ಬೆಳಗಾವಿ, ಅಕ್ಟೋಬರ್ 12: ಬೆಳಗಾವಿಯಲ್ಲಿ (Belagavi) ಕಳೆದ 26 ವರ್ಷಗಳಿಂದ ದುರ್ಗಾಮಾತಾ ದೌಡ್ (Durga Mata daud) ಆಚರಿಸಿಕೊಂಡು ಬರಲಾಗುತ್ತಿದೆ. ದರ್ಗಾಮಾತಾ ದೌಡ್ನಲ್ಲಿ ಭಾಗವಹಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಬೆಳಗಾವಿ ನಗರದಲ್ಲಿ ಒಂಬತ್ತು ದಿನಗಳ ಕಾಲ ನಗರದ ವಿವಿಧ ಬಡಾವಣೆಗಳಲ್ಲಿ ದುರ್ಗಾಮಾತಾ ದೌಡ್ ಆಯೋಜನೆ ಮಾಡಲಾಗುತ್ತದೆ. ಕಳೆದ 26 ವರ್ಷಗಳಿಂದ ನಡೆಯುತ್ತಿರುವ ದೌಡ್ನಲ್ಲಿ ಭಾಗವಹಿಸುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಭಾಷೆ, ಜಾತಿಯನ್ನು ಹೊರತುಪಡಿಸಿ ಇಲ್ಲಿ ಸಾವಿರಾರು ಜನ ದುರ್ಗಾಮಾತಾ ದೌಡ್ನಲ್ಲಿ ಭಾಗವಹಿಸುತ್ತಾರೆ. ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ನಡೆಯುವ ಈ ದೌಡ್ ನೋಡಲು ಜನ ಸಾಗರವೇ ಸೇರಿರುತ್ತದೆ.
ದುರ್ಗಾಮಾತಾ ದೌಡ್ನಲ್ಲಿ ಭಾಗವಹಿಸುವವರು ಶ್ವೇತ ವಸ್ತ್ರಧಾರಿಗಳಾಗಿ, ತಲೆಗೆ ಕೇಸರಿ ಪಟಗ, ಸೊಂಟಕ್ಕೆ ಕೇಸರಿ ಶಾಲು ಕಟ್ಟುಕೊಂಡು, ಬರಿಗಾಲಿನಲ್ಲಿ ಬರಬೇಕು. ಅಗ್ರ ಸಾಲಿನಲ್ಲಿ ಇರುವ ಓರ್ವ ತ್ರಿಶೂಲವನ್ನು ಹಿಡಿದು ಮುಂದೆ ಸಾಗುತ್ತಾನೆ. ಅವನ ಹಿಂದೆ ಸಾಲಿನಲ್ಲಿ ಕೈಯಲ್ಲಿ ಖಡ್ಗ ಮತ್ತು ಭಗವಾ ಧ್ವಜ ಹಿಡಿದುಕೊಂಡು ಓಡುತ್ತಾರೆ. ದುರ್ಗಾಮಾತಾ ದೌಡ್ ಸಂಚರಿಸುವ ರಸ್ತೆಗಳನ್ನು ರಂಗೋಲಿ ಮತ್ತು ಹೂವಿನಿಂದ ಅಲಂಕಾರ ಮಾಡಲಾಗಿರುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ಒಂಬತ್ತು ದಿನಗಳ ಕಾಲ ಈ ಸಂಭ್ರಮ ಮನೆ ಮಾಡಿರುತ್ತದೆ.
ಇದನ್ನೂ ಓದಿ: ಮೈಸೂರು ಜಂಬೂ ಸವಾರಿಗೆ ಕೊಪ್ಪಳದಲ್ಲಿ ಶತಮಾನದ ಹಿಂದೆ ನಡೆದ ಅಂಬಾರಿ ಮೆರವಣಿಗೆ ಪ್ರೇರಣೆ
ಒಂದೊಂದು ದಿನ ಇಂತಿಷ್ಟು ಪ್ರದೇಶ ಎಂದು ನಿಗದಿಪಡಿಸಿರುವ ಆಯಾ ಮಾರ್ಗಗಳಲ್ಲಿ ಎಲ್ಲರೂ ಭಕ್ತಿಯಿಂದ ಓಡುತ್ತಾರೆ. ಈ ವೇಳೆ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಜೈ ಭವಾನಿ-ಜೈ ಶಿವಾಜಿ, ಜೈ ಚನ್ನಮ್ಮ-ಜೈ ರಾಯಣ್ಣ ಘೋಷಣೆ ಕೂಗುತ್ತಾ ಉತ್ಸಾಹದಿಂದ ಸಹಸ್ರಾರು ಜನರು ಓಡುವುದನ್ನು ನೋಡುವುದೇ ವಿಶೇಷ.
ಮಹಾರಾಷ್ಟ್ರದ ಸಾಂಗಲಿಯಲ್ಲಿ ಶಿವ ಪ್ರತಿಷ್ಠಾನ ಹಿಂದುಸ್ತಾನದ ಸಂಸ್ಥಾಪಕ ಸಂಭಾಜೀರಾವ ಭೀಡೆ ಧರ್ಮ ಜಾಗೃತಿ ಮೂಡಿಸುವ ಉದ್ದೇಶದಿಂದ 1985ರಂದು ದುರ್ಗಾಮಾತಾ ದೌಡ್ ಆರಂಭಿಸಿದರು. ಇದಾದ 13 ವರ್ಷಗಳ ಬಳಿಕ ಬೆಳಗಾವಿಯಲ್ಲೂ ದೌಡ್ ಶುರುವಾಯಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ 26 ವರ್ಷಗಳಿಂದ ಆಯೋಜಿಸುತ್ತಾ ಬರಲಾಗಿದೆ. ಆರಂಭದಲ್ಲಿ ಕೆಲವೇ ಕೆಲವು ಜನ ಶುರು ಮಾಡಿದ ದುರ್ಗಾಮಾತಾ ದೌಡ್ ಈಗ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಒಟ್ಟಾರೆಯಾಗಿ ಬೆಳಗಾವಿಯಲ್ಲಿ ದುರ್ಗಮಾತಾ ದೌಡ್ ಹೆಸರಿನಲ್ಲಿ ದೊಡ್ಡ ಸಮೂಹ ಒಂದೇಡೆ ಸೇರಿ ಹಬ್ಬವನ್ನು ಆಚರಣೆ ಮಾಡುತ್ತಿದೆ. ದುರ್ಗಾಮಾತಾ ದೌಡ್ನಲ್ಲಿ ಪಾಲ್ಗೊಳ್ಳಲು ಶ್ವೇತ ವರ್ಣ ಕಡ್ಡಾಯವಾಗಿತ್ತದೆ. ಬೆಳಗಾವಿಯಲ್ಲಿ ನಡೆಯುವ ಗಣೇಶ ಉತ್ಸವ, ರಾಜ್ಯೋತ್ಸವ ಹಾಗೂ ದುರ್ಗಾಮಾತಾ ದೌಡ್ನಲ್ಲಿ ಸಾವಿರಾರು ಜನ ಪಾಲ್ಗೊಲ್ಳುವುದು ವಿಶೇಷವಾಗಿದೆ. ದೌಡ್ ಉದ್ದಕ್ಕೂ ಪೊಲೀಸ್ ಬಂದೋಬಸ್ತ್ ಸಹ ನಿಯೋಜನೆ ಮಾಡಲಾಗಿರುತ್ತದೆ. ಶ್ರದ್ಧಾ, ಭಕ್ತಿಯಿಂದ ನವರಾತ್ರಿಯ ಒಂಬತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 am, Sat, 12 October 24