AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ ಕೇಸ್​ಗೆ ಇಡಿ ಎಂಟ್ರಿ, ಆರೋಪಿ​ ಖಾತೆ ಸೀಜ್

2022ರ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸಿದೆ. ಐಸಿಸ್ ಸಂಘಟನೆಯ ಹಣಕಾಸು ವ್ಯವಹಾರ ಮತ್ತು ಕ್ರಿಪ್ಟೋ ಕರೆನ್ಸಿ ಮೂಲಕ ಹಣದ ವರ್ಗಾವಣೆಯನ್ನು ED ಪತ್ತೆ ಹಚ್ಚುತ್ತಿದೆ. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಮತ್ತು ಭಾರತಾದ್ಯಂತ ಐಸಿಸ್ ಚಟುವಟಿಕೆಗಳನ್ನು ವಿಸ್ತರಿಸುವ ಯೋಜನೆಯ ಬಗ್ಗೆ ತನಿಖೆ ನಡೆಯುತ್ತಿದೆ.

ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ ಕೇಸ್​ಗೆ ಇಡಿ ಎಂಟ್ರಿ, ಆರೋಪಿ​ ಖಾತೆ ಸೀಜ್
ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ ಪ್ರಕರಣದ ಆರೋಪಿ ಶಾರೀಕ್​
Shivaprasad B
| Updated By: ವಿವೇಕ ಬಿರಾದಾರ|

Updated on:Aug 06, 2025 | 9:47 PM

Share

ಬೆಂಗಳೂರು, ಆಗಸ್ಟ್​ 06: ಮಂಗಳೂರಿನ ಕಂಕನವಾಡಿ ಬಳಿ 2022ರಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ (ED) ಎಂಟ್ರಿ ಕೊಟ್ಟಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ. ಕುಕ್ಕರ್‌ ಬಾಂಬ್‌ ಸ್ಫೋಟ (Mangalore cooker bomb blast) ಪ್ರಕರಣದ ಆರೋಪಿ ಸೈಯದ್ ಯಾಸೀನ್​ನ ಬ್ಯಾಂಕ್​ ಖಾತೆಯನ್ನು ಜಪ್ತಿ ಮಾಡಲಾಗಿದೆ.

ಉಗ್ರ ಸಂಘಟನೆಯನ್ನ ಭಾರತದಾದ್ಯಂತ ವಿಸ್ತರಿಸುವುದು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದು ಐಸಿಸ್ ಸಂಘಟನೆ ಗುರಿಯಾಗಿತ್ತು. ಐಸಿಸ್​ನ ಹ್ಯಾಂಡ್ಲರ್​ಗಳಿಗೆ ಆನ್ಲೈನ್​ನಲ್ಲಿ ಟೆಲಿಗ್ರಾಂ ಆ್ಯಪ್ ಮೂಲಕ ತರಬೇತಿ ನೀಡಲಾಗುತ್ತಿತ್ತು. ಆರೋಪಿ ಮಾಜ್ ಮುನೀರ್ ಕ್ರಿಪ್ಟೋ ಕರೆನ್ಸಿಯನ್ನ ಏಜೆಂಟ್ಸ್​ಗಳ ಮೂಲಕ ಮಹಮ್ಮದ್ ಶಾರೀಕ್​ಗೆ ಹಣ ತಲುಪಿಸಿದ್ದನು. ಪ್ರಕರಣ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಅಲಿಯಾಸ್​ ಪ್ರೇಮ್ ರಾಜ್ ಕೂಡ ಕ್ರಿಪ್ಟೊ ಕರೆನ್ಸಿ ಮೂಲಕವೇ ಇತರೆ ಆರೋಪಿಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದನು.

ಮೊಹಮ್ಮದ್​ ಶಾರೀಕ್ 2 ಲಕ್ಷ 68 ಸಾವಿರ ಹಣವನ್ನ ಕ್ರಿಪ್ಟೋ ಕರೆನ್ಸಿ ಏಜೆಂಟ್ಸ್​ಗಳ ಮೂಲಕ ಆರೋಪಿಗಳಿಗೆ ವರ್ಗಾವಣೆ ಮಾಡಿದ್ದನು. ಈ‌ ಹಣದಿಂದ ಆರೋಪಿಗಳು ಆನ್ಲೈನ್​ನಲ್ಲಿ ಐಇಡಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿ ಖರೀದಿಸುತ್ತಿದ್ದರು. ಕರ್ನಾಟಕದ ಮೈಸೂರು, ಕೇರಳ, ತಮಿಳುನಾಡುನಲ್ಲೂ ಐಇಡಿ ಬಾಂಬ್ ಇಡಲು ಪ್ಲಾನ್ ಮಾಡಲಾಗಿತ್ತು. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿಯಲ್ಲೂ ಆಟೋದಲ್ಲಿ ಬ್ಲಾಸ್ಟ್ ಮಾಡುವ ಪ್ಲಾನ್ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಉಗ್ರರಿಗೆ ಐಸಿಸ್​ ನಂಟು: ಮೆಜೆಸ್ಟಿಕ್, ಯಶವಂತಪುರದಲ್ಲಿ ಬಸ್​ ಸ್ಫೋಟಗೊಳಿಸುವಂತೆ ಟಾಸ್ಕ್

ಏನಿದು ಪ್ರಕರಣ

2022ರ ನವೆಂಬರ್​19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಐಇಡಿ ಕುಕ್ಕರ್‌ ಬಾಂಬ್‌ ಬಾಂಬ್ ಸ್ಫೋಟಗೊಂಡಿತ್ತು. ಘಟನೆ ಸಂಬಂಧ ಆಟೋ ಚಾಲಕ ಪುರುಷೋತ್ತಮನ ದೂರಿನನ್ವಯ ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ನಂತರ, ರಾಷ್ಟ್ರೀಯ ತನಿಖಾ ದಳ (NIA) ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Wed, 6 August 25