AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟೀಷರ ಕಾಲದಿಂದ ಬಳಸುತ್ತಿದ್ದ ಟೋಪಿಗೆ ಕೊಕ್, ಪೊಲೀಸರಿಗೆ ಹೊಸ ಬಣ್ಣದ ಕ್ಯಾಪ್​​ಗೆ ಸರ್ಕಾರ ಅಸ್ತು!

ಕರ್ನಾಟಕ ಪೊಲೀಸ್ ಇಲಾಖೆಯ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳು ಬಹಳ ವರ್ಷಗಳಿಂದ ಬ್ರಿಟಿಷ್ ಕಾಲದ ಟೋಪಿಗಳನ್ನು ಧರಿಸುತ್ತಿದ್ದಾರೆ. ಇದು ಆರೋಗ್ಯ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಹೊಸ ಪೀಕ್ ಕ್ಯಾಪ್‌ಗಳನ್ನು ನೀಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿತ್ತು. ಅದರಂತೆ ಇದೀಗ ರಾಜ್ಯ ಸರ್ಕಾರ, ಕ್ಯಾಪ್​ ಬದಲಾವಣೆ ಅನುಮತಿ ನೀಡಿದೆ. ಹಾಗಾದ್ರೆ ಹೊಸ ಕ್ಯಾಪ್ ಹೇಗಿದೆ?

ಬ್ರಿಟೀಷರ ಕಾಲದಿಂದ ಬಳಸುತ್ತಿದ್ದ ಟೋಪಿಗೆ ಕೊಕ್, ಪೊಲೀಸರಿಗೆ ಹೊಸ ಬಣ್ಣದ ಕ್ಯಾಪ್​​ಗೆ ಸರ್ಕಾರ ಅಸ್ತು!
Police Cap
ರಮೇಶ್ ಬಿ. ಜವಳಗೇರಾ
|

Updated on:Aug 06, 2025 | 10:19 PM

Share

ಬೆಂಗಳೂರು, (ಆಗಸ್ಟ್ 06): ಕರ್ನಾಟಕ ಪೊಲೀಸ್​ ಇಲಾಖೆಯ ಕಾನ್​ಸ್ಟೇಬಲ್‌ಗಳು ಧರಿಸುತ್ತಿರುವ ಬ್ರಿಟಿಷ್​ ಕಾಲದ ಟೋಪಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಟೋಪಿ ಬದಲಿಸುವಂತೆ ಹಲವು ವರ್ಷಗಳಿಂದಲೂ ಪೊಲೀಸ್ ಸಿಬ್ಬಂದಿ ಬೇಡಿಕೆಯಿಡುತ್ತಲೇ ಬಂದಿದ್ದರಾದರೂ ಇದುವರೆಗೂ ಬೇಡಿಕೆ ಈಡೇರಿಲ್ಲ. ಆದರೆ, ಇದೀಗ ಹಳೆಯ ಮಾದರಿಯ ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್​ ಕ್ಯಾಪ್​ ನೀಡುವುದರ ಕುರಿತು ಚರ್ಚೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳ ಕ್ಯಾಪ್ ಬದಲಾವಣೆಗೆ ಅನುಮತಿ ನೀಡಿದ್ದು, ನೇವಿ ಬ್ಲೂ ಪೀಕ್​ ಕ್ಯಾಪ್​ ಗಳನ್ನು (Navy blue peak cap )ವಿತರಿಸಲು ಸಹಮತಿ ನೀಡಿ ಆದೇಶ ಹೊರಡಿಸಿದೆ.

ಹೌದುಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್​​ ಟೇಬಲ್​​ ಗಳ ಸ್ಲೋಚ್ ಹ್ಯಾಟ್ ಬದಲಾವಣೆ ಹಿನ್ನಲೆಯಲ್ಲಿ ನೇವಿ ಬ್ಲೂ ಪೀಕ್​ ಕ್ಯಾಪ್​ ಗಳನ್ನು ವಿತರಿಸಲು ರಾಜ್ಯ ಸರ್ಕಾರ ಸಹಮತಿ ನೀಡಿ ಇಂದು (ಆಗಸ್ಟ್ 06) ಆದೇಶ ಹೊರಡಿಸಿದೆ. ಕ್ಯಾಪ್ ಖರೀದಿಸುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಕ್ಯಾಪ್ ಮಾದರಿ ಸಿದ್ದಪಡಿಸುವ ಕುರಿತು ಸಭೆ ನಾಳೆ (ಆಗಸ್ಟ್​ 07) ಕೆಎಸ್ ಆರ್ ಪಿ ಎಡಿಜಿಪಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಇದನ್ನೂ ಓದಿ: ಸದ್ಯದಲ್ಲೇ ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಕರ್ನಾಟಕ ಪೊಲೀಸರ ತಲೆ ಅಲಂಕರಿಸಲಿದೆ ಸ್ಮಾರ್ಟ್​ ಹ್ಯಾಟ್​

ತೆಲಂಗಾಣ ಮಾದರಿಯ ಕ್ಯಾಪ್​ ಆಯ್ಕೆ

ಈಗಾಗಲೇ ಯಾವ ಬಣ್ಣದ ಹಾಗೂ ಯಾವ ಮಾದರಿ ಕ್ಯಾಪ್ ಇರಬೇಕೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಆದಿಯಾಗಿ ಇತರೆ ಹಿರಿ ಪೊಲೀಸ್ ಅಧಿಕಾರಿಗಳು ಚರ್ಚೆ ಮಾಡಿದ್ದು, ಕೆಲ ಮಾದರಿ ಕ್ಯಾಪ್ಗಳನ್ನು ಸಹ ಖುದ್ದಾಗಿ ಪರಿಶೀಲಿಸಿದ್ದಾರೆ. ವಿವಿಧ ರಾಜ್ಯಗಳ ಕ್ಯಾಪ್​​ ಗನ್ನು ಸಿಎಂ ಪರಿಶೀಲಿಸಿದ್ದು, ತೆಲಂಗಾಣ ಮಾದರಿಯ ನೇವಿ ಬ್ಲೂ ಬಣ್ಣದ ಕ್ಯಾಪ್‌ ಆಯ್ಕೆ ಮಾಡಿದ್ದಾರೆ. ಹೀಗಾಗಿ  ಸದ್ಯದಲ್ಲಿಯೇ ಹೊಸ ಬಣ್ಣದ ಮಾದರಿಯ ಕ್ಯಾಪ್​ ರಾಜ್ಯ ಪೊಲೀಸ್‌ ಕಾನ್ಸ್‌ಟೆಬಲ್‌ಗಳ ತಲೆಗೆ ಬರಲಿದೆ. ಈ ಮೂಲಕ ಬ್ರಿಟೀಷರ ಕಾಲದಿಂದ ಬಳಸುತ್ತಿದ್ದ ಟೋಪಿಗಳು (ಸ್ಲೋಚ್‌ ಹ್ಯಾಟ್‌) ನೇಪಥ್ಯಕ್ಕೆ ಸರಿಯಲಿವೆ.

ಪೊಲೀಸ್ ಕಾನ್​ಸ್ಟೇಬಲ್‌ಗಳ ಕ್ಯಾಪ್ ಬದಲಾವಣೆಯ ಕುರಿತ ಚರ್ಚೆ ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಕಾನ್​ಸ್ಟೇಬಲ್‌ಗಳ ಕ್ಯಾಪ್ ಬದಲಾವಣೆಯ ಕುರಿತ ಸಾಧಕ ಭಾದಕಗಳ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಆದರೆ, ಅದಾಗಲೇ ಲಕ್ಷಾಂತರ ಸ್ಲೋಚ್ ಹ್ಯಾಟ್‌ಗಳು ಸಿದ್ಧವಾಗಿದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ಪೀಕ್ ಕ್ಯಾಪ್ ವಿತರಣೆಗೆ ಒಮ್ಮತದ ಅಭಿಪ್ರಾಯ ಮೂಡಿರಲಿಲ್ಲ. ಅಂತಿಮವಾಗಿ ಇದೀಗ ಪೀಕ್ ಕ್ಯಾಪ್ ವಿತರಣೆಗೆ ರಾಜ್ಯ ಸರ್ಕಾರ ಸಹಮತಿಸಿದ್ದು,  ಕ್ಯಾಪ್ ಯಾವ ರೀತಿ ಇರುತ್ತೆ ಎನ್ನುವುದು ನಾಳೆ ಗೊತ್ತಾಗಲಿದೆ.

ಸ್ಲೋಚ್ ಹ್ಯಾಟ್ ಬದಲಾವಣೆಗೆ ಕಾರಣವೇನು?

ಹಳೆ ಮಾದರಿಯ ಹ್ಯಾಟ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು‌ ಉಂಟಾಗುತ್ತಿವೆ ಎನ್ನಲಾಗುತ್ತಿದೆ. ಸ್ಲೋಚ್ ಹ್ಯಾಟ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಪ್ರತಿಭಟನೆ, ರ್‍ಯಾಲಿ, ಅಪರಾಧಿಗಳನ್ನು ಬೆನ್ನತ್ತುವ ಸಂದರ್ಭಗಳಲ್ಲಿ ಸ್ಲೋಚ್ ಹ್ಯಾಟ್ ಧರಿಸಿ ಕರ್ತವ್ಯ ನಿರ್ವಹಿಸುವುದು ಕಿರಿಕಿರಿಯುಂಟು ಮಾಡುತ್ತಿದೆ. ಹ್ಯಾಟ್ ಕೆಳಗೆ ಬಿದ್ದರೆ ಇಲಾಖೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಹಳೆ ಮಾದರಿಯ ಹ್ಯಾಟ್ ಬದಲು ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವಂತಹ ಎಲಾಸ್ಟಿಕ್ ಮಾದರಿಯ ಕ್ಯಾಪ್‌ಗಳನ್ನು ನೀಡಿದರೆ ಉತ್ತಮ ಎನ್ನುವುದು ಪೊಲೀಸ್ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿತ್ತು.

ಸ್ಲೋಚ್ ಕ್ಯಾಪ್ ಇತಿಹಾಸ

ಕರ್ನಾಟಕದಲ್ಲಿ ಪೊಲೀಸ್ ಕ್ಯಾಪ್‌ಗಳಿಗೆ ಶತಮಾನದ ಇತಿಹಾಸವಿದೆ. ಮೈಸೂರು ಮಹಾರಾಜರ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಕಿ ಅಂಗಿ, ಅರ್ಧ ಪ್ಯಾಂಟ್, ಬಣ್ಣದ ಪೇಟ ಮತ್ತು ಕಂದು ಬಣ್ಣದ ಬೂಟುಗಳನ್ನು ಧರಿಸಲಾಗುತ್ತಿತ್ತು. ರಾಜಪ್ರಭುತ್ವ ಅಂತ್ಯವಾದ ಬಳಿಕವೂ ಪೊಲೀಸರ ಸಾಂಪ್ರದಾಯಿಕ ಶೈಲಿಯ ಉಡುಗೆಯನ್ನು ಉಳಿಸಿಕೊಳ್ಳಲಾಯಿತು. ನಂತರದ ದಿನಗಳಲ್ಲಿ ಅರ್ಧ ಪ್ಯಾಂಟ್ ಬದಲು ಪೂರ್ಣ ಪ್ರಮಾಣದ ಪ್ಯಾಂಟ್ ಹಾಗೂ ನೀಲಿ ಮತ್ತು ಕೆಂಪು ಬಣ್ಣಗಳುಳ್ಳ ಟರ್ಬನ್ ಮಾದರಿಯ ಕ್ಯಾಪ್ ಪರಿಚಯಿಸಲಾಯಿತು. ಆದರೆ ರಾಜ್ಯ ಪೊಲೀಸ್ ಕಾನ್ಸ್‌ಟೇಬಲ್‌ಗಳು ಪ್ರಸ್ತುತ ಬಳಸುತ್ತಿರುವ ಸ್ಲೋಚ್ ಕ್ಯಾಪ್‌ಗಳನ್ನು ಆರ್.ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1980-83) ಆರಂಭಿಸಲಾಯಿತು. ಅಲ್ಲಿಯವರೆಗೂ ಇದ್ದ ನೀಲಿ ಬಣ್ಣದ ಕೆಂಪು ಪಟ್ಟಿಗಳಿದ್ದ ಟರ್ಬನ್‌ಗಳ ಬದಲಿಗೆ ಸ್ಲೋಚ್ ಕ್ಯಾಪ್‌ಗಳನ್ನು ದೈನಂದಿನ ಕರ್ತವ್ಯದ ಸಂದರ್ಭಗಳಿಗಾಗಿ ಪರಿಚಯಿಸಲಾಯಿತು. ಸದ್ಯ ಪರೇಡ್ ಮತ್ತಿತರ ಸಂದರ್ಭಗಳಲ್ಲಿ ಮಾತ್ರವೇ ಟರ್ಬನ್‌ಗಳನ್ನು ಬಳಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:18 pm, Wed, 6 August 25