ಭಾರೀ ಮಳೆ; ಬೆಳಗಾವಿ ಜಿಲ್ಲೆಯ 4 ತಾಲೂಕಿನ ಶಾಲೆಗಳಿಗೆ ನಾಳೆ ರಜೆ
ಕರ್ನಾಟಕದ ಹಲವೆಡೆ ಮಳೆಯ ಆರ್ಭಟ ಜೋರಾಗಿದ್ದು, ಅವಾಂತರಗಳು ಸೃಷ್ಟಿಯಾಗಿದೆ. ಅದರಂತೆ ಬೆಳಗಾವಿಯಲ್ಲೂ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನಲೆ ಬೆಳಗಾವಿ(Belagavi) ಜಿಲ್ಲೆಯ 4 ತಾಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ(ಜು.24) ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಬೆಳಗಾವಿ, ಜು.23: ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು, ಬೆಳಗಾವಿ ಹೊರ ವಲಯದಲ್ಲಿ ಹರಿಯುವ ಬಳ್ಳಾರಿ ನಾಲಾ ನೀರು ಏರಿಕೆ ಆಗುತ್ತಿದೆ. ಈ ಹಿನ್ನಲೆ ಬೆಳಗಾವಿ(Belagavi) ಜಿಲ್ಲೆಯ 4 ತಾಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ(ಜು.24) ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ. ಹೌದು, ಮುಂಜಾಗೃತ ಕ್ರಮವಾಗಿ ನಾಳೆ ಬೆಳಗಾವಿ, ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪ್ರವಾಹ ಭೀತಿ; ದೂದಗಂಗಾ ನದಿ ಪಾತ್ರದ ಗ್ರಾಮಗಳಿಗೆ ಎಸ್‌ಪಿ ಭೇಟಿ
ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ದೂದಗಂಗಾ ನದಿ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ನಿಪ್ಪಾಣಿ ತಾಲೂಕಿನಾದ್ಯಂತ ಪ್ರವಾಹದ ಮುನ್ಸೂಚನೆ ನೀಡಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂದಗಂಗಾ ನದಿ ನೀರು ಇಂದು ರಾತ್ರಿ ಕೆಲ ಗ್ರಾಮಗಳಿಗೆ ನುಗ್ಗುವ ಸಾಧ್ಯತೆಯಿದೆ. ಈ ಹಿನ್ನಲೆ ದೂದಗಂಗಾ ನದಿ ಪಾತ್ರದ ಗ್ರಾಮಗಳಿಗೆ ಎಸ್‌ಪಿ ಡಾ. ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಪೊಲೀಸ್ ಸಿಬ್ಬಂದಿ ನಿಯೋಜನೆ
ಇನ್ನು ಯಾವುದೇ ಕ್ಷಣದಲ್ಲಾದರೂ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆಯಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ರಾತ್ರಿ ಅಲರ್ಟ್ ಇರುವಂತೆ ಎಸ್‌ಪಿ ಸೂಚನೆ ನೀಡಿದ್ದಾರೆ. ಜೊತೆಗೆ ಚಿಕ್ಕೋಡಿ ತಾಲೂಕಿನ ಸದಲಗಾಕ್ಕೆ ಒಂದು ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ಎನ್‌ಡಿಆರ್‌ಎಫ್ ತಂಡದೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆ ಎನ್‌ಡಿಆರ್‌ಎಫ್ ತಂಡವನ್ನು ಕೂಡ ಎಸ್‌ಪಿ ಡಾ. ಭೀಮಾಶಂಕರ್ ಗುಳೇದ್ ಭೇಟಿ ಮಾಡಿದ್ದಾರೆ.
ನದಿಯಂತೆ ಮಾರ್ಪಟ್ಟ ಕಬ್ಬು ಮತ್ತು ಭತ್ತದ ಗದ್ದೆಗಳು
ಇಂದು ಮತ್ತೆ ಸುಮಾರು ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿದ್ದು, ಕಬ್ಬು ಮತ್ತು ಭತ್ತದ ಗದ್ದೆಗಳು ನದಿಯಂತೆ ಮಾರ್ಪಟ್ಟಿವೆ. ಇದರಿಂದ ಮತ್ತೆ ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಬಳ್ಳಾರಿ ನಾಲಾ ಹುಳು ತೆಗೆದು ನೀರು ಹರಿದು ಹೋಗುವಂತೆ ಮನವಿ ಮಾಡಿದ್ರೂ ಸ್ಪಂಧಿಸದ ಜಿಲ್ಲಾಡಳಿತದ ವಿರುದ್ಧ ಅನ್ನದಾತರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾವಿರಾರು ಹೆಕ್ಟೇರ್ ಪ್ರದೇಶವನ್ನ ನಾಲಾ ಜಲಾವೃತ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ