ಈಡಿಗ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಭರವಸೆಗಳಿಗೆ ಟಕ್ಕರ್ ಕೊಟ್ಟ ಬಿಕೆ ಹರಿಪ್ರಸಾದ್
ಗುರು ನಾರಾಯಣ ಅಧ್ಯಯನ ಪೀಠ ಸ್ಥಾಪನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ದಾರಿ ತಪ್ಪಿಸಲಾಗಿದೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಅಲ್ಲದೆ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ನಿರ್ಮಾನಕ್ಕೆ ಐದು ಕೋಟಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅದು ಎಲ್ಲಿದೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಬೆಳಗಾವಿ, ಡಿ.11: ಗುರು ನಾರಾಯಣ ಅಧ್ಯಯನ ಪೀಠ ಈಗಾಗಲೇ ಪ್ರಾರಂಭ ಆಗಿದೆ. ಅದನ್ನು ಪ್ರಾರಂಭಿಸಬೇಕು ಎಂದು ಹೇಳಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಯಾರೋ ತಪ್ಪುದಾರಿಗೆ ಎಳೆದಿದ್ದಾರೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ಅನುದಾನದಲ್ಲಿ ಐವತ್ತು ಲಕ್ಷ ಕೊಟ್ಟು ಪ್ರಾರಂಭ ಮಾಡಿದ್ದೇನೆ. ಅರ್ಧದಲ್ಲಿ ನಿಂತಿದ್ದು ಪೂರ್ಣ ಮಾಡಲು ಎರಡು ಕೋಟಿ ಕೊಡಿ ಎಂದು ಕೇಳಿದ್ದೇನೆ. ಎರಡು ವರ್ಷದಿಂದ ಓಡಾಡುತ್ತಿದ್ದೇನೆ. ಕೋಟಿ ಚನ್ನಯ್ಯ ಥೀಂ ಪಾರ್ಕ್ ಗೆ ಐದು ಕೋಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಅದು ಎಲ್ಲಿ ಇದೆ ಎಂದು ನನಗೆ ಗೊತ್ತಿಲ್ಲ ಎಂದರು.
ಬೆಂಗಳೂರಿನಲ್ಲಿ ಬಿಲ್ಲವ ಈಡಿಗರ ಸಮಾವೇಶ ನಡೆದ ವಿಚಾರವಾಗಿ ಮಾತನಾಡಿದ ಬಿಕೆ ಹರಿಪ್ರಸಾದ್, ಸಮುದಾಯ ಒಡೆಯಲು ಈ ಸಮಾವೇಶ ನಡೆದಿದೆ ಎಂಬ ದಾಟಿಯಲ್ಲಿ ನಾನು ಹೇಳುತ್ತಿಲ್ಲ. ರಾಹುಲ್ ಗಾಂಧಿ ಹಿಂದುಳಿದ ವರ್ಗಗಳ ಜಾತಿ ಗಣತಿ ಆಗಬೇಕು ಎಂದಿದ್ದಾರೆ. ಯಾವುದೇ ಸಮುದಾಯ ಒಡೆಯುವ ಕೆಲಸ ಆಗಬಾರದು. ತುಳಿತಕ್ಕೆ ಒಳಗಾದವನ್ನು ಒಡೆಯುವ ಕೆಲಸ ಆಗಬಾರದು ಎಂದರು.
ಇದನ್ನೂ ಓದಿ: ನಾನೊಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತಿದ್ದೀರಾ: ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ
ಸಮಾವೇಶದಲ್ಲಿ ಸಮಾಜದ ಎಲ್ಲಾ ಸ್ವಾಮೀಜಿಗಳು ಬಂದರೆ ಒಗ್ಗಟ್ಟು ಸಾಧ್ಯ. ಆದರೆ ಎಲ್ಲಾ ಸ್ವಾಮೀಜಿಗಳು ಇರಲಿಲ್ಲ, ಇದು ತಪ್ಪು ಎಂಬ ಅಭಿಪ್ರಾಯ ಸ್ವಾಮೀಜಿಗಳು ವ್ಯಕ್ತಪಡಿಸಿದ್ದರು. ಅವರ ಕೋರಿಕೆಯ ಮೇರೆಗೆ ನಾನು ಸಮಾವೇಶಕ್ಕೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ಸಮಾವೇಶದಲ್ಲಿ ಏನು ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಿಲ್ಲ ಎಂದರು.
ನಮ್ಮನ್ನು ಟಾರ್ಗೆಟ್ ಮಾಡುವ ಉದ್ದೇಶ ಇದೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ಬಹಳ ಸಂತೋಷ. ನಮ್ಮ ಸಮುದಾಯದಲ್ಲಿ ಇನ್ನೊಬ್ಬ ನಾಯಕನಾಗುತ್ತಾನೆ ಎಂದರೆ ಸಂತೋಷ. ಸೈಡ್ ಲೈನ್ ಮಾಡುವುದು, ಟಾರ್ಗೆಟ್ ಮಾಡುವುದನ್ನು ಬಹಳ ವರ್ಷದಿಂದ ನೋಡಿದ್ದೇನೆ. ನನ್ನನ್ನು ಟಾರ್ಗೆಟ್, ಸೈಡ್ ಲೈನ್ ಮಾಡುವವರು ಭ್ರಮನಿರಸನದಲ್ಲಿ ಇರಬೇಕು ಎಂದರು.
ಜನವರಿಯಲ್ಲಿ ಮತ್ತೊಂದು ಸಮಾವೇಶ
ಜನವರಿಯಲ್ಲಿ ಮತ್ತೊಂದು ಸಮಾವೇಶ ಮಾಡಬೇಕು ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಅದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ ಹರಿಪ್ರಸಾದ್, ನಾನು ಹಿಂದೆಯೂ ಸರಿದಿಲ್ಲ, ಮುಂದೆಯೂ ಹೋಗಿಲ್ಲ. ನಾನು ಸಮಾವೇಶ ಮಾಡಿದ ಮೇಲೆ ಇನ್ನೊಂದು ಸಮಾವೇಶ ಆಯ್ತು. ಸರದಿ ಲೆಕ್ಕದಲ್ಲಿ ಸಮಾವೇಶ ನಡೆಯುತ್ತಿದೆ ಅದು ಒಳ್ಳೆದು. ನನ್ನ ಸಮಾವೇಶಕ್ಕೆ ಪರ್ಯಾಯ ಎಂದು ಹೇಳಲ್ಲ. ಸಮಾವೇಶಗಳು ನಡೆಯಲಿ, ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಲಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ