ಉತ್ತರ ಕನ್ನಡ: ಮನವಿಗೆ ಸ್ಪಂದಿಸದ ಆಡಳಿತ, ಹಾರವಾಡ ಗ್ರಾಮದಲ್ಲಿ ಮಹಿಳೆಯರಿಂದಲೇ ನಿರ್ಮಾಣವಾಯ್ತು ತಾತ್ಕಾಲಿಕ ಬಸ್ ನಿಲ್ದಾಣ
ಬಸ್ ನಿಲ್ದಾಣ ಕೆಡವಿ ಹಾಕಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಮಾಡಿ ಸಾಕಾಗಿ ಹೋದ ಅಂಕೋಲಾ ತಾಲೂಕಿನ ಹಾರವಾಡದ ಮಹಿಳೆಯರು ತಾವೇ ಸ್ವತಃ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಮಾಡಿ ಆಡಳಿತಕ್ಕೆ ಚಾಟಿ ಬೀಸಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಬಸ್ಗಾಗಿ ತಾಸುಗಟ್ಟಲೇ ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಹಾರವಾಡ ಕ್ರಾಸ್ನಲ್ಲಿತ್ತು. ಇದಕ್ಕೀಗ ತಾತ್ಕಾಲಿಕ ಮುಕ್ತಿ ದೊರೆತಿದೆ.
ಕಾರವಾರ, ಮೇ 17: ಒಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ (National Higway) ಉರಿಬಿಸಿಲಿನಲ್ಲಿ ಬಸ್ಗಾಗಿ ಕಾಯುತ್ತಿರುವ ಮಹಿಳೆಯರು. ಇನ್ನೊಂದೆಡೆ ನಾರಿಯರೇ ಒಗ್ಗಟ್ಟಾಗಿ ತಾತ್ಕಾಲಿಕ ಬಸ್ ತಂಗುದಾಣ ನಿರ್ಮಿಸುತ್ತಿರುವ ದೃಶ್ಯ. ಇದು ಕಂಡುಬಂದದ್ದು ಉತ್ತರಕನ್ನಡ ಜಿಲ್ಲೆಯ (Uttara Kannada District) ಅಂಕೋಲಾ ತಾಲೂಕಿನ ಹಾರವಾಡ (Harwada) ಕ್ರಾಸ್ ಬಳಿ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ 10 ವರ್ಷಗಳಿಂದ ನಡೆಯುತ್ತಿದೆ. ಹೈವೆಗಾಗಿ ಸಂಬಂಧಪಟ್ಟ ಐಆರ್ಬಿ ಕಂಪನಿ ಅಕ್ಕಪಕ್ಕದ ಜಮೀನನ್ನು ಸ್ವಾಧಿನಪಡಿಸಿಕೊಂಡಿತ್ತು. ಆಗ ಇದ್ದ ಬಸ್ ತಂಗುದಾಣಗಳನ್ನೆಲ್ಲ ನೆಲಸಮ ಮಾಡಿತ್ತು. ಆದರೆ ಈವರೆಗೂ ಆಯಾ ಗ್ರಾಮದ ನಾಗರಿಕರಿಗೆ ಮಾಡಬೇಕಾದ ಬಸ್ ತಂಗುದಾಣ ಮಾಡಿಲ್ಲ.
ಹೀಗಾಗಿ ಗ್ರಾಮೀಣ ಪ್ರದೇಶದ ನಾಗರಿಕರು ಉರಿಬಿಸಿಲಿನಲ್ಲಿ ನಿಂತು ಬಸ್ಗಾಗಿ ಕಾಯಬೇಕಾಗಿದೆ. ಹಾರವಾಡ ಕ್ರಾಸ್ನಲ್ಲಿದ್ದ ಬಸ್ ನಿಲ್ದಾಣ ಮಾಡದೇ ನಿರ್ಲಕ್ಷ ತೋರಿದ್ದರಿಂದ ಬಿಸಲ ಬೇಗೆಗೆ ಪ್ರತಿ ದಿನ ಸಂಚಾರ ಮಾಡುವ ಗ್ರಾಮದ ಮಹಿಳೆಯರೇ ಒಟ್ಟಾಗಿ ತೆಂಗಿನ ಸೋಗೆಯಿಂದ ತಂಗುದಾಣ ನಿರ್ಮಿಸುವ ಮೂಲಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಾಚಿಕೆ ಪಡುವಂತೆ ಮಾಡಿದ್ದಾರೆ.
ಹಾರವಾಡ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಈ ಭಾಗದಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ಗಾಗಿ ತಾಸುಗಟ್ಟಲೇ ಕಾಯಬೇಕು. ಪ್ರತಿ ದಿನ ಇಲ್ಲಿನ ಮಹಿಳೆಯರು ಉದ್ಯೋಗಕ್ಕಾಗಿ ಕಾರವಾರಕ್ಕೆ ತೆರಳುತ್ತಾರೆ. ಇನ್ನು ಇರುವ ಬಸ್ ನಿಲ್ದಾಣ ಕೆಡವಿದ್ದರಿಂದ ಬಸ್ಗಳನ್ನು ಸಹ ನಿಲ್ಲಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ಮಹಿಳೆಯರು ಬಸ್ಗಾಗಿ ತಾಸುಗಟ್ಟಲೇ ಬಿಸಿಲಿನಲ್ಲಿ ಕಾಯಬೇಕಾಗುತ್ತದೆ.
ಕ್ಯಾರೇ ಅನ್ನದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ
ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಹ ನೀಡಲಾಗಿತ್ತು. ಆದರೆ ಕಣ್ಣು ಕಿವಿ ಮುಚ್ಚಿಕೊಂಡಿದ್ದ ಆಡಳಿತ ಮಾತ್ರ ಮನವಿಗೆ ಹತ್ತು ವರ್ಷಗಳಿಂದ ಸ್ಪಂದಿಸಲೇ ಇಲ್ಲ. ಹೀಗಾಗಿ ಇಲ್ಲಿ ಪ್ರಯಾಣಿಸುವ ಮಹಿಳೆಯರೇ, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಹಣವಿಲ್ಲದಿದ್ದರೂ ಊರಿನಲ್ಲಿ ಬಿದ್ದ ತೆಂಗಿನ ಸೋಗೆಯನ್ನು ತಂದು ತಂಪಿನ ತಾತ್ಕಾಲಿಕ ನಿಲ್ದಾಣ ನಿರ್ಮಿಸಿ ಬೋರ್ಡ ಸಹ ತೂಗುಹಾಕಿದ್ದಾರೆ. ಮುಂದೆ ಮಳೆ ಬಂದರೆ ಈ ತಾತ್ಕಾಲಿಕ ನಿಲ್ದಾಣವೂ ಬಿದ್ದು ಹೋಗುವುದರಿಂದ ಶೀಘ್ರದಲ್ಲೇ ಬಸ್ ನಿಲ್ದಾಣ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ನೀರಿನ ಅಭಾವ; 45 ಗ್ರಾಮಗಳಲ್ಲಿ ವಾರಕ್ಕೊಮ್ಮೆಯೂ ಸಿಗ್ತಿಲ್ಲ ಕುಡಿಯುವ ನೀರು
ಜಿಲ್ಲೆಯ ಕರಾವಳಿಯಲ್ಲಿ ಚತುಷ್ಪತ ಹೆದ್ದಾರಿ ಅಗಲೀಕರಣದಿಂದಾಗಿ ಕರಾವಳಿ ಹೆದ್ದಾರಿ ಭಾಗದಲ್ಲಿ ಬರುವ ಗ್ರಾಮಗಳಿಗೆ ಈವರೆಗೂ ನಿಯಮದ ಪ್ರಕಾರ ನಿರ್ಮಾಣವಾಗಬೇಕಾದ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡುವಲ್ಲಿ ಐಆರ್ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿವೆ. ಹೀಗಿರುವಾಗ ಮನವಿ ಕೊಟ್ಟು ಹತ್ತು ವರ್ಷದಿಂದ ಕಾದು ಸುಸ್ತಾದ ಹಾರವಾಡದ ಗ್ರಾಮದ ಬಡ ಮಹಿಳೆಯರು ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ