ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿ ಮೇಲೆ ರಾಕ್ಷಸೀ ಕೃತ್ಯ: ತಾಯಿ-ಮಗಳನ್ನು ಅಟ್ಟಾಡಿಸಿ ಹೊಡೆದು ಕ್ರೌರ್ಯ

ಅವರಿಬ್ಬರು ಐದು ವರ್ಷ ಹಿಂದೆ ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ಕೂಡ ಶುರುವಾಗಿತ್ತು. ಗಂಡನ ಸಹವಾಸ ಬೇಡಾ ಎಂದು ತವರು ಸೇರಿದಾಕೆ ವಾಪಾಸ್ ಬಂದಾಗ ನಡೆದಿದ್ದು ಕ್ರೌರ್ಯ, ಅಮಾನವೀಯ ವರ್ತನೆ. ಚಿಕ್ಕೋಡಿ ತಾಲೂಕಿನ ಬೆಂಬಲವಾಡದಲ್ಲಿ ನಡೆದ ಘಟನೆಯ ವಿವರ ಇಲ್ಲಿದೆ.

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿ ಮೇಲೆ ರಾಕ್ಷಸೀ ಕೃತ್ಯ: ತಾಯಿ-ಮಗಳನ್ನು ಅಟ್ಟಾಡಿಸಿ ಹೊಡೆದು ಕ್ರೌರ್ಯ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 24, 2025 | 7:32 AM

ಬೆಳಗಾವಿ, ಅಕ್ಟೋಬರ್ 24: ಪತ್ನಿ ಎಂಬುದನ್ನೂ ಮರೆತು, ಮೇಲಾಗಿ ಮಹಿಳೆ ಎಂಬ ಕನಿಷ್ಠ ಸೌಜನ್ಯವೂ ಇಲ್ಲದೆ ಸಾರ್ವಜನಿಕವಾಗಿ ಒದ್ದು ಹಲ್ಲೆ ಮಾಡುತ್ತಿರುವ ದುಷ್ಟರು, ಮಗಳ ರಕ್ಷಣೆಗೆ ಬಂದ ತಾಯಿ ಮೇಲೆಯೂ ಕ್ರೌರ್ಯ, ಮಹಿಳೆಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಮೂಕ ಪ್ರೇಕ್ಷರಂತೆ ನಿಂತ ಗ್ರಾಮಸ್ಥರು. ಇಂಥದ್ದೊಂದು ವಿದ್ಯಮಾನಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಂಬಲವಾಡ ಗ್ರಾಮ ಸಾಕ್ಷಿಯಾಗಿದೆ. ಹಲ್ಲೆಗೊಳಗಾದ ಮಹಿಳೆ ರಾಜಶ್ರೀ ಹೊಸಮನಿ ಐದು ವರ್ಷದ ಹಿಂದೆ ರಾಕೇಶ್ ಹೊಸಮನಿ ಎಂಬಾತನನ್ನು ಮದುವೆಯಾಗಿದ್ದಾರೆ. ಒಂದು ಹೆಣ್ಣು ಮಗು ಕೂಡ ಇದೆ.

ರಾಕೇಶ್ ಮದುವೆಗೂ ಮುನ್ನ ಬೇರೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದು ಮದುವೆಯಾದ ಕೆಲವೇ ದಿನಗಳಲ್ಲಿ ಬಯಲಾಗಿದೆ. ಮದುವೆಯಾದ ಬಳಿಕವೂ ಆಕೆ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದು ಪತ್ನಿಗೆ ಗೊತ್ತಾಗಿದೆ. ಆಗ ಗಂಡನ ಜೊತೆಗೆ ಜಗಳವಾಡಿದ್ದಾಕೆ, ಹೀಗೆ ಮುಂದುವರಿದರೆ ಸಂಸಾರ ಮಾಡಲು ಆಗಲ್ಲ ಎಂದಿದ್ದಾರೆ. ಇದಾದ ಬಳಿಕ ಹಿರಿಯರು ಆಕೆಯನ್ನು ಮನವೊಲಿಸಿ ಮತ್ತೆ ಗಂಡನೊಟ್ಟಿಗೆ ಸಂಸಾರ ನಡೆಸುವಂತೆ ಮಾಡಿರುತ್ತಾರೆ. ಆ ಬಳಿಕವೂ ಗಂಡ ಬದಲಾಗಲಿಲ್ಲ ಎಂದು ಆರೋಪಿಸಿದ್ದ ಆಕೆ, ವರದಕ್ಷಿಣೆ ಕಿರುಕುಳದ ಬಗ್ಗೆಯೂ ಆರೋಪಿಸಿ ತವರು ಮನೆ ಸೇರಿದ್ದರು.

ದೀಪಾವಳಿಗೆ ಬಾ ಎಂದು ಕರೆಸಿಕೊಂಡು ಹಲ್ಲೆ

ದೀಪಾವಳಿ ಹಿಂದಿನ ಅತ್ತೆ, ಮಾವ ಕರೆ ಮಾಡಿ, ‘ಮನೆಗೆ ಬಾ, ದೀಪಾವಳಿ ಹಬ್ಬ ಆಚರಿಸೋಣ’ ಎಂದಿದ್ದಾರೆ. ಹೀಗೆ ಬಂದಾಕೆ, ತನ್ನ ಗಂಡ ಸರಿಯಿಲ್ಲ ಎಂದಿದ್ದಾರೆ. ಇದೇ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ವಾಗ್ವಾದ ನಡೆದಿದೆ. ಆಗ ಗಂಡ ಮತ್ತು ಸಹೋದರ ಸೇರಿಕೊಂಡು ರಾಜಶ್ರೀ ಮೇಲೆ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ.

ಗ್ರಾಮದಲ್ಲೇ ರಸ್ತೆಯಲ್ಲಿ ಮಹಿಳೆಯರಿಬ್ಬರ ಮೇಲೆ ಮನೆ ಮಂದಿ ಎಲ್ಲಾ ಸೇರಿಕೊಂಡು ಹಲ್ಲೆ ಮಾಡುತ್ತಿದ್ದರೂ ಯಾರೊಬ್ಬರೂ ಮಹಿಳೆಯರ ಸಹಾಯಕ್ಕೆ ಬಂದಿಲ್ಲ. ಕಾಲಿನಿಂದ ಒದ್ದು, ಮುಖ ಸೇರಿದಂತೆ ಎಲ್ಲೆಂದರಲ್ಲಿ ಹೊಡೆದಿದ್ದಾರೆ. ರಾಜಶ್ರೀಯನ್ನು ಬಿಡಿಸಲು ಬಂದ ಅವರ ತಾಯಿ ಮೇಲೆ ಕೂಡ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕೂಡಲೇ ಆ್ಯಂಬುಲೆನ್ಸ್ ಮುಖಾಂತರ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯಿಂದ ಬೆಚ್ಚಿ ಬಿದ್ದಿರುವ ರಾಜಶ್ರೀ ಹಾಗೂ ಕುಟುಂಬಸ್ಥರು, ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತ ಗಂಡ ರಾಕೇಶ್, ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಮೇಲಾಗಿ ಕಲ್ಲು ತೂರಾಟ ಕೂಡ ನಡೆಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಆಗಬೇಕಂದ್ರೆ ಮತಾಂತರವಾಗು: ಬೆಂಗಳೂರಲ್ಲಿ ಆಂಧ್ರ ಮೂಲದ ಯುವತಿಗೆ ಲವ್​ ಸೆಕ್ಸ್​ ದೋಖಾ?

‘ಟಿವಿ9’ನಲ್ಲಿ ಘಟನೆ ಕುರಿತು ವರದಿ ಪ್ರಸಾರವಾದ ಬೆನ್ನಲ್ಲೇ ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಕೊಲೆ ಯತ್ನ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಬರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಹಲ್ಲೆ ಮಾಡಿದವರು ಪರಾರಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ