ಬೆಳಗಾವಿ: ಟಿಪ್ಪರ್​ ಹರಿದು ಮನೆ ಬಳಿ ಆಟವಾಡ್ತಿದ್ದ ಮಗು ಸಾವು; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2024 | 4:08 PM

ಮಕ್ಕಳು ಆಟವಾಡುವಾಗ ಒಬ್ಬರನ್ನೇ ಬಿಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು, ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರದಲ್ಲಿ ಟಿಪ್ಪರ್​ ಹರಿದು ಮನೆ ಬಳಿ ಆಟವಾಡುತ್ತಿದ್ದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಯಮಕನಮರಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ: ಟಿಪ್ಪರ್​ ಹರಿದು ಮನೆ ಬಳಿ ಆಟವಾಡ್ತಿದ್ದ ಮಗು ಸಾವು; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಅಪಘಾತ
Follow us on

ಬೆಳಗಾವಿ, ಮಾ.06: ಟಿಪ್ಪರ್​ ಹರಿದು ಮನೆ ಬಳಿ ಆಟವಾಡುತ್ತಿದ್ದ ಮಗು ಸಾವನ್ನಪ್ಪಿದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರದಲ್ಲಿ ನಡೆದಿದೆ. ಅದ್ವೈತ್ ಅಕ್ಷಯ್ ನಾಶಿಪುಡಿ(4) ಮೃತ ಮಗು. ರಸ್ತೆ ಪಕ್ಕದಲ್ಲಿ ಆಟವಾಡುತ್ತಿದ್ದಾಗ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಮಗು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದೆ. ಅಪಘಾತ ಆಗುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಯಮಕನಮರಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಮಕನಮರಡಿ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರು ಪಲ್ಟಿಯಾಗಿ ವಕೀಲ ಮುಬಾರಕ್ ಪಾಷಾ ಸಾವು

ಕೋಲಾರ: ಶ್ರೀನಿವಾಸಪುರ ತಾಲೂಕಿನ ಅವಗಾನಪಲ್ಲಿ ಬಳಿ ತಿರುವಿನಲ್ಲಿ ಚರಂಡಿಗೆ ಕಾರು ಪಲ್ಟಿಯಾಗಿ ವಕೀಲರೊಬ್ಬರು ಕೊನೆಯುಸಿರೆಳೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದ ನಿವಾಸಿಯಾಗಿದ್ದ ವಕೀಲ ಮುಬಾರಕ್ ಪಾಷಾ(40) ಮೃತ ರ್ದುದೈವಿ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಕಾರು ಪಲ್ಟಿಯಾಗಿದೆ. ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸಿದೇ ಸಾವನ್ನಪ್ಪಿದ್ದಾರೆ. ಈ ಕುರಿತು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ರಾಮನಗರ: ಪೆಂಟಾ ಲಸಿಕೆ ಚುಚ್ಚುಮದ್ದು ಪಡೆದ ಕೆಲವೇ ಹೊತ್ತಲ್ಲಿ ಒಂದೂವರೆ ತಿಂಗಳ ಮಗು ಸಾವು

ಖಾಸಗಿ ಶಾಲಾ ವಾಹನ, ದ್ವಿಚಕ್ರ ವಾಹನ ನಡುವೆ ಅಪಘಾತ

ಕೋಲಾರ: ಖಾಸಗಿ ಶಾಲಾ ವಾಹನ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತವಾದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕದಿರೋಳ್ಳಗಡ್ಡ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಶಾಲಾ ವಾಹನ ರಸ್ತೆ ಬದಿಯ ಬೇಲಿಗೆ ನುಗ್ಗಿದ್ದು, ಅದೃಷ್ಟವಾಶಾತ್ ಶಾಲಾ‌ ವಾಹನದಲ್ಲಿ ಮಕ್ಕಳಿರಲಿಲ್ಲ. ಅಪಘಾತದಲ್ಲಿ ಶಾಲಾ ವಾಹನ ದ್ವಿಚಕ್ರ ವಾಹನ ಬಹುತೇಕ ಜಖಂವಾಗಿದ್ದು, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ