ಬೆಳಗಾವಿಯಲ್ಲಿ ಭೀಕರ ಬರ: 12 ಆರ್​ಒ ಪ್ಲಾಂಟ್​ಗಳು ಬಂದ್, ಕೊಳವೆ ಬಾವಿಗಳಲ್ಲೂ ನೀರಿಲ್ಲ

ಬೆಳಗಾವಿಯ ವಿವಿಧ ಭಾಗಗಳಲ್ಲಿ ‌ತೆರೆಯಲಾಗಿದ್ದ 12 ಆರ್‌ಒ ಪ್ಲಾಂಟ್​ಗಳು ತಾಂತ್ರಿಕ ಸಮಸ್ಯೆ, ನಿರ್ವಹಣೆ ಇಲ್ಲದೇ ಬಂದ್ ಆಗಿವೆ. ಕಳೆದ ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರಿ ಘಟಕಗಳು ತುಕ್ಕು ಹಿಡಿದಿವೆ. ಮತ್ತೊಂದೆಡೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮಸ್ಥರು ಹನಿ ನೀರಿಗಾಗಿಯೂ ಪರದಾಡುತ್ತಿದ್ದಾರೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಬಂದಿದೆ.

ಬೆಳಗಾವಿಯಲ್ಲಿ ಭೀಕರ ಬರ: 12 ಆರ್​ಒ ಪ್ಲಾಂಟ್​ಗಳು ಬಂದ್, ಕೊಳವೆ ಬಾವಿಗಳಲ್ಲೂ ನೀರಿಲ್ಲ
ಆರ್​ಒ ಪ್ಲಾಂಟ್
Edited By:

Updated on: May 17, 2024 | 9:27 AM

ಬೆಳಗಾವಿ, ಮೇ.17: ಗಡಿ ಜಿಲ್ಲೆಯಲ್ಲಿ ಭೀಕರ ಬರದ ಎಫೆಕ್ಟ್ ಜೋರಾಗಿದೆ (Water Crisis). ಸಪ್ತ ನದಿಗಳು ಇರೋ ಬೆಳಗಾವಿ ಜಿಲ್ಲೆಯಲ್ಲಿ ಜಲಕ್ಷಾಮ ಎದುರಾಗಿದೆ. ಜಿಲ್ಲೆಯ ಹತ್ತಾರು ಗ್ರಾಮದಲ್ಲಿ ದಿನವೂ ಕುಡಿಯುವ ನೀರಿಗಾಗಿ ಮೈಲುಗಟ್ಟಲೇ ತಾಯಂದಿರು ನಡೆದುಕೊಂಡು ಹೋಗುವಂತಾಗಿದೆ. ಅದರಲ್ಲೂ ಬೆಳಗಾವಿ (Belagavi) ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನೀರಿಗಾಗಿ ಪರದಾಟ ಹೇಳ ತೀರದಂತಾಗಿದೆ. ಮತ್ತೊಂದೆಡೆ ಭೀಕರ ಬರದಲ್ಲಿ ಜನರ ದಾಹ ತನಿಸಬೇಕಿದ್ದ ಶುದ್ದ ನೀರಿನ ಘಟಕಗಳು ಬಂದ್‌ ಆಗಿವೆ.

ಬೆಳಗಾವಿಯ ವಿವಿಧ ಭಾಗಗಳಲ್ಲಿ ‌ತೆರೆಯಲಾಗಿದ್ದ 12 ಆರ್‌ಒ ಪ್ಲಾಂಟ್​ಗಳು ತಾಂತ್ರಿಕ ಸಮಸ್ಯೆ, ನಿರ್ವಹಣೆ ಇಲ್ಲದೇ ಬಂದ್ ಆಗಿವೆ. ಕಳೆದ ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರಿ ಘಟಕಗಳು ತುಕ್ಕು ಹಿಡಿದಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಲಕ್ಷಾಂತರ ರೂ ವೆಚ್ಚದಲ್ಲಿ ಪ್ರಾರಂಭಿಸಿದ್ದ ಘಟಕಗಳು ಬಂದ್ ಆಗಿವೆ. ನೀರಿನ ಸಮಸ್ಯೆಯನ್ನ ಬಗೆಹರಿಸದ ಪಾಲಿಕೆ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಕೆಲವೊಂದು ವಾರ್ಡ್​ಗೆ ಪಾಲಿಕೆ ವಾರಕ್ಕೊಂದು ಬಾರಿ ನೀರು ಬಿಡ್ತಿದೆ. ಶುದ್ದ ನೀರಿನ ಘಟಕ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಸ್ಮಾರ್ಟ್ ಸಿಟಿ ಹಾಗೂ ಖಾಸಗಿ ಕಂಪನಿಯಿಂದ ನಿರ್ಮಾಣ ಆಗಿರೋ 14 ಆರ್‌ಒ ಪ್ಲಾಂಟ್​ಗಳ ಪೈಕಿ ಎರಡೂ ಪ್ಲಾಂಟ್ ಅಷ್ಟೆ ವರ್ಕಿಂಗ್​ನಲ್ಲಿವೆ. ಉಳಿದ 12 ಪ್ಲಾಂಟ್​ಗಳು ಬಂದ್ ಆಗಿ ಮೂರು ವರ್ಷ ಕಳೆದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: ಉತ್ತರ ಕನ್ನಡ: ಮನವಿಗೆ ಸ್ಪಂದಿಸದ ಆಡಳಿತ, ಹಾರವಾಡ ಗ್ರಾಮದಲ್ಲಿ ಮಹಿಳೆಯರಿಂದಲೇ ನಿರ್ಮಾಣವಾಯ್ತು ತಾತ್ಕಾಲಿಕ ಬಸ್ ನಿಲ್ದಾಣ

ಜವಾಟಗಲ್ಲಿ, ಬೋಗಾರೆಸ್, ಶ್ರೀನಗರ ಗಾರ್ಡನ್, ಅಂಬೇಡ್ಕರ್ ಗಾರ್ಡನ್, ವಡಗಾಂವ, ಟಿಳಕವಾಡಿ, ಶಹಾಪುರ, ಶಿವ ಬಸವನಗರ, ರಾಮತೀರ್ಥ ನಗರ, ಮಹಾಂತೇಶನಗರ, ಉದ್ಯಮಬಾಗ್, ಸದಾಶಿವನಗರದಲ್ಲಿ ಘಟಕಗಳು ಬಂದ್ ಆಗಿವೆ. ಡಿಸಿ ಕಚೇರಿ ಮತ್ತು ಸಿವಿಲ್ ಆಸ್ಪತ್ರೆಯಲ್ಲಿ ಮಾತ್ರ ಘಟಕಗಳು ವರ್ಕಿಂಗ್​​ನಲ್ಲಿವೆ.

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮಸ್ಥರು ಹನಿ ನೀರಿಗಾಗಿಯೂ ಪರದಾಡುತ್ತಿದ್ದಾರೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ಪ್ರತಿ ವರ್ಷ ಬೇಸಿಗೆ ಬಂದ್ರೆ ಸಾಕು ಕುಡಿಯುವ ನೀರಿಗೆ ಗ್ರಾಮಸ್ಥರು ಪರಿತಪ್ಪಿಸಬೇಕು. ಯಾಕೆಂದರೆ ಜಲ‌ಮೂಲಗಳಾದ ಬಾವಿ, ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ. ಹೀಗೆ ಇದೀಗ ಆರು ಬೋರ್ ವೆಲ್ ಗಳು ಬತ್ತಿ ಹೋಗಿದ್ದು ಗ್ರಾಮದಿಂದ ಎರಡು ಕಿಲೋಮೀಟರ್ ದೂರದವರೆಗೂ ನಡೆದುಕೊಂಡು ಹೋಗಿ ನೀರು ತೆಗೆದುಕೊಂಡು ಬರುವ ಸ್ಥಿತಿ ಇದೆ.

ಬೆಳಗ್ಗೆಯಿಂದಲೇ ಸಂಜೆ ವರೆಗೂ ಕುಟುಂಬದ ಓರ್ವ ವ್ಯಕ್ತಿ ಬಿಂದಿಗೆ ಹಿಡಿದುಕೊಂಡು ಹೋಗಿ ಮನೆಗೆ ನೀರು ತರಬೇಕು. ಮಕ್ಕಳು, ಮಹಿಳೆಯರಿಗೆ ಎಲ್ಲಾ ಕೆಲಸವನ್ನ ಬಿಟ್ಟು ನೀರು ತುಂಬುವುದೇ ದೊಡ್ಡ ಕೆಲಸವಾಗಿದೆ. ತಾಯಂದಿರು ತಲೆ ಮೇಲೆ ಬಿಂದಿಗೆ ಹೊತ್ತುಕೊಂಡು ನೀರು ತುಂಬಿದ್ರೆ. ಮತ್ತೆ ಕೆಲವರು ಸೈಕಲ್, ಬೈಕ್ ಮೇಲೆ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೋಗುವ ದೃಶ್ಯಗಳು ಕಣ್ಣಿಗೆ ಕಾಣಸಿಗುತ್ತವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ