ಸರ್ಕಾರದ ವಿರುದ್ಧ ಸಾರಿಗೆ ಮುಖಂಡರು ಮತ್ತೆ ಕೆಂಡ: ಈ ಬಾರಿಯ ಸಿಟ್ಟಿಗೆ ಇದೇ ಕಾರಣ
ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆರೆ, ಹೈಕೋರ್ಟ್ ಆದೇಶದ ಹಿನ್ನೆಲೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಮುಷ್ಕರ ಒಂದೇ ದಿನದಲ್ಲಿ ಮುಂದೂಡಿಕೆಯಾಗಿದ್ದರೂ, ಮುಷ್ಕರದಲ್ಲಿ ಭಾಗಿಯಾಗಿದ್ದವರ ಮೇಲೆ ಸರ್ಕಾರ ನೋಟಿಸ್ ನೀಡಿ ಅಮಾನತು ಮತ್ತು ವಜಾಗೊಳಿಸಲು ಮುಂದಾಗಿದ್ದು, ಇದಕ್ಕೆ ಸಾರಿಗೆ ಮುಖಂಡರು ಕೆಂಡಾಮಂಡಲರಾಗಿದ್ದಾರೆ.

ಬೆಂಗಳೂರು, ಆಗಸ್ಟ್ 7: ಸಾರಿಗೆ ಮುಖಂಡರು ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ನೀಡಬೇಕು, 01-01-2024 ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿ ಆಗಸ್ಟ್ 5 ರಿಂದ ಮುಷ್ಕರ ಮಾಡುತ್ತೇವೆಂದು ಮುಖ್ಯಮಂತ್ರಿಗಳಿಗೆ ಜುಲೈ 16 ರಂದು ನೋಟಿಸ್ ನೀಡಿದ್ದರು. ಈ ಹಿನ್ನೆಲೆ ಸಿಎಂ ಆಗಸ್ಟ್ 4 ರಂದು ಮುಖಂಡರ ಸಭೆ ಕರೆದಿದ್ದರು. ಸಭೆಯಲ್ಲಿ ಸಿಎಂ, ‘38 ತಿಂಗಳ ಬದಲಿಗೆ 14 ತಿಂಗಳ ಅರಿಯರ್ಸ್ ಕೊಡುತ್ತೇವೆ, ವೇತನ ಪರಿಷ್ಕರಣೆ ಬಗ್ಗೆ ಮುಂದೆ ಚರ್ಚೆ ಮಾಡೋಣ’ ಎಂದಿದ್ದರು. ಈ ಹಿನ್ನೆಲೆ ಸಾರಿಗೆ ನೌಕರರು ಆಗಸ್ಟ್ 5 ರಂದು ಬೆಳಿಗ್ಗೆಯಿಂದ ಸಾವಿರಾರು ಬಸ್ಗಳ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ (Karnataka Transport Strike) ಮುಂದಾಗಿದ್ದರು. ಮುಷ್ಕರವನ್ನು ಕೈಬಿಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, ಯಾರೆಲ್ಲ ಮುಷ್ಕರದಲ್ಲಿ ಭಾಗಿಯಾಗಿದ್ದರೋ, ಅಂತಹ ಸಾವಿರಾರು ನೌಕರರಿಗೆ ಸಾರಿಗೆ ನಿಗಮಗಳು ವಾಟ್ಸ್ಆ್ಯಪ್ ಮೂಲಕ ನೋಟಿಸ್ ನೀಡಿವೆ.
ಮುಷ್ಕರದಲ್ಲಿ ಭಾಗಿಯಾದ ಸಾರಿಗೆ ನೌಕರರನ್ನು ಆಗಸ್ಟ್ 7 ರಿಂದ ಅಮಾನತು ಮತ್ತು ವಜಾಗೊಳಿಸಲು ಪಟ್ಟಿ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಪೋಗಳ ಮುಂದೆ ಪ್ರತಿಭಟನೆ, ಮತ್ತೆ ಬಂದ್ ಎಚ್ಚರಿಕೆ
ನೋಟಿಸ್ ನೀಡುತ್ತಿರುವ ಪ್ರತಿಕ್ರಿಯಿಸಿದ ಸಾರಿಗೆ ನೌಕರರ ಮುಖಂಡ ಜಗದೀಶ್, ನೋಟಿಸ್ ವಾಪಸ್ ಪಡೆಯಬೇಕು, ಇಲ್ಲಾಂದರೆ ಪ್ರತಿ ಡಿಪೋ ಮುಂದೆ ಪ್ರತಿಭಟನೆ ಮಾಡಿ ಡಿಪೋ ಬಂದ್ ಮಾಡುತ್ತೇವೆ. ಸರ್ಕಾರ ನಮ್ಮನ್ನು ಕರೆದು ಸಂಬಳ ಕೊಡಬೇಕು, ಇಲ್ಲಾಂದರೆ ಮತ್ತೆ ಸಾರಿಗೆ ಸ್ತಬ್ದವಾಗುತ್ತದೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ನೌಕರರ ಪರವಾಗಿ ನಿಲುತ್ತೇವೆ. ಇಂತಹದಕ್ಕೆ ಜಂಟಿ ಕ್ರಿಯಾ ಸಮಿತಿ ಬಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂ. ನಷ್ಟ
ಸಾರಿಗೆ ಮುಷ್ಕರದ ಹಿನ್ನೆಲೆ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಹಾಗೂ ಎನ್ಡಬ್ಲ್ಯುಕೆಆರ್ಟಿಸಿ ನಾಲ್ಕು ನಿಗಮಕ್ಕೂ ಕೋಟ್ಯಾಂತರ ರುಪಾಯಿ ನಷ್ಟ ಉಂಟಾಗಿದೆ. ನಾಲ್ಕು ನಿಗಮಗಳಲ್ಲಿ ಒಟ್ಟು 24,154 ಬಸ್ಸುಗಳಿವೆ. ಪ್ರತಿದಿನ 1 ಕೋಟಿ 15 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಇದರಿಂದ ನಾಲ್ಕು ನಿಗಮಕ್ಕೆ ಪ್ರತಿದಿನ ಸುಮಾರು 37 ಕೋಟಿ ರೂ. ಆದಾಯ ಬರುತ್ತದೆ. ಆದರೆ ಆಗಸ್ಟ್ 5 ರ ಮುಷ್ಕರದಿಂದಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಸ್ಗಳು ಸಂಚಾರ ಮಾಡಲಿಲ್ಲ. ಸುಮಾರು ಹತ್ತರಿಂದ ಹದಿನೈದು ಸಾವಿರ ಬಸ್ಸುಗಳು ಸಂಚಾರ ಮಾಡಿದರೂ ಮುಷ್ಕರ ಎಂಬ ಕಾರಣಕ್ಕೆ ಲಕ್ಷಾಂತರ ಪ್ರಯಾಣಿಕರು ಬಸ್ ಬರುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಬಸ್ ಸ್ಟ್ಯಾಂಡ್ಗಳತ್ತ ಬರಲೇ ಇಲ್ಲ. ಇದರಿಂದ ಅನೇಕ ಬಸ್ಗಳು ಖಾಲಿ ಖಾಲಿಯಾಗಿ ಸಂಚಾರ ಮಾಡಿದ್ದವು. ಇದರಿಂದ ನಾಲ್ಕು ನಿಗಮಕ್ಕೆ ಸುಮಾರು 20 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹೈಕೋರ್ಟ್ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಸಾರಿಗೆ ಬಸ್ಗಳು, ಪ್ರಯಾಣಿಕರು ಖುಷ್
ಒಟ್ಟಿನಲ್ಲಿ, ಸಾರಿಗೆ ನೌಕರರು ಅದೇನ್ ಪಾಪ ಮಾಡಿದರೋ ಗೊತ್ತಿಲ್ಲ, ಹಗಲು ರಾತ್ರಿ ನೂರಾರು ಕಿಮೀ ಟ್ರಾಫಿಕ್ನಲ್ಲಿ ಬಸ್ ಓಡಿಸಿ ಜನರಿಗೆ ಸೇವೆ ನೀಡುತ್ತಿದ್ದರೂ ಯಾವ ಸರ್ಕಾರ ಬಂದರೂ ವೇತನ ಬಾಕಿ ಕೊಡೆದೆ ಸತಾಯಿಸುತ್ತಿರುವುದಲ್ಲದೆ, ವೇತನ ಹೆಚ್ಚಳವನ್ನೂ ಮಾಡುತ್ತಿಲ್ಲ.







