ ಹಲ್ಲೆ ಮಾಡಿ ಸೀರೆ ಕಳಚಿ ಎಳೆದುಕೊಂಡು ಹೋದರು. ಗ್ರಾಮದ ಮಧ್ಯ ಭಾಗಕ್ಕೆ ಕರೆದುಕೊಂಡು ಹೋಗಿ ಕಟ್ಟಿಹಾಕಿ ಹಲ್ಲೆ ಮಾಡಿದರು. ಇಬ್ಬರು ಪೋಲಿಸರು ಬಂದು ಮನೆಯಲ್ಲಿನ ಸೀರೆ ತೆಗೆದುಕೊಂಡು ಹೋಗಿ ಅವಳಿಗೆ ಕೊಟ್ಟರು. ಮನೆಗೆ ಕರೆದುಕೊಂಡು ಬಂದ ಪೋಲಿಸರು ಬಳಿಕ ಆಸ್ಪತ್ರೆಗೆ ಹೋದರು. ನನ್ನ ಮೇಲೆ ಕಲ್ಲು ಎತ್ತಿ ಹಾಕಿ ಹೊಡೆಯುತ್ತೇನೆ ಅಂತಾ ಹೆದರಿಸಿದ್ರು. ದುಂಡಪ್ಪ ಮನೆಯಲ್ಲಿದ್ರೇ ಕೊಂದೇ ಬಿಡ್ತಿದ್ರು ಎಂದು ಅಜ್ಜಿ ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:45 am, Mon, 11 December 23