ಕರ್ನಾಟಕದಲ್ಲಿ ಮುಂದುವರಿದ ಮಳೆ ಅಬ್ಬರ: ಜು.25, 26ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

| Updated By: ರಮೇಶ್ ಬಿ. ಜವಳಗೇರಾ

Updated on: Jul 24, 2024 | 11:01 PM

ಕರ್ನಾಟಕದ ಹಲವೆಡೆ ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲಾಗಿದೆ. ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಹಾಸನ ಜಿಲ್ಲೆ ಕೆಲ ತಾಲೂಕಿನಲ್ಲಿ ನಾಳೆ(ಜುಲೈ 25) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ 25 ಮತ್ತು 26 ಎರಡು ದಿನ ರಜೆ ನೀಡಲಾಗಿದೆ.

ಕರ್ನಾಟಕದಲ್ಲಿ ಮುಂದುವರಿದ ಮಳೆ ಅಬ್ಬರ: ಜು.25, 26ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಬೆಳಗಾವಿ ಜಿಲ್ಲೆಯ ಈ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ
Follow us on

ಬೆಳಗಾವಿ, ಜು.24: ಬೆಳಗಾವಿ(Belagavi) ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನಾಳೆ ಮತ್ತು ನಾಡಿದ್ದು  ಎರಡು ದಿನ ಜಿಲ್ಲೆಯ ಕೆಲ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೌದು, ಮುಂಜಾಗ್ರತಾ ಕ್ರಮವಾಗಿ ಜುಲೈ 25 ಮತ್ತು 26 ರಂದು ಬೆಳಗಾವಿ, ಖಾನಾಪುರ, ನಿಪ್ಪಾಣಿ, ಚಿಕ್ಕೋಡಿ, ಬೈಲಹೊಂಗಲ, ಕಿತ್ತೂರು ತಾಲೂಕುಗಳಲ್ಲಿನ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 7 ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ (ಜುಲೈ 25) ರಜೆ ಘೋಷಣೆ ಮಾಡಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ದಾಂಡೇಲಿ, ಹೊನ್ನಾವರ, ಜೋಯಿಡಾ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಸಪ್ತ ನದಿಗಳಿಂದ ಬೆಳಗಾವಿಯಲ್ಲಿ ಅವಾಂತರ: 22 ಸೇತುವೆ ಮುಳುಗಡೆ, 160 ಮನೆಗಳು ಕುಸಿತ ದೇವಸ್ಥಾನಗಳಿಗೆ ನುಗ್ಗಿದ ನೀರು

ಧಾರವಾಡ ಜಿಲ್ಲೆಯಲ್ಲಿ 25, 26ರಂದು ರಜೆ

ಧಾರವಾಡ ಜಿಲ್ಲೆಯಲ್ಲೂ ಸಹ ಮಳೆ ಆರ್ಭಟ ಜೋರಾಗಿರುವುದರಿಂದ ನಾಳೆ ನಾಡಿದ್ದು ಅಂದರೆ ಜುಲೈ 25 ಮತ್ತು 26ರಂದು ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಧಾರವಾಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ

ದಕ್ಷಿಣ‌ ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ‌ ಹಿನ್ನೆಲೆ ಪೊನ್ನಂಪೇಟೆ ತಾಲೂಕಿನ ಕುಟ್ಟ, ಟಿ.ಶೆಟ್ಟಿಗೇರಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ವಿರಾಜಪೇಟೆ ಕ್ಷೇತ್ರದ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ. ಇನ್ನು ಹಾಸನ ಜಿಲ್ಲೆಯಲ್ಲಿ ಮುಂದುವರಿದ ಮಳೆ ಅಬ್ಬರ ಮುಂದುವರೆದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ನಾಳೆ ಕೇವಲ ಸಕಲೇಶಪುರ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.

ಬೆಳಗಾವಿಯಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಮಾಂಗವಸ್ತಿ ಗ್ರಾಮಗಳು ಕೃಷ್ಣಾ ನದಿ ಸುತ್ತುವರೆದು ನಡುಗಡ್ಡೆಯಾಗಿದ್ದು, ಜನರು ಪರದಾಟ ನಡೆಸಿದ್ದಾರೆ. ನದಿಯ ಮತ್ತೊಂದು ದಡದಲ್ಲಿ ನಿಂತು ಗ್ರಾಮಸ್ಥರಿಗೆ ಸ್ಥಳಾಂತರವಾಗುವಂತೆ ತಹಶೀಲ್ದಾರ್​, ಪೊಲೀಸರ ಮನವಿ ಮಾಡಿದ್ದಾರೆ. ಆದರೆ, ಬೇರೆ ಕಡೆ ಜಾಗ ತೋರಿಸಿ ಹಕ್ಕು ಪತ್ರ ನೀಡಬೇಕು. ಅಲ್ಲಿವರೆಗೂ ಸ್ಥಳಾಂತರ ಆಗಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿದ ಹಲವು ಕುಟುಂಬಗಳು

ಇನ್ನು ಜೀವ ಬಿಟ್ಟೇವು ಸ್ಥಳಾಂತರ ಆಗುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಆರಂಭದಲ್ಲಿ ಸುಮಾರು ಐವತ್ತು ಮನೆಗಳು ಮುಳುಗುವ ಸಾಧ್ಯತೆಯಿದ್ದು, ನಡುಗಡ್ಡೆಯಲ್ಲಿ ಹಲವು ಕುಟುಂಬಗಳು ಸಿಲುಕಿದೆ. ಇತ್ತ ಗ್ರಾಮಸ್ಥರು ಮನವಿಗೆ ಸ್ಪಂಧಿಸದ ಹಿನ್ನಲೆ ಅಥಣಿ ತಹಶೀಲ್ದಾರ್ ವಾಣಿ ವಾಪಾಸ್ ಬಂದಿದ್ದಾರೆ. ಪ್ರವಾಹ ಬಂದಾಗ ಬರುತ್ತಾರೆ, ಆಶ್ವಾಸನೆ ನೀಡಿ ಹೋಗುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕಾರದಗಾ ಗ್ರಾಮದಲ್ಲೂ ಪ್ರವಾಹದ ಪರಿಸ್ಥಿತಿ

ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲೂ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ದೂದಗಂಗಾ ನದಿ ನೀರು ಗ್ರಾಮಕ್ಕೆ ನುಗ್ಗಿದೆ. ಇದರಿಂದ ಗ್ರಾಮದ ಹತ್ತಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಪಶು ಆಸ್ಪತ್ರೆ, ಯಲ್ಲಮ್ಮ ದೇವಸ್ಥಾನ, ಗಣಪತಿ ದೇವಸ್ಥಾನ, ದತ್ತ ಮಂದಿರ, ಗಾಡಗೆ ಮಹಾರಾಜ ಸನ್ನಿಧಿ ಮುಳುಗಡೆಯಾಗಿದೆ. ಜೊತೆಗೆ ಜಂಗಲಿ ಮಹರಾಜ ಶಾಲೆ ಹಿಂಬದಿಯೇ ನದಿ ನೀರು ಬಂದಿದ್ದು, ಆತಂಕದಲ್ಲಿಯೇ ಸಿಬ್ಬಂದಿ ಶಾಲೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Wed, 24 July 24