ಬೆಳಗಾವಿ, ಅಕ್ಟೋಬರ್ 13: ಕನ್ನಡ ರಾಜ್ಯೋತ್ಸವ (kannada rajyotsava) ಸಮೀಪಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಹೊಸದೊಂದು ಕಿರಿಕ್ ಶುರು ಮಾಡಿದೆ. ಬೆಳಗಾವಿಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಂಡು ಸತ್ತಿರುವ ಎಂಇಎಸ್ಗೆ ಮತ್ತೆ ಜೀವ ತುಂಬುವ ಕೆಲಸಕ್ಕೆ ಮುಂದಾಗಿದೆ. ಮುಂಬೈ, ದೆಹಲಿ ಪ್ರವಾಸ ಕೈಗೊಳ್ಳುವ ಎಂಇಎಸ್ ನಾಯಕರ ಖರ್ಚುವೆಚ್ಚ ನೋಡಿಕೊಳ್ಳುವುದರ ಜೊತೆಗೆ ಮತ್ತೊಂದು ಅಧಿಕಾರ ಸಹ ನೀಡಿದೆ. ಹರೀಶ್ ಸಾಳ್ವೆರಂತ ಹಿರಿಯ ವಕೀಲರ ನೇತೃತ್ವದಲ್ಲಿ 12 ಜನ ವಕೀಲರ ತಂಡ ನೇಮಿಸಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಅಲರ್ಟ್ ಆಗಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಸೈಲೆಂಟ್ ಆಗಿದೆ. ಹಾಗಾಗಿ ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಸಿಡಿದೆದ್ದಿವೆ.
ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದೆ. ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲೇ ಮಹಾರಾಷ್ಟ್ರ ಸರ್ಕಾರ ಕಾಲು ಕೆರೆದು ಕ್ಯಾತೆ ಆರಂಭಿಸಿದೆ. ಬೆಳಗಾವಿಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಂಡು ಸೋತು ಸುಣ್ಣವಾಗಿದ್ದ ನಾಡದ್ರೋಹಿ ಎಂಇಎಸ್ ಪುಂಡರಿಗೆ ಬಲ ತುಂಬುವ ಕಾರ್ಯದಲ್ಲಿ ಮಹಾರಾಷ್ಟ್ರ ಸರ್ಕರ ತೊಡಗಿದೆ. ಮಹಾರಾಷ್ಟ್ರ ಸರ್ಕಾರದ ಮಹಾತ್ಮ ಪುಲೆ ಜನಾರೋಗ್ಯ ಯೋಜನೆ ಕರ್ನಾಟಕ ಗಡಿಭಾಗದ 865 ಹಳ್ಳಿಗಳಿಗೆ ವಿಸ್ತರಿಸುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಯೋಜನೆ ಲಾಭ ಪಡೆಯಲು ಎಂಇಎಸ್ ಪತ್ರವೂ ಅವಶ್ಯಕ ಎಂದಿರುವ ಮಹಾರಾಷ್ಟ್ರ ಸರ್ಕಾರ ಎಂಇಎಸ್ ನಾಯಕರ ಖರ್ಚುವೆಚ್ಚದ ಹೊಣೆಯನ್ನು ಮಹಾರಾಷ್ಟ್ರ ಸರ್ಕಾರವೇ ವಹಿಸಿಕೊಳ್ಳಲು ಮುಂದಾಗಿದೆ.
ಇದನ್ನೂ ಓದಿ: ಈ ಬಾರಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಗೆ ಅವಕಾಶ ಇಲ್ಲ: ಡಿಸಿ ನಿತೇಶ್ ಪಾಟೀಲ್
ಗಡಿವಿವಾದ ಸಂಬಂಧ ಈಗಾಗಲೇ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದ 12 ವಕೀಲರ ತಂಡ ನೇಮಕ ಮಾಡಿದೆ. ಆರೋಗ್ಯ ಯೋಜನೆ ಸೇರಿ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿ, ವೈದ್ಯಕೀಯ ಕಾಲೇಜುಗಳಲ್ಲಿ ಗಡಿಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಮೀಸಲಾತಿ ಹೀಗೆ ಹತ್ತು ಹಲವು ಯೋಜನೆ ಮಹಾರಾಷ್ಟ್ರ ಸರ್ಕಾರ ರೂಪಿಸುತ್ತಿದೆ. ಚಂದಗಡ್ದಲ್ಲಿ ಗಡಿಭಾಗದ ಮರಾಠಿ ಭಾಷಿಕರಿಗಾಗಿ ಕಚೇರಿಯನ್ನು ಸಹ ಸ್ಥಾಪಿಸಲು ಮುಂದಾಗಿದೆ. ಗಡಿವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಇಷ್ಟೆಲ್ಲ ಕಾರ್ಯ ಮಾಡುತ್ತಿದ್ದರು ಸೈಲೆಂಟ್ ಆಗಿರೋದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ಸಂಬಂಧ ಗಡಿವಿವಾದ ತಜ್ಞರ ಸಮಿತಿ ರಚನೆ ಮಾಡಿ ಶಿವಸೇನೆ ಸಂಸದ ಧೈರ್ಯಶೀಲ ಮಾನೆರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗಡಿ ಉಸ್ತುವಾರಿ ಸಚಿವರನ್ನಾಗಿ ಚಂದ್ರಕಾಂತ ಪಾಟೀಲ್, ಶಂಭುರಾಜ್ ದೇಸಾಯಿರನ್ನು ನೇಮಕ ಮಾಡಿದೆ. ಜೊತೆಗೆ ಹಿರಿಯ, ನುರಿತ ವಕೀಲರನ್ನು ನೇಮಿಸಿದೆ. ಬೆಳಗಾವಿಯಿಂದ 40 ಕಿಮೀ ದೂರದಲ್ಲಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಚಂದಗಡದಲ್ಲಿ ಗಡಿಭಾಗದ ಮರಾಠಿ ಭಾಷಿಕರಿಗಾಗಿ ಕಚೇರಿಯನ್ನೂ ಮಾಡುತ್ತಿದ್ದಾರೆ. ಆದ್ರೆ ಕರ್ನಾಟಕ ಸರ್ಕಾರ ಮಾತ್ರ ಈವರೆಗೂ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕ ಮಾಡಿಲ್ಲ.
ಇದನ್ನೂ ಓದಿ: ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ; ಭಾಷಾ ವೈಷಮ್ಯದ ಕಿಡಿ ಹೊತ್ತಿಸಲು ಕುತಂತ್ರ
ಗಡಿ ಉಸ್ತುವಾರಿ ಸಚಿವರನ್ನಂತೂ ನೇಮಿಸಿಯೇ ಇಲ್ಲ, ಗಡಿ ಸಂರಕ್ಷಣಾ ಆಯೋಗ ಇದ್ದೂ ಇಲ್ಲದಂತಾಗಿದೆ, ಗಡಿ ಉನ್ನತಾಧಿಕಾರ ಸಮಿತಿಯೂ ಇಲ್ಲ. ಇದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಕರವೇ ನಾರಾಯಣಗೌಡ ಬಣದ ಚಿಕ್ಕೋಡಿ ತಾಲೂಕು ಅಧ್ಯಕ್ಷ ನಾಗೇಶ್ ಮಾಳಿ, ಬೆಳಗಾವಿಯಲ್ಲಿ ಸತ್ತ ಎಂಇಎಸ್ ಸಂಘಟನೆಗೆ ಮಹಾರಾಷ್ಟ್ರ ಸರ್ಕಾರ ಜೀವ ತುಂಬುತ್ತಿದೆ. ಅವರ ಖರ್ಚುವೆಚ್ಚ ನೋಡಿಕೊಳ್ಳುತ್ತೆ. ಜೊತೆಗೆ ಹಿರಿಯ ವಕೀಲರ ತಂಡ ನೇಮಿಸಿ ಗಡಿವಿವಾದ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ. ಆದರೆ ನಮ್ಮ ಸರ್ಕಾರದವರು ಈವರೆಗೂ ಗಡಿ ಉಸ್ತುವಾರಿ ಸಚಿವರ ನೇಮಿಸಿಲ್ಲ. ಬೆಳಗಾವಿಯಲ್ಲಿ ರಾಜ್ಯೋತ್ಸವ ಆಚರಣೆಗೆ ಒಂದು ಕೋಟಿ ರೂ. ಅನುದಾನ ನೀಡಿ ಅಂದರೆ ಒಂದು ಲಕ್ಷ ರೂ. ನೀಡುತ್ತಾರೆ. ಹೀಗಾಗಿ ಸರ್ಕಾರ ಗಡಿವಿವಾದವನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
ಗಡಿವಿವಾದ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ತಜ್ಞರ ಸಮಿತಿ, ಉನ್ನತ ಮಟ್ಟದ ಸಮಿತಿ, ಗಡಿ ಉಸ್ತುವಾರಿ ಸಚಿವರ ನೇಮಿಸಿ ಸಭೆ ಮೇಲೆ ಸಭೆ ಮಾಡುತ್ತಿದೆ. ಆದರೆ ಕರ್ನಾಟಕ ಮಾತ್ರ ಗಡಿವಿವಾದ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದು ಗಡಿಭಾಗದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಗಡಿಭಾಗದ ಕನ್ನಡಿಗರ ಹಕ್ಕೊತ್ತಾಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.