ಸಪ್ತ ನದಿಗಳಿಂದ ಬೆಳಗಾವಿಯಲ್ಲಿ ಅವಾಂತರ: 22 ಸೇತುವೆ ಮುಳುಗಡೆ, 160 ಮನೆಗಳು ಕುಸಿತ ದೇವಸ್ಥಾನಗಳಿಗೆ ನುಗ್ಗಿದ ನೀರು
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ್ ಮತ್ತು ಹುಕ್ಕೇರಿ ತಾಲೂಕಿನ ಹಲವು ಸೇತುವೆಗಳು ಮುಳುಗಡೆಯಾಗಿವೆ. ಈವರೆಗೆ ಜಿಲ್ಲೆಯಲ್ಲಿ 160 ಮನೆಗಳು ಭಾಗಶಃ ಕುಸಿತಗೊಂಡಿವೆ.
ಬೆಳಗಾವಿ, ಜುಲೈ 24: ಕರ್ನಾಟಕದಲ್ಲಿ ಅಲ್ಪ ಮಟ್ಟಿಗೆ ಮಳೆ ತಗ್ಗಿದೆ. ಆದರೆ ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಬೆಳಗಾವಿ (Belagavi) ಜಿಲ್ಲೆಯ ಸಪ್ತ ನದಿಗಳಾದ (Seven River) ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಕೃಷ್ಣಾ, ಪಂಚಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿವೆ. ಸಪ್ತ ನದಿಗಳು ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಅನೇಕ ಅವಾಂತರ ಸೃಷ್ಟಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 22 ಸೇತುವೆಗಳು (Bridges) ಮುಳುಗಡೆಯಾಗಿವೆ. ಇದರಿಂದ ಬರೋಬ್ಬರಿ 44 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ್ ಮತ್ತು ಹುಕ್ಕೇರಿ ತಾಲೂಕಿನ ಹಲವು ಸೇತುವೆಗಳು ಮುಳುಗಡೆಯಾಗಿವೆ. ಈವರೆಗೆ ಜಿಲ್ಲೆಯಲ್ಲಿ 160 ಮನೆಗಳು ಭಾಗಶಃ ಕುಸಿತಗೊಂಡಿವೆ. ನಿಪ್ಪಾಣಿಯಲ್ಲಿ ಮನೆ ಕುಸಿದು ಓರ್ವ ಮೃತಪಟ್ಟಿದ್ದಾನೆ. ಹುಕ್ಕೇರಿ ಪಟ್ಟಣದಲ್ಲಿ ಮನೆ ಕುಸಿದು ಓರ್ವ ಮಹಿಳೆಗೆ ಗಾಯವಾಗಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಜಲಾವೃತಗೊಂಡಿದೆ.
ಘಟಪ್ರಭಾ ಜಲಾಶಯದಿಂದ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿರುವುದರಿಂದ ಬೆಳಗಾವಿ ತಾಲೂಕಿನ ಬಸವನ ಕುಡಚಿ ಗ್ರಾಮದ 10ಕ್ಕೂ ಹೆಚ್ಚು ಮನೆಗಳಿಗೆ, ಮತ್ತು ಕೆಎಲ್ಇ ವೆಲ್ನೆಸ್ ಸೆಂಟರ್ಗೆ ನೀರು ನುಗ್ಗಿದೆ.
ಇದನ್ನೂ ಓದಿ: ಮಳೆಯಲ್ಲೇ 5 ಕಿ.ಮೀ ಹೊತ್ತು ಸಾಗಿ ಮಹಿಳಾ ರೋಗಿ ಪ್ರಾಣ ಉಳಿಸಿದ ಕಾಡಂಚಿನ ಗ್ರಾಮಸ್ಥರು
ಕೃಷ್ಣಾನದಿಗೆ ಅಪಾರ ಪ್ರಮಣಾದಲ್ಲಿ ನೀರು ಹರಿದು ಬರುತ್ತಿರುವುದರಿಂದ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಹಲವು ಗ್ರಾಮಗಳಿಗೆ ಕೃಷ್ಣಾ, ದೂದಗಂಗಾ ನದಿ ನೀರು ನುಗ್ಗುವ ಸಾಧ್ಯತೆ ಇದೆ. ಮಳೆಗೆ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದ ಲಕ್ಷ್ಮೀನಾರಾಯಣ ದೇಗುಲ ಜಲಾವೃತಗೊಂಡಿದೆ.
ಕೃಷ್ಣಾ ನದಿಗೆ ಸದ್ಯ 1.70 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂದಗಂಗಾ ನದಿಗೆ 32,730 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಕೃಷ್ಣಾ ನದಿ ದಡದಲ್ಲಿರುವ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ದೇವಸ್ಥಾನಕ್ಕೆ ಜನರ ಪ್ರವೇಶಕ್ಕೆ ನಿಷೇಧಿಸಲಾಗಿದೆ.
ವಂಟಮೂರಿ ಬಳಿ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಮುಳುಗಡೆಯಾಗಿದೆ. ಇಪ್ಪತ್ತಕ್ಕೂ ಅಧಿಕ ವಿದ್ಯುತ್ ಕಂಬಗಳು ಜಲಾವೃತಗೊಂಡಿವೆ. ನದಿಗೆ ಅಡ್ಡಲಾಗಿ ಕಟ್ಟಿದ ನೀರು ಶುದ್ಧೀಕರಣ ಘಟಕ ಕೂಡ ಮುಳುಗಡೆಯಾಗಿದೆ.
ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ
ಹಿಡಕಲ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಇಂದು 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ಒಟ್ಟು 51 ಟಿಎಂಸಿ ಸಾಮರ್ಥ್ಯದ ಜಲಾಶಯ ಸದ್ಯ 43 ಟಿಎಂಸಿಯಷ್ಟು ನೀರು ಭರ್ತಿಯಾಗಿದೆ. ಹೀಗಾಗಿ ಇಂದು (ಜು.22) ಸಾಯಂಕಾಲ 4 ಗಂಟೆಗೆ ನದಿಗೆ ನೀರು ಬಿಡಲಾಗಿದೆ. ಹೀಗಾಗಿ ನದಿ ತೀರದ ಜನ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ