ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ: ಪರಸ್ಪರ ಕೈ ಕೈ ಮಿಲಾಯಿಸಿದ ಕೋಡಿಹಳ್ಳಿ ಚಂದ್ರಶೇಖರ್-ಚೂನಪ್ಪ ಪೂಜಾರಿ ಬಣದ ರೈತರು
ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ನಡೆದ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಚೂನಪ್ಪ ಪೂಜಾರಿ ಬಣದ ರೈತರು ಪರಸ್ಪರ ಹೊಡೆದಾಡಿಕೊಂಡಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧ ರಣಾಂಗಣವಾಗಿ ಮಾರ್ಪಟ್ಟಿದೆ. ಭಾಷಣದ ವೇಳೆ 4500 ರೂ. ಪಡೆದೇ ತೀರೋಣವೆಂದ ಚೂನಪ್ಪ ಪೂಜಾರಿ ಹೇಳಿದ್ದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ವಿರೋಧ ವ್ಯಕ್ತಪಡಿಸಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ.

ಬೆಳಗಾವಿ, ಅಕ್ಟೋಬರ್ 26: ಕಬ್ಬಿಗೆ ಬೆಲೆ ನಿಗದಿ ವಿಚಾರಕ್ಕೆ ಸಂಬಂಧಿಸಿ ರೈತ ಮುಖಂಡರ ಸಭೆಯಲ್ಲಿ ಹೊಡೆದಾಟ ನಡೆದಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧ ರಣಾಂಗಣವಾಗಿ ಮಾರ್ಪಟ್ಟಿದೆ. ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಚೂನಪ್ಪ ಪೂಜಾರಿ ಬಣಗಳು ಕೈ ಕೈ ಮಿಲಾಯಿಸಿದ್ದು, ಗಲಾಟೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಸಭಾಂಗಣದಲ್ಲಿ ಕುಡಿಯಲು ನೀರಿಲ್ಲ, ಚಹಾ ಇಲ್ಲವೆಂದು ಮೊದಲು ಗಲಾಟೆ ಶುರುವಾಗಿತ್ತು. ನಂತರ ಎಲ್ಲರನ್ನೂ ಚೂನಪ್ಪ ಪೂಜಾರಿ ಸಮಾಧಾನ ಮಾಡಿದ್ದರು. ಆದರೆ ಭಾಷಣ ವೇಳೆ ಚೂನಪ್ಪ ಪೂಜಾರಿ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಬಣ ವಿರೋಧಿಸಿದ ಕಾರಣ ಗಲಾಟೆ ತೀವ್ರ ಸ್ವರೂಪ ಪಡೆದಿದೆ.
ಗಲಾಟೆ ನಡೆದಿದ್ದೇಕೆ?
ಭಾಷಣ ವೇಳೆ 4500 ಪಡೆದೇ ತೀರೋಣವೆಂದು ಚೂನಪ್ಪ ಪೂಜಾರಿ ಹೇಳಿದ್ದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ವಿರೋಧ ವ್ಯಕ್ತಪಡಿಸಿದೆ. ಹೊರಗೆ ಪ್ರತಿ ಟನ್ ಕಬ್ಬಿಗೆ 5,500 ರೂ. ನಿಗದಿ ಮಾಡಬೇಕೆಂದು ಹೇಳುತ್ತೀರಿ. ಸುವರ್ಣಸೌಧದ ಒಳಗೆ ಪ್ರತಿ ಟನ್ ಕಬ್ಬಿಗೆ 4,500 ರೂ. ಅಂತಿದ್ದೀರಿ. ನೀವು ಸೋಟ್ಕೇಸ್ ಗಿರಾಕಿ ಎಂದು ಕೋಡಿಹಳ್ಳಿ ಬಣದ ರೈತರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಚೂನಪ್ಪ ಪೂಜಾರಿ ಬಣದ ರೈತರು ಸಿಡಿದಿದ್ದು, ಎರಡೂ ಬಣಗಳು ಪರಸ್ಪರ ಹೊಡೆದಾಡಿವೆ. ಗಲಾಟೆ ಆರಂಭಿಸಿದ್ದ ಇಬ್ಬರು ರೈತರನ್ನು ಪೊಲೀಸರು ಹೊರಗೆ ಕರೆದೊಯ್ದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಸಭೆಯಲ್ಲಿ ವಾತಾವರಣ ತಿಳಿಯಾಗಿದೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಶೀಲನೆಗೆ ರಮೇಶ್ ಚಂದ್ ನೇತೃತ್ವದಲ್ಲಿ ಸಮಿತಿ ರಚಿಸಿದ ಕೇಂದ್ರ ಸರ್ಕಾರ
‘ಉದ್ದೇಶಪೂರ್ವಕವಾಗಿ ಬಂದು ಗಲಾಟೆ’
ಇನ್ನು ರೈತರ ಗಲಾಟೆ ವಿಚಾರವಾಗಿ ಟಿವಿ9ಗೆ ರೈತ ಮುಖಂಡ ಚೂನಪ್ಪ ಪೂಜಾರಿ ಪ್ರತಿಕ್ರಿಯಿಸಿದ್ದು, ಉದ್ದೇಶಪೂರ್ವಕವಾಗಿ ಬಂದು ಗಲಾಟೆ ಮಾಡಿದ್ದಾರೆ. ನಾನು ಮಾತಾಡುವಾಗಲೇ ಆತ ನೀ ಯಾಂವ ಅಂತಾನೆ. ಅವರು ಕಲಬುರಗಿ ಮೂಲದವರು ಅಂತಾ ಗೊತ್ತಾಗಿದೆ. ನಾವು 3 ಗಟ್ಟಿ ಬೇಡಿಕೆ ಇಟ್ಟು ಹೋರಾಟ ಮಾಡ್ತಿದ್ದೇವೆ. ರೈತರಾಗಿ ಈ ರೀತಿ ಮಾಡೋದು ಬೇಜಾರಾಗುತ್ತೆ. ಒಗ್ಗಟ್ಟಾಗಿ ಹೋರಾಟ ಮಾಡಿ ಹಣ ತೆಗೆದುಕೊಳ್ಳಬೇಕಿದೆ. ಕೊಡಿಹಳ್ಳಿ ಚಂದ್ರಶೇಖರ್ ಬಣದವರೆಂದು ಹೇಳುತ್ತಿದ್ರು. ಎಲ್ಲರೂ ಸೇರಿಕೊಂಡು ಹೋರಾಟ ಮಾಡೋಣ ಬನ್ನಿ ಎಂದವರು ಕರೆ ನೀಡಿದ್ದಾರೆ.
‘ಚೂನಪ್ಪ ಪೂಜಾರಿಗೆ ಏನಾದರೂ ಧಕ್ಕೆಯಾದರೆ ಹುಷಾರ್’
ಸುವರ್ಣಸೌಧದಲ್ಲಿ ರೈತರ 2 ಬಣಗಳ ಮಧ್ಯೆ ಗಲಾಟೆ ಸಂಬಂಧ ಗುರ್ಲಾಪುರ ಗ್ರಾಮದಲ್ಲಿ ಮಾತನಾಡಿರುವ ರೈತ ಮುಖಂಡ ಶಶಿಕಾಂಶ್ ಗುರೂಜಿ, ಚೂನಪ್ಪ ಪೂಜಾರಿಗೆ ಏನಾದರೂ ಧಕ್ಕೆಯಾದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಯಾವೊಬ್ಬ ಶಾಸಕರು ಮನೆಯಿಂದ ಹೊರಗೆ ಬರದಂತೆ ಹೋರಾಟ ಮಾಡುತ್ತೇವೆ. ರೈತರ ಗಲಾಟೆಯನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕು. ನಮ್ಮನ್ನು ಟೀಕೆ ಮಾಡಿದರೂ ಕೂಡ ನಾವು ಸುಮ್ಮನಿದ್ದೇವೆ ಎಂದವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:16 pm, Mon, 26 October 26




