ಬೆಳಗಾವಿಯಲ್ಲಿ ಗೋ ರಕ್ಷಕರನ್ನು ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಶ್ರೀರಾಮ ಸೇನೆ

ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ಗೋ ರಕ್ಷಣೆ ಮಾಡುತ್ತಿದ್ದ ಐವರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಗಳು, ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ರೀರಾಮ ಸೇನೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿಯಲ್ಲಿ ಗೋ ರಕ್ಷಕರನ್ನು ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಶ್ರೀರಾಮ ಸೇನೆ
ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ
Updated By: Ganapathi Sharma

Updated on: Jun 30, 2025 | 9:45 AM

ಬೆಳಗಾವಿ, ಜೂನ್​ 29: ಶ್ರೀರಾಮ ಸೇನೆ (Sri Ram Sene) ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಇಂಗಳಿಯಲ್ಲಿ ನಡೆದಿದೆ. ಗೋವುಗಳ ರಕ್ಷಣೆ ಮಾಡಿದ್ದ ಐವರು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಶ್ರೀರಾಮ ಸೇನೆ ಸಂಘಟನೆ ಎಚ್ಚರಿಕೆ ನೀಡಿದೆ. ಯಮಕನಮರಡಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

ಇಂಗಳಿಯಲ್ಲಿ ನಡೆದಿದ್ದೇನು?

ಐವರು ಶ್ರೀರಾಮ ಸೇನೆ ಕಾರ್ಯಕರ್ತರು ಎರಡು ದಿನಗಳ ಹಿಂದೆ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿದ್ದರು. ಗೋವುಗಳ ರಕ್ಷಣೆ ಮಾಡಿದವರು ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾರೆ. ಇಂಗಳಿ ಗ್ರಾಮದ ಯುವಕರ ಗುಂಪೊಂದು, ಶ್ರೀರಾಮ ಸೇನೆ ಸಂಘಟನೆಯ ಐದು ಜನ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ.

ಗ್ರಾಮದ 20ಕ್ಕೂ ಅಧಿಕ ಯುವಕರ ಗುಂಪು ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ‌ಹಾಕಿ ಕಟ್ಟಿಗೆ ಮತ್ತು ಕೈಯಿಂದ ಹಲ್ಲೆ ಮಾಡಿದೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದನ್ನು ಅದೇ ಗ್ರಾಮದ ಯುವಕನೋರ್ವ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಸದ್ಯ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಮಂಗಳೂರು: ಪಹಲ್ಗಾಮ್​ ಉಗ್ರರ ದಾಳಿ ಸಮರ್ಥಿಸಿಕೊಂಡು ಫೇಸ್​ಬುಕ್​ನಲ್ಲಿ ಪೋಸ್
ಪೀರ್ ಪಂಜಾಲ್ ಪರ್ವತದಲ್ಲಿ ಅಡಗಿ ಕುಳಿತಿದ್ದಾರಂತೆ ಪಹಲ್ಗಾಮ್ ದಾಳಿಕೋರರು
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಎನ್​ಕೌಂಟರ್

ವೈರಲ್ ವಿಡಿಯೋ

ಎರಡು ದಿನಗಳ ಹಿಂದೆಯಷ್ಟೆ ಈ ಹಿಂದೂ ಕಾರ್ಯಕರ್ತರು ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿದ್ದರು. ನಂತರ ಆ ಗೋವುಗಳನ್ನು ಇಂಗಳಿ ಗ್ರಾಮದ ಗೋ ಶಾಲೆಗೆ ರವಾನಿಸಿದ್ದರು. ಶನಿವಾರ ಮತ್ತೆ ಗೋವುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿರುವ ವಿಚಾರ ಕಾರ್ಯಕರ್ತರಿಗೆ ಗೊತ್ತಾಗಿದೆ. ತಕ್ಷಣವೇ ಅದನ್ನು ತಡೆಯಲು ಗ್ರಾಮಕ್ಕೆ ಬಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದೇ ತಡ ಗೋವು ಸಾಗಾಟ ಮಾಡುವ ಗುಂಪು, ಹಿಂದೂ ಕಾರ್ಯಕರ್ತರ ಮೇಲೆ ನೈತಿಕ ಪೊಲೀಸಗಿರಿ ನಡೆಸುವ ಮೂಲಕ ಗೂಂಡಾಗಿರಿ ಪ್ರದರ್ಶನ ಮಾಡಿದೆ.

ಈ ಘಟನೆಯನ್ನು ಶ್ರೀರಾಮ ಸೇನೆ ಸಂಘಟನೆ ಬಲವಾಗಿ ಖಂಡಿಸಿದೆ. ಗೋವುಗಳ ರಕ್ಷಣೆ ಮಾಡಲು ಹೋದವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಮರಕ್ಕೆ ಕಟ್ಟಿ ನೀರು ಕುಡಿಸಿ ಹೊಡೆದಿದ್ದಾರೆ. ಅತ್ಯಾಚಾರ ಮಾಡಿದ್ದೀರಿ ಅಂತ ಹೇಳಿ ಹಲ್ಲೆ ಮಾಡಿದ್ದಾರೆ. ಮತ್ತೆ ಕೆಲವರು ಪೊಲೀಸ್ ಠಾಣೆಯಲ್ಲೇ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ತಕ್ಷಣವೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಬೆಳಗಾವಿಯಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದೆ.

ವಿಜಯೇಂದ್ರ ಖಂಡನೆ, ಹೋರಾಟದ ಎಚ್ಚರಿಕೆ

ಘಟನೆಯನ್ನು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಖಂಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹುಕ್ಕೇರಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಗೋ ಸಂರಕ್ಷಕರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆದಿರುವ ಘಟನೆ ಅತ್ಯಂತ ಖಂಡನೀಯ, ಹಾಗೂ ಕಳವಳಕಾರಿಯಾಗಿದೆ.
ನಾವು ಯಾವ ನೆಲದಲ್ಲಿ ವಾಸಿಸುತ್ತಿದ್ದೇವೆ ಎಂಬ ಆತಂಕ ಸಂಸ್ಕೃತಿ ಕುರಿತ ಕಾಳಜಿಯುಳ್ಳವರನ್ನು ಕಾಡುತ್ತಿದೆ ಎಂದು ಅವರು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಇಂಗಳಿಯಲ್ಲಿ ಗೋ ರಕ್ಷಕರ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್

ಗೋ ಸಂರಕ್ಷಣಾ ಕಾಯ್ದೆಯ ಅನ್ವಯ, ಅಕ್ರಮ ಗೋ ಸಾಗಾಣಿಕೆಯ ಜಾಲವನ್ನು ಸಾಕ್ಷಿ ಸಮೇತ ಹಿಡಿದು ಶ್ರೀರಾಮ ಸೇನೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದರೂ, ಪೊಲೀಸರು ದುರುಳರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ತೋರಿಸಿದ ನಿರ್ಲಕ್ಷದ ಪರಿಣಾಮ ಗೋವುಗಳಿಗೂ ರಕ್ಷಣೆ ದೊರೆಯುವ ಬದಲು ಗೋ ಸಂರಕ್ಷಸಿದವರ ಮೇಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಿಂದೂ ಸಮುದಾಯ ಹಾಗೂ ನಾಗರೀಕ ಸಮಾಜವನ್ನು ತಲ್ಲಣಗೊಳಿಸಿದೆ. ಈ ನೆಲದ ಕಾನೂನನ್ನು ಧಿಕ್ಕರಿಸಿ ತಾಲೀಬಾನಿಗಳಂತೆ ಅಮಾನುಷವಾಗಿ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಆಕ್ರಮಣ ನಡೆಸಿರುವ ವಿದ್ರೋಹಿ ಕಿರಾತಕರನ್ನು ಈ ಕೂಡಲೇ ಬಂಧಿಸಿ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸದೇ ಹೋದರೆ ಬಿಜೆಪಿ ರಾಜ್ಯಾದ್ಯಂತ ಚಳುವಳಿಯನ್ನು ತೀವ್ರವಾಗಿ ಕೈಗೆತ್ತಿಕೊಳ್ಳಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಎಸ್​ಪಿ ಸ್ಪಷ್ಟನೆ

ಘಟನೆ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದು, ಘಟನೆಯಾದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಯಾವುದೇ ಹಲ್ಲೆಯಾಗಿಲ್ಲ ಎಂದು ಗೋ ರಕ್ಷಕರು ಬರೆದು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:03 pm, Sun, 29 June 25